ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟ ಹಿರಿಯ ನಾಯಕ, ವಿಜಯೇಂದ್ರಗೆ ನಡುಕ
ಯತ್ನಾಳ್ ಅವರ ಉಚ್ಛಾಟನೆಯಿಂದ ಸೈಲೆಂಟ್ ಆಗಿದ್ದ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ತಿಂಗಳಾಂತ್ಯಕ್ಕೆ ರಾಜ್ಯಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದರ ನಡುವೆ ಮತ್ತೆ ಈ ಕುರ್ಚಿ ಫೈಟ್ ಶುರುವಾಗಿದೆ. ಬಿಜೆಪಿಯ ಹಿರಿಯ ನಾಯಕ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇನ್ನೇನು ನನ್ನ ಕುರ್ಚಿ ಸೇಫ್ ಎಂದುಕೊಂಡಿದ್ದ ವಿಜಯೇಂದ್ರ ಅವರಿಗೆ ಇದೀಗ ರಾಜ್ಯಾಧ್ಯಕ್ಷ ಸ್ಥಾನ ಕೈತಪ್ಪುವ ಭೀತಿ ಶುರುವಾಗಿದೆ.
ಹೌದು, ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಶತಪ್ರಯತ್ನ ಮಾಡಿ ಹೈಕಮಾಂಡ್ ಬಾಗಿಲು ತಟ್ಟಿಯೂ ಬಂದಿದ್ದರು. ಆದರೆ ಕೊನೆಗೆ ಹೈಕಮಾಂಡ್ ಯತ್ನಾಳ್ ಅವರನ್ನೇ ಪಕ್ಷದಿಂದ ಉಚ್ಛಾಟಿಸುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನದ ಕಿತ್ತಾಟಕ್ಕೆ ಬ್ರೇಕ್ ಹಾಕಿತ್ತು. ಇದರಿಂದ ಯತ್ನಾಳ್ ಬಣದ ನಾಯಕರು ಕೂಡ ತಣ್ಣಗಾಗಿದ್ದರು. ಮತ್ತೊಂದೆಡೆ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರಿಸುವ ಸುಳಿವನ್ನೂ ಹೈಕಮಾಂಡ್ ನೀಡಿತ್ತು. ಹೀಗಾಗಿ ವಿಜಯೇಂದ್ರ ರಿಲೀಫ್ ಆಗಿ ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮತ್ತೊಬ್ಬ ಪ್ರಭಾವಿ ಹಾಗೂ ಹಿರಿಯ ನಾಯಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಿಮ್ಯಾಂಡ್ ಮಾಡಿರುವುದು ಸಂಚಲನ ಸೃಷ್ಟಿಸಿದೆ.

ಮಾಜಿ ಸಿಎಂ ಹಾಗೂ ಹಾಲಿ ಸಂಸದರೂ ಆಗಿರುವ ಬಸವರಾಜ ಬೊಮ್ಮಾಯಿ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಹೈಕಮಾಂಡ್ ನಾಯಕರ ಮುಂದೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳಿಂದು ತಿಳಿದುಬಂದಿದೆ. ಪಕ್ಷದಲ್ಲಿ ಹಿರಿಯ ನಾಯಕರೂ ಆಗಿರುವುದರಿಂದ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವುದರಿಂದ ಬೊಮ್ಮಾಯಿ ಅವರನ್ನು ಹೈಕಮಾಂಡ್ ಪರಿಗಣಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಲ್ಲಿ ಬಿಎಸ್ ಯಡಿಯೂರಪ್ಪ ಅವರ ಪಾತ್ರ ದೊಡ್ಡದು ಎನ್ನುವ ಮಾತಿದೆ. ಆದರೆ, ಕಳೆದ ಬಾರಿ ಯಡಿಯೂರಪ್ಪ ಅವರನ್ನೇ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದ ಹೈಕಮಾಂಡ್, ಬಸವರಾಜ ಬೊಮ್ಮಾಯಿ ಅವರನ್ನು ಹೊಸ ಸಿಎಂ ಎಂದು ಘೋಷಣೆ ಮಾಡಿತ್ತು. ಹಾಗಾಗಿ ಬೊಮ್ಮಾಯಿ ಅವರ ಬೇಡಿಕೆಯನ್ನು ನಾಯಕರು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಈ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣ ಕೂಡ ರಾಜ್ಯಾಧ್ಯಕ್ಷರ ಬದಲಾವಣೆಗೆ ಲಿಂಗಾಯತ ಅಸ್ತ್ರ ಪ್ರಯೋಗಿಸಲು ಪ್ಲ್ಯಾನ್ ಮಾಡಿಕೊಂಡಿತ್ತು. ಈ ಪೈಕಿ ಯತ್ನಾಳ್, ವಿ.ಸೋಮಣ್ಣ ಹಾಗೂ ಬಸವರಾಜ ಬೊಮ್ಮಾಯಿ ಅವರ ಹೆಸರು ಅಂತಿಮಗೊಂಡಿತ್ತು. ಈ ಮೂವರಲ್ಲಿ ಯಾರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೂ ಓಕೆ ಎಂಬ ನಿರ್ಧಾರಕ್ಕೂ ಬಂದಿದ್ದರು. ಆ ಸಮಯದಲ್ಲಿ ಬೊಮ್ಮಾಯಿ ಅವರು ಯಾವುದೇ ನಿರ್ಣಯ ಹೇಳಿರಲಿಲ್ಲ. ಇದೀಗ ಮೂಲಗಳ ಪ್ರಕಾರ ಬೊಮ್ಮಾಯಿ ಅವರೇ ಹೈಕಮಾಂಡ್ ಭೇಟಿಯಾಗಿ ತಮಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದು, ವಿಜಯೇಂದ್ರ ಅವರಿಗೆ ಎದುರಾಳಿಯಾಗಿ ಬೊಮ್ಮಾಯಿ ಎಂಟ್ರಿ ನೀಡಿದ್ದಾರೆ.












Click it and Unblock the Notifications