ಲಿಂಗಾಯತ ನಾಯಕನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಫಿಕ್ಸ್? ಬೊಮ್ಮಾಯಿ-ಅಮಿತ್ ಶಾ ಭೇಟಿಯ ರಹಸ್ಯವೇನು
ರಾಜ್ಯ ಬಿಜೆಪಿಯಲ್ಲಿ ಕಗ್ಗಂಟಾಗಿ ಉಳಿದಿರುವ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಸ್ವಲ್ಪಮಟ್ಟಿಗೆ ತಣ್ಣಗಾಗಿತ್ತು. ವಿಜಯೇಂದ್ರ ಬಣ ಹಾಗೂ ಯತ್ನಾಳ್ ಬಣದ ನಡುವಿನ ಮುಸುಕಿನ ಗುದ್ದಾಟ ಕೂಡ ಕಡಿಮೆಯಾಗಿದೆ. ಇದೇ ಹೊತ್ತಿನಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ ಎನ್ನಲಾದ ಮಾಜಿ ಸಿಎಂ ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರ ನಡೆ ಕುತೂಹಲ ಮೂಡಿಸಿದೆ. ಸದ್ಯ ದೆಹಲಿಯಲ್ಲಿರುವ ಅವರು ಸದ್ದಿಲ್ಲದೆ ರಾಜ್ಯಾಧ್ಯಕ್ಷ ಸ್ಥಾನ ಪಡೆಯುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣವಾಗಿದ್ದು, ಬೊಮ್ಮಾಯಿ ಹಾಗೂ ಅಮಿತ್ ಶಾ ಅವರ ಭೇಟಿ.
ಹೌದು ಬಿಜೆಪಿ ಹೈಕಮಾಂಡ್ ನಾಯಕರಲ್ಲಿ ಪ್ರಮುಖರೂ ಆಗಿರುವ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಬಸವರಾಜ ಬೊಮ್ಮಾಯಿ ಅವರು ದೆಹಲಿಯಲ್ಲಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಫೋಟೋ ಹಂಚಿಕೊಂಡಿರುವ ಅವರು, ದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ರಾಜ್ಯದ ಹಲವು ವಿಷಯಗಳ ಕುರಿತು ಚರ್ಚಿಸಿದೆ ಎಂದು ಹೇಳಿದ್ದಾರೆ.

ಆದರೆ, ಬೊಮ್ಮಾಯಿ ಅವರು ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಹಾಗೂ ಮುಖ್ಯವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆಯೂ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಗುಸುಗುಸು ಶುರುವಾಗಿದೆ. ಅಮಿತ್ ರಾಜ್ಯಕ್ಕೆ ಬಂದಾಗಲೂ ಕೆಲವು ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಲಾಗಿತ್ತು. ಆದರೆ ಬೊಮ್ಮಾಯಿ ಅವರು ಖುದ್ದು ಅಮಿತ್ ಶಾ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ರಾಜ್ಯಾಧ್ಯಕ್ಷ ಸ್ಥಾನ ತಮಗೆ ನೀಡುವ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಲಿಂಗಾಯತರಿಗೆ ಹೈಕಮಾಂಡ್ ಮಣೆ?
ಲಿಂಗಾಯತ ಸಮುದಾಯದ ಪ್ರಬಲ ನಾಯಕರಾದ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕರ್ನಾಟದಲ್ಲಿ ಬಿಜೆಪಿ ಸಂಘಟನೆಯಾಗಿತ್ತು. ಅಲ್ಲದೆ ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಸಂಖ್ಯೆಯೂ ಅಧಿಕವಾಗಿದೆ. ಈ ಹಿನ್ನೆಲೆ ಪ್ರಮುಖ ಹುದ್ದೆಗಳು ಅವರ ಕೈಯಲ್ಲೇ ಇದ್ದರೆ ಕರ್ನಾಟಕದಲ್ಲಿ ಬಿಜೆಪಿಗೆ ಒಳ್ಳೆಯದು ಎನ್ನುವುದು ಹೈಕಮಾಂಡ್ ಲೆಕ್ಕಾಚಾರವಂತೆ. ಇದೇ ಕಾರಣಕ್ಕೆ ಯಡಿಯೂರಪ್ಪ ಅವರ ನಂತರ ಪುತ್ರ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿತ್ತು.

ಆದರೆ, ವಿಜಯೇಂದ್ರ ಅವರ ನಾಯಕತ್ವವನ್ನು ಕೆಲ ಲಿಂಗಾಯತ ನಾಯಕರು ಈವರೆಗೆ ಒಪ್ಪಿಕೊಂಡಿಲ್ಲ. ಈ ಪೈಕಿ ಬಸನಗೌಡ ಪಾಟೀಲ್ ಯತ್ನಾಳ್ ಬಣ ಕೂಡ ಪ್ರಮುಖವಾಗಿದೆ. ಹೈಕಮಾಂಡ್ ಹಲವು ತಿಂಗಳ ಹಿಂದೆಯೇ ರಾಜ್ಯಾಧ್ಯಕ್ಷರ ಬದಲಾವಣೆ ಸುಳಿವು ನೀಡಿತ್ತು. ಈ ಹಿನ್ನೆಲೆ ಯತ್ನಾಳ್ ಸೇರಿದಂತೆ ಹಲವು ಲಿಂಗಾಯತ ನಾಯಕರು ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ತೊಡೆ ತಟ್ಟಿದ್ದಾರೆ. ಎರಡೂ ಬಣದವರು ಲಿಂಗಾಯತ ಸಮುದಾಯದ ನಾಯಕರ ಪ್ರತ್ಯೇಕ ಸಭೆ ನಡೆಸಿ ತಂತ್ರಗಾರಿಕೆ ರೂಪಿಸಿದ್ದರು. ಇನ್ನು ಯತ್ನಾಳ್ ಅವರು ಲಿಂಗಾಯತ ನಾಯಕರನ್ನೇ ತಮ್ಮ ಬಣದಿಂದ ರಾಜ್ಯಾಧ್ಯಕ್ಷರ ಚುನಾವಣೆಗೆ ಕಣಕ್ಕಿಳಿಸಲು ನಿರ್ಧರಿಸಿದೆ.
ಈ ಪೈಕಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರೂ ಆಗಿರುವ ಲಿಂಗಾಯತ ಸಮುದಾಯದ ವಿ.ಸೋಮಣ್ಣ ಅವರ ಹೆಸರುಗಳು ಕೂಡ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿತ್ತು. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ನಂತರ ಮತ್ತೊಬ್ಬ ಲಿಂಗಾಯತ ನಾಯಕನಿಗೇ ಸಿಎಂ ಸ್ಥಾನ ಕೊಡಲು ಹೈಕಮಾಂಡ್ ನಿರ್ಧರಿಸಿತ್ತು. ಇದೇ ಕಾರಣಕ್ಕೆ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಎಂದು ಘೋಷಿಸಿತ್ತು. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬೊಮ್ಮಾಯಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications