ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಕೊಟ್ಟರೂ ಬೇಡ ಎನ್ನುತ್ತಿದ್ದಾರಂತೆ ಶಾಸಕರು
ಬೆಂಗಳೂರು, ಅ.11: ರಾಜ್ಯದಲ್ಲೀಗ ಮತ್ತೆ ಸಂಪುಟ ವಿಸ್ತರಣೆಯ ಸರ್ಕಸ್ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೀಘ್ರದಲ್ಲಿಯೇ ದೆಹಲಿಯತ್ತ ಪ್ರಯಾಣ ಬೆಳಸಲಿದ್ದಾರೆ. ಆದರೆ, ಸಚಿವಾಕಾಂಕ್ಷಿಗಳಲ್ಲಿ ಮಾತ್ರ ಮೊದಲಿನ ಉತ್ಸಾಹ ಕಾಣುತ್ತಿಲ್ಲ. ಎಲ್ಲರ ಚಿತ್ತ ಈಗಾಗಲೇ ಚುನಾವಣೆಯತ್ತ ಬೀರಿದ್ದು, ಸಚಿವ ಸ್ಥಾನ ಯಾರಿಗೆ ಬೇಡ ಎಂಬ ವಾತಾವರಣ ನಿರ್ಮಾಣವಾಗಿದೆಯಂತೆ.
ಹೌದು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷ ಸಮೀಪಿಸುತ್ತಿದೆ. ಸಚಿವ ಸಂಪುಟ ವಿಸ್ತರಣೆ ಎಂಬುದು ಗಜಪ್ರಸವವವಾಗಿ ಹತ್ತಾರು ಬಾರಿ ದೆಹಲಿಗೆ ಹೋಗಿ ಬಂದರೂ ಖಾಲಿ ಕೈಯಲ್ಲೆ ಬಂದಿದ್ದರು. ಸಂಕ್ರಾಂತಿ, ಯುಗಾದಿ, ಆಷಾಢ ಮಾಸ, ದಸರಾ, ದೀಪಾವಳಿ ಹೀಗೆ ಇದು ಕಳೆದ ಮೇಲೆ, ಅದು ಕಳೆದ ಮೇಲೆ ಎಂದು ನಿರೀಕ್ಷೆ ಇಟ್ಟುಕೊಂಡವರೆಲ್ಲಾ ಕಳೆದೊಂದು ವರ್ಷದಿಂದ ಕಾದು ಕಾದು ಬೇಸರಗೊಂಡಿದ್ದಾರೆ. ಈಗ ಬೊಮ್ಮಾಯಿಯವರೇ ಉತ್ಸಾಹದಿಂದ ಸಂಪುಟ ವಿಸ್ತರಣೆ ಬಗ್ಗೆ ಓಡಾಡುತ್ತಿದ್ದರೂ ಸಹ ಯಾರಿಗೂ ಆಸಕ್ತಿ ಕಾಣುತ್ತಿಲ್ಲ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿದೆ. ಮುಂದಿನ ಫೆಬ್ರವರಿ ಅಥವಾ ಮಾರ್ಚ್‌ಗೆ ಚುನಾವಣೆ ಘೋಷಣೆ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳು ಕಳೆದ ನಂತರವೇ ಚುನಾವಣೆ ನಡೆಯುವುದು ಬಹುತೇಕ ಖಚಿತ. ಮೇ ತಿಂಗಳಿಗೆ ಹೊಸ ಸರ್ಕಾರ ಬರುವ ರೀತಿಯಲ್ಲಿ ವೇಳಾಪಟ್ಟಿ ಸಿದ್ಧವಾಗುತ್ತದೆ. ಹಾಗೆ ನೋಡಿದರೆ ಚುನಾವಣೆ ಘೋಷಣೆಗೆ ನಾಲ್ಕು ತಿಂಗಳು ಮಾತ್ರ ಬಾಕಿ ಇದೆ. ಇಂತಹ ದಿನಗಳಲ್ಲಿ ಬಹುತೇಕ ಶಾಸಕರು ತಮ್ಮ ಪ್ರವಾಸಗಳನ್ನೆಲ್ಲಾ ರದ್ದು ಮಾಡಿ ಕ್ಷೇತ್ರದಲ್ಲಿಯೇ ಸುತ್ತಾಡಲು, ಜನರ ಕಷ್ಟ ಸುಖ ಕೇಳಲು ಇದು ವಿಶೇಷ ಸಮಯ. ಒಂದು ದಿನವೂ ಕ್ಷೇತ್ರವನ್ನು ಬಿಟ್ಟು ಆಚೆ ಹೋಗಲು ಇಷ್ಟಪಡುವುದಿಲ್ಲ. ಹೀಗೆ ನಾಲ್ಕಾರು ದಿನ ಕಾಣಿಸಿಲ್ಲ ಎಂದರೆ ವಿರೋಧಿಗಳು ಮತ್ತೇನು ಮಾಡಿಯಾರೋ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಸಚಿವರಾಗುವುದಕ್ಕೆ ಅಥವಾ ಸಚಿವರಾಗಿ ರಾಜ್ಯ ಸುತ್ತುವುದಕ್ಕೆ ಬಹುತೇಕರು ಆಸಕ್ತಿ ವಹಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಅಗತ್ಯವಿದ್ದರೆ ಮಾತ್ರ ಬೆಂಗಳೂರು
ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಶಾಸಕರು ಬೆಂಗಳೂರಿನತ್ತ ಮುಖ ಮಾಡುವುದಿಲ್ಲ. ಯಾವಾಗಲೂ ಕ್ಷೇತ್ರದಲ್ಲಿಯೇ ಕಾಣಸಿಗುತ್ತಾರೆ. ಪ್ರತಿನಿತ್ಯ ಒಂದಲ್ಲಾ ಒಂದು ಗ್ರಾಮಗಳನ್ನು ಸುತ್ತುತ್ತಿರುತ್ತಾರೆ. ಹಾಗೂ ಹೀಗೂ ಬೆಂಗಳೂರಿನಲ್ಲಿಯೇ ಕೆಲಸ ಇದೆ ಎಂದಾದರೆ ವಾರಾಂತ್ಯದಲ್ಲಿ ಒಂದು ದಿನ ಹೀಗೆ ಬಂದು ಹಾಗೆ ಹೋಗುವ ಶಾಸಕರೇ ಹೆಚ್ಚು. ಈಗ ಮಂತ್ರಿಗಿರಿ ಕೊಟ್ಟರೆ ರಾಜ್ಯವೆಲ್ಲಾ ಸುತ್ತಾಡುವ ಜವಾಬ್ದಾರಿ ವಹಿಸುತ್ತಾರೆ. ಹೀಗೆ ಕ್ಷೇತ್ರ ಬಿಟ್ಟು ರಾಜ್ಯ ಸುತ್ತಲು ಹೋದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಾದರೂ ಹೇಗೆ ಎಂಬ ಆತಂಕ ಬಹುತೇಕರನ್ನು ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.

12 ಸಚಿವರ ನೇಮಕ?
ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಇತ್ತೀಚೆಗೆ ನಿಧನರಾದ ಉಮೇಶ್ ಕತ್ತಿ ಅವರ ಖಾತೆಯೂ ಸೇರಿ ಏಳು ಸ್ಥಾನಗಳು ಖಾಲಿ ಇವೆ. ಮೂಲಗಳ ಪ್ರಕಾರ ಜಾತಿವಾರು ಮತ್ತು ಪ್ರಾಂತ್ಯವಾರು ಪರಿಗಣಿಸಿ 11 ಅಥವಾ 12 ಮಂದಿ ಹೊಸಬರಿಗೆ ಸಂಪುಟದಲ್ಲಿ ಆದ್ಯತೆ ನೀಡಲಾಗುತ್ತದೆ. ಖಾಲಿ ಇರುವ ಸ್ಥಾನಗಳ ಜೊತೆಗೆ ಕೆಲವು ಹಿರಿಯರನ್ನು ಸಂಪುಟದಿಂದ ಕೈಬಿಟ್ಟು ಅವರಿಗೆ ಪಕ್ಷದ ಸಂಘಟನೆಯ ಬೇರೆ ಜವಾಬ್ದಾರಿ ವಹಿಸಲಾಗುತ್ತದೆ. ಹೀಗಾಗಿ ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

ಸಂಪುಟಕ್ಕೆ ಸೇರುವ ತುರ್ತು ಇರುವವರು
ಸದ್ಯ ಬಹುತೇಕ ಶಾಸಕರು ಸಚಿವ ಸ್ಥಾನದ ನಿರಾಸಕ್ತಿ ಹೊಂದಿದ್ದರೂ ಸಹ ಕೆಲವರಿಗೆ ಮಾತ್ರ ಸಂಪುಟ ಸೇರಲೇಬೇಕು ಎಂಬ ತುರ್ತು ಇದೆ. ಲೈಂಗಿಕ ಸಿಡಿ ಹಗರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡು ಈಗ ಕ್ಲೀನ್ ಚಿಟ್ ಪಡೆದಿರುವ ಕೆ.ಎಸ್. ಈಶ್ವರಪ್ಪ ಕೂಡಲೇ ಸಂಪುಟ ಸೇರಬೇಕು ಎಂಬ ತುರ್ತಿನಲ್ಲಿ ಇದ್ದಾರೆ. ಈ ಮೂಲಕ ಅವರು ಕಳೆದುಕೊಂಡಿರುವ ಇಮೇಜನನ್ನು ಮತ್ತೆ ಪಡೆಯಲು ಹವಣಿಸುತ್ತಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ತಮಗೆ ಮತ್ತೆ ಹಳೆಯ ಖಾತೆಗಳನ್ನೇ ಕೊಟ್ಟು ಮುಂದುವರಿಸಬೇಕು ಎಂಬ ಪಟ್ಟನ್ನು ರಾಜ್ಯ ನಾಯಕರ ಜೊತೆಗೆ ದೆಹಲಿ ಹೈಕಮಾಂಡ್ ಮಟ್ಟದಲ್ಲಿಯೂ ಲಾಬಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಪುಟದಲ್ಲಿ ಯಾರ ಕೈ ಮೇಲಾಗುತ್ತೆ
ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಭರ್ಜರಿ ಲಾಭಿಯೂ ನಡೆಯುತ್ತಿದೆ. ಆರ್‌ಎಸ್‌ಎಸ್ ನಿಷ್ಠಾವಂತರಿಗೆ, ಸಂಘಟನೆಯ ಶಕ್ತಿ ಇರುವವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪ್ರಯತ್ನ ಪಡುತ್ತಿದ್ದಾರೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಸಹ ತಮ್ಮ ನಿಷ್ಠರಿಗೆ ಸಚಿವ ಸ್ಥಾನ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಿಮವಾಗಿ ಯಾರ ಕೈ ಮೇಲಾಗುತ್ತದೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.












Click it and Unblock the Notifications