ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ; ಈ ಬಾರಿ ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ: ಯತ್ನಾಳ್
ಬೆಂಗಳೂರು,ಮಾರ್ಚ್30: ರಾಜ್ಯ ವಿಧಾನಸಭಾ ಚುನಾವಣಾ ದಿನಾಂತ ಘೋಷಣೆಯಾಗಿದ್ದು, ಚುನಾವಣೆಗೆ ದಿನಗಣನೆ ಶುರುವಾಗಿದೆ. ಇತ್ತ ರಾಜಕೀಯ ಪಕ್ಷಗಳು ಹಲವು ತಂತ್ರಗಾರಿಕೆಯೊಂದಿಗೆ ರಾಜ್ಯಾದ್ಯಂತ ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ.
ಇನ್ನೂ ರಾಜ್ಯ ವಿಧಾನಸಭಾ ಚುನಾವಣೆ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆದರೆ ಈ ಬಾರಿ ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ. ಆಪರೇಷನ್ ಕಮಲ ಮಾಡದಿರಲು ಹೈಕಮಾಂಡ್ ನಿರ್ಧರಿಸಿದೆ. ಆದ್ದರಿಂದ ನಮ್ಮ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

75 ವರ್ಷ ವಯಸ್ಸಾದವರಿಗೆ, ಭ್ರಷ್ಟಾಚಾರದಲ್ಲಿ ತೊಡಗಿದವರಿಗೆ ಮತ್ತು ಒಂದೇ ಕುಟುಂಬದವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂಬ ನಿರ್ಣಯವನ್ನು ಮಾಡಿ ಮೋದಿ ಹಾಗೂ ಅಮಿತ್ ಶಾ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು.
ಇನ್ನೂ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮೀಸಲಾತಿಯನ್ನು ಕಿತ್ತು ಹಾಕುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಮಾತನಾಡಿದ ಅವರು, ತಾಕತ್ ಇದ್ರೆ ಮೀಸಲಾತಿ ವಾಪಸ್ ಪಡೆಯುತ್ತೇವೆ ಎಂಬ ಹೇಳಿಕೆಯನ್ನು ಡಿ.ಕೆ. ಶಿವಕುಮಾರ್ ಇನ್ನೊಂದು ಸಲ ಹೇಳಲಿ. ಧಮ್ ಇದ್ರೆ ಡಿಕೆ ಶಿವಕುಮಾರ್ ಅವರು ಮೀಸಲಾತಿಯನ್ನು ವಾಪಸ್ ಪಡೆಯಲಿ. ತಾಕತ್ ಇದ್ರೆ ಅವರು ಅದನ್ನು ಮಾಡಿ ನೋಡಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಡಿ.ಕೆ. ಶಿವಕುಮಾರ್ ಸವಾಲೆಸೆದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ಸರ್ವನಾಶ ಮಾಡಿ ಬಿಡುತ್ತಾರೆ. ಒಕ್ಕಲಿಗರು, ಲಿಂಗಾಯತರು ಈ ರಾಜ್ಯದ ರಾಜಕಾರಣದಲ್ಲಿ ದೊಡ್ಡ ಶಕ್ತಿ ಇದ್ದ ಹಾಗೆ. ಅವರೊಂದಿಗೆ ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲರಿಗೂ ಸಾಮಾಜಿಕವಾಗಿ ನ್ಯಾಯ ಸಿಕ್ಕಿದ್ದರಿಂದ ಡಿ.ಕೆ. ಶಿವಕುಮಾರ್ ಅವರನ್ನು ಒಕ್ಕಲಿಗರೇ ಸೋಲಿಸುತ್ತಾರೆ. ಅವರು ಅವರ ಬ್ರದರ್ಸ್‌ಗಳಿಗೋಸ್ಕರ ಈ ರೀತಿ ಹೇಳಿದ್ದಾರೆ. ಅವರು ಮೀಸಲಾತಿ ವಾಪಸ್ ಪಡೆದರೆ ಅವರ ಬ್ರದರ್ಸ್ ಜೊತೆ ಮೆಕ್ಕಾ-ಮದಿನಾಗೆ ಹೋಗಬೇಕಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಗೆ ಟಾಂಗ್ ನೀಡಿದರು.

ಇನ್ನೂ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಾಗಿದೆ. ಅಲ್ಲದೇ ಲಿಂಗಾಯತರು ಹಾಗೂ ಒಕ್ಕಲಿಗರಿಗೂ ಮೀಸಲಾತಿ ಹೆಚ್ಚಾಗಿದೆ. ನಮ್ಮ ದೇಶದ ಪ್ರಧಾನಿ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಮಾರ್ಚ್ 27ನೇ ತಾರೀಕಿನಂದು ಗೆಜೆಟ್ ನೋಟಿಫಿಕೇಷನ್ ಆಗಿದೆ. ಆದ್ದರಿಂದ ಪ್ರಧಾನಿ, ಅಮಿತ್ ಶಾ ಹಾಗೂ ನನ್ನ ಸಹೋದರಿ ಶೋಭಾ ಕರಂದ್ಲಾಜೆಯವರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
ಬಿಜೆಪಿಯಿಂದ ಯಾರಾದರೂ ಕಾಂಗ್ರೆಸ್ಸಿಗೆ ಹೋದರೆ ಅವರ ಮರಣ ಶಾಸನವನ್ನು ಅವರೇ ಬರೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಬಿ. ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತ್ರತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ವಿಜಯಪುರದಲ್ಲಿ ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಕೆಲಸಗಳು ಆಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತದೆ. ಮತ್ತೆ ನಾವು ವಿಧಾನಸಭೆಯಲ್ಲಿ ಬಹುಮತ ಪಡೆಯುತ್ತೇವೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಟಿಕೆಟ್ ಹಂಚಿಕೆ ಮಾನದಂಡವನ್ನು ನಿರ್ಣಯ ಮಾಡುತ್ತಾರೆ. ಕುಟುಂಬ ರಾಜಕಾರಣವನ್ನು ನಾನೂ ವಿರೋಧ ಮಾಡುತ್ತೇನೆ. ಒಬ್ಬರ ಕುಟುಂಬಕ್ಕೆ ಎರಡು ಮೂರು ಎಷ್ಟು ಕೊಡಬೇಕು? ಕಾರ್ಯಕರ್ತರು ಪಕ್ಷಕ್ಕೆ ದುಡಿದವರು ಎಷ್ಟು ಜನರಿದ್ದಾರೆ? ಅವರೆಲ್ಲರೂ ಇವರ ಮಕ್ಕಳಿಗಾಗಿ ದುಡಿದ ಹಾಗಾಗುತ್ತದೆ. ಆದರೆ, ಒಂದೆಡರು ಕ್ಷೇತ್ರಗಳನ್ನು ಹೊರತು ಪಡಿಸಿ ಹೊಸ ಮುಖಗಳಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದರು.












Click it and Unblock the Notifications