ಬೆಂಗಳೂರು ಆಗ್ನೇಯ ವಿಭಾಗ: ಇನ್ಮುಂದೆ ಪೊಲೀಸ್ ಠಾಣೆಯಲ್ಲೇ ಪುಸ್ತಕ ಓದಿ
ಬೆಂಗಳೂರು, ಸೆಪ್ಟಂಬರ್ 20: ಸಾರ್ವಜನಿಕರು, ಪೊಲೀಸ್ ಸಿಬ್ಬಂದಿಗೆ ಪುಸ್ತಕ ಓದುವ ಹವ್ಯಾಸ ಹೆಚ್ಚಿಸಲೆಂದು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ತಮ್ಮ ವ್ಯಾಪ್ತಿಯ ಎಲ್ಲ ವಿಭಾಗದ ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯ ಸ್ಥಾಪಿಸಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಆರಂಭವಾದ 840ಪುಸ್ತಕ ಇರುವ ಗ್ರಂಥಾಲಯಕ್ಕೆ ಚಲನಚಿತ್ರ ನಿರ್ಮಾಪಕ ಗಿರೀಶ್ ಕಾಸರವಳ್ಳಿ ಅವರು ಚಾಲನೆ ನೀಡಿದರು.
ಸಮಾರಂಭದ ನೇತೃತ್ವ ವಹಿಸಿದ್ದ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಅವರು, ಮುಂದಿನ ದಿನಗಳಲ್ಲಿ ಪ್ರತಿ ಪೊಲೀಸ್ ಠಾಣೆ ಹಾಗೂ ಡಿಸಿಪಿ, ಎಸಿಪಿ ಕಚೇರಿ ಆವರಣದಲ್ಲಿ ಗ್ರಂಥಾಲಯ ಹಾಗೂ ರೀಡಿಂಗ್ ಕಿಯೋಸ್ಕ್ ಸ್ಥಾಪಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಬೆಂಗಳೂರು ಪೊಲೀಸರು ಜನಸಮುದಾಯ ತಲುಪುವ ನಿಟ್ಟಿನಲ್ಲಿ ಗ್ರಂಥಾಲಯ ನಿರ್ಮಾಣ ಸೇರಿ ಹಲವು ಯೋಜನೆಗಳೂ ಒಂದು ಪ್ರಮುಖ ಹೆಜ್ಜೆಯಾಗಿದೆ. ಆಗ್ನೇಯ ವಿಭಾಗದ ಪೊಲೀಸರು ಇಲ್ಲಿನ ಪ್ರತಿ ಪೊಲೀಸ್ ಠಾಣೆಗಳಲ್ಲಿ ಗ್ರಂಥಾಲಯವನ್ನು ಸ್ಥಾಪಿಸುವ ಉಪಕ್ರಮ ಹಮ್ಮಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಹುಳಿಮಾವು ಠಾಣೆಯಲ್ಲಿ ತೆರೆಯಲಾದ ಮೊದಲ ಗ್ರಂಥಾಲಯ ಇಂದು ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ ಎಂದರು.

ಜನ ಓದುವುದನ್ನು ಮರೆತಿದ್ದಾರೆ
ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್‌ಬುಕ್, ಇನ್ಸಟಾಗ್ರಾಂ ಸದ್ದು ಹೆಚ್ಚಿರುವ ಇಂದಿನ ದಿನಮಾನಗಳಲ್ಲಿ ಜನರು ಪುಸ್ತಕಗಳನ್ನು ಓದುವುದನ್ನೇ ಮರೆತು ಬಿಟ್ಟಿದ್ದಾರೆ. ಅವರಿಗೆ ಹಾಗೂ ಪೊಲೀಸರಿಗೆ ಜ್ಞಾನಾರ್ಜನೆಗೆ ಅನುಕೂಲವಾಗಲು ಮತ್ತು ಓದುವ ಪ್ರವೃತ್ತಿ ಹೆಚ್ಚಿಸಲು ಈ ಗ್ರಂಥಾಲಯ ಸಹಕಾರಿಯಾಗಲಿದೆ. ಒತ್ತಡ ಜೀವನ ನಿರ್ವಹಿಸಲು ಕಠಿಣ ಕೆಲಸದ ನಡುವೆ ಪುಸ್ತಕಗಳನ್ನು ಓದುವುದು ಉತ್ತಮ ಮಾರ್ಗವಾಗಿದೆ. ಇದು ನಮ್ಮ ಉದ್ಯೋಗಿಗಳಿಗೆ ಓದುವ ಅಭ್ಯಾಸ ಹೆಚ್ಚಿಸುವ ಜತೆಗೆ ಅವರಲ್ಲಿ ಶಬ್ದಕೋಶವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಪೊಲೀಸ್ ಠಾಣೆಗಳಲ್ಲಿರುವ ಗ್ರಂಥಾಲಯಗಳ ನಿರ್ಮಾಣದಿಂದ ಪೊಲೀಸರು ಜನ ಸಮುದಾಯಕ್ಕೆ ಹತ್ತಿರವಾಗುತ್ತಾರೆ. ಸಾರ್ವಜನಿಕರು ಠಾಣೆಗಳಲ್ಲಿನ ಗ್ರಂಥಾಲಯ ಬಳಸಬಹುದಾಗಿದೆ. ಇಂದು ಜನರು ಪುಸ್ತಕ ಓದುವ ಅಭ್ಯಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರು ತಮ್ಮ ಫೋನ್‌ಗಳಲ್ಲಿ ಮುಳುಗಿದ್ದಾರೆ. ಇಂತ ಸಂದರ್ಭದಲ್ಲಿ ಯಾರಾದರೂ ಓದುವ ಅಭ್ಯಾಸದಲ್ಲಿ ತೊಡಗಿಕೊಂಡರೆ ನಮ್ಮ ಪ್ರಯತ್ನ ಯಶಸ್ವಿಯಾಗುತ್ತದೆ ಎಂದು ಸಿ.ಕೆ ಬಾಬಾ ತಿಳಿಸಿದರು.

840 ಪುಸ್ತಕ ಸಂಗ್ರಹಿಸಿದ ಪೊಲೀಸರು
ಈ ಗ್ರಂಥಾಲಯ ಉಪಕ್ರಮವು 'ಹಲೋ ನೈಬರ್' ಅಭಿಯಾನದ ಭಾಗವೇ ಆಗಿದೆ. ಇದು ಕರ್ತವ್ಯನಿರತ ಪೊಲೀಸರ ಜತೆ ಜನ ಸಮುದಾಯ ಮಧ್ಯೆ ಉತ್ತಮ ಬಾಂಧವ್ಯ ಬೆಸೆಯುವ ಗುರಿ ಹೊಂದಿದೆ. ಈ ಅಭಿಯಾನವನ್ನು ಹಲವು ವರ್ಷಗಳ ಹಿಂದೆಯೇ ಆಂಭಿಸಲಾಗಿತ್ತು ಎಂದರು.
ಇನ್ನೂ ಹುಳಿಮಾವು ಪೊಲೀಸ್ ಠಾಣೆಯ ನೂತನ ಗ್ರಂಥಾಲಯದಲ್ಲಿ ಪೊಲೀಸರು ಆ ಪ್ರದೇಶದ ನಿವಾಸಿಗಳಿಂದ 840 ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಈ ಪ್ರದೇಶದ ಹಲವಾರು ಶಿಕ್ಷಣ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಮಂದಿ ತಮ್ಮ ಪುಸ್ತಕಗಳನ್ನು ಗ್ರಂಥಾಲಯಕ್ಕೆ ದಾನವಾಗಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದರು.












Click it and Unblock the Notifications