ಬೆಂಗಳೂರು ಶಾಲಾ ಕಟ್ಟಡ ಕುಸಿತ: ಮೃತರು ನಾಲ್ಕು
ಬೆಂಗಳೂರು, ನ. 26: ಕಳೆದ ನಾಲ್ಕು ದಶಕದಲ್ಲೇ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ನಂತರ ನಿನ್ನೆ ಸೋಮವಾರ ರಾತ್ರಿಯೂ ಹೆಚ್ಚು ಕಮ್ಮಿ ಅದೇ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ನಗರದಲ್ಲಿ ಹಳೆಯ ಕಟ್ಟಡಗಳು ಕಂಪಿಸಲಾರಂಭಿಸಿವೆ. ಅದರಲ್ಲಿರುವ ಜನ ನಡುಗಲಾರಂಭಿಸಿದ್ದಾರೆ.
ಈ ಹಿನ್ನೆಲೆಯಲ್ಲೇ ಆಡುಗೋಡಿಯಲ್ಲಿ ಭಾರಿ ದುರಂತ ಸಂಭವಿಸಿದೆ. ಹಳೆಯ ಮನೆಯೊಂದು ಕುಸಿದು ಸವಿತಾ ಎಂಬ ಒಂದೂವರೆ ವರ್ಷದ ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಪದ್ಮಾ (45), ಮಲ್ಕಾ ಸಿಂಗ್(20) ಹಾಗೂ ಗೋಲಾ ಸಿಂಗ್(21) ಎಂದು ಗುರುತಿಸಲಾಗಿದೆ. ಮೃತಪಟ್ಟವರು ಉತ್ತರ ಪ್ರದೇಶ ಮೂಲದವರು.

ಪದ್ಮಾವತಿ ಶಾಲೆಗೆ ಸೇರಿದ ಕಟ್ಟಡ ಇದಾಗಿದೆ. ಮಳೆಗೆ ತೇವ ಹೆಚ್ಚಾಗಿ ಕಟ್ಟದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಇಡೀ ಕಟ್ಟಡ ಕುಸಿದು ಬಿದ್ದಿದೆ ಎಂದು ಶಂಕಿಸಲಾಗಿದೆ. ಮೈಕೋ ಬಾಷ್ ಕಂಪನಿಯ ಪಕ್ಕದಲ್ಲೇ ಇರುವ ಪಾಳುಬಿದ್ದ ಕಟ್ಟಡ ಇದಾಗಿದ್ದು, ಇತ್ತೀಚೆಗೆ ಇಲ್ಲಿಂದ ಶಾಲೆಯನ್ನು ಸ್ಥಳಾಂತರಿಸಲಾಗಿತ್ತು. ಮನೆಯಲ್ಲಿ ಒಟ್ಟು 7 ಮಂದಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಪರಿಹಾರ: ಮೃತರ ಕುಟುಂಬಗಳಿಗೆ ಬಿಬಿಎಂಪಿ ವತಿಯಿಂದ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸ್ಥಳಕ್ಕೆ ದೌಡಾಯಿಸಿದ ಮೇಯರ್ ಕಟ್ಟೆ ಸತ್ಯನಾರಾಯಣ ಅವರು ತಿಳಿಸಿದ್ದಾರೆ.
ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ನಗರದ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ, ಕಟ್ಟಡದ ಅವಶೇಷಗಳಡಿ ಇನ್ನಿಬ್ಬರು ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಇತರ ಕಟ್ಟಡ ಕುಸಿತಗಳು : ಸೋಮೇಶ್ವರ ನಗರದಲ್ಲಿ | ಕೆಂಗೇರಿ ಬಂಡೆಮಠದ ಬಳಿ | ಗರುಡಾಚಾರ್ ಪಾಳ್ಯದಲ್ಲಿ












Click it and Unblock the Notifications