Bandipur Forest: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ, ಸಚಿವರ ಸ್ಪಷ್ಟನೆ
ಬೆಂಗಳೂರು, ಜನವರಿ 09: ಬಂಡೀಪುರ ಅರಣ್ಯದಲ್ಲಿ ರಾತ್ರಿ ವಾಹನ ಸಂಚಾರದ ಕುರಿತು ಮತ್ತೊಮ್ಮೆ ಚರ್ಚೆಗಳು ಆರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ 'ಸೇವ್ ಬಂಡೀಪುರ' ಎಂಬ ಅಭಿಯಾನ ಆರಂಭವಾಗಿದೆ. ಕರ್ನಾಟಕ ಸರ್ಕಾರ ಬಂಡೀಪುರ ಅರಣ್ಯದಲ್ಲಿ ರಾತ್ರಿ ವೇಳೆ 2 ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಿದೆ ಎಂಬುದು ಸದ್ಯ ಚರ್ಚೆಯ ವಿಚಾರವಾಗಿದೆ. ಈ ಕುರಿತು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿವೆ. ಆದ್ದರಿಂದ ಅರಣ್ಯ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಸಂಜೆ ಪೋಸ್ಟ್ ಹಾಕಿದ್ದಾರೆ. ' ಬಂಡೀಪುರ ಅರಣ್ಯದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಮ್ಮ ಸರ್ಕಾರ ಯಾವುದೇ ಹೊಸ ಅನುಮತಿ ನೀಡಿಲ್ಲ. ಹೀಗಾಗಿ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಎರಡು ಬಸ್ ಸೇವೆಗಳನ್ನು ಅನುಮತಿಸಿರುವ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಪ್ರಮಾಣಿಕ ಆರೋಪಗಳನ್ನು ಮಾಡುತ್ತಿವೆ ಮತ್ತು ಜನರಿಗೆ ತಪ್ಪು ಮಾಹಿತಿ ಹರಡಲು ಪ್ರಯತ್ನಿಸುತ್ತಿವೆ' ಎಂದು ಹೇಳಿದ್ದಾರೆ.

'ಹಳೆ ನೀತಿ ಮುಂದುವರಿಯುತ್ತಿರುವುದನ್ನೇ ಸುಳ್ಳು ಆರೋಪ ಮಾಡಿ, ಕಾಂಗ್ರೆಸ್ ವಿರುದ್ಧ ಅಪ ಪ್ರಚಾರ ಮಾಡಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ. ಇದು ನಾಚಿಕೆಗೇಡಿತನದ ಕೆಲಸ. ಸುಳ್ಳು ಬಿಜೆಪಿ ಅವರ ಮನೆ ದೇವರಾಗಿದೆ. 2009ರಲ್ಲಿ ತುರ್ತು ಪರಿಸ್ಥಿತಿಗಳು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಆಂಬುಲೆನ್ಸ್ ಸೇವೆ ಸೇರಿದಂತೆ ಎರಡು ಬಸ್ ವಾಹನ ಸಂಚಾರಕ್ಕೆ ಅನುಮತಿ ನೀಡಿತ್ತು. ಇತ್ತೀಚೆಗೆ ಅದೇ ಅನುಮತಿಯನ್ನು ಕಾನೂನು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನೊಂದಿಗೆ ಮುಂದುವರಿಸಲಾಗಿದೆ' ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
'ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಮಾಡಲಿಕ್ಕೆ ಬೇರೆ ಕೆಲಸವಿಲ್ಲದೆ, ಎಲ್ಲ ವಿಷಯಗಳನ್ನೂ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿವೆ. ನಮ್ಮ ಸರ್ಕಾರ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸಂಪೂರ್ಣ ಬದ್ಧವಾಗಿದೆ. ವನ್ಯಜೀವಿ ಸಂರಕ್ಷಣೆಗೆ ಕಾಯ್ದೆಯನ್ನು ತಂದದ್ದು ಇಂದಿರಾ ಗಾಂಧಿ ಅವರ ಸರ್ಕಾರ. ನಾವು ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತೇವೆ. ಆದರೆ, ಬಿಜೆಪಿ ಶಾಸಕರು ದೇವರು ಎಂದು ಪೂಜಿಸುವ ಆನೆಗಳನ್ನು ಗುಂಡಿಟ್ಟು ಕೊಲ್ಲಲು ಸದನದಲ್ಲಿ ಅನುಮತಿ ಕೇಳುತ್ತಾರೆ! ಇಂತಹವರು ಈಗ ವನ್ಯಜೀವಿ ಸಂರಕ್ಷಣೆ ಬಗ್ಗೆ ಪಾಠ ಹೇಳಲು ಬರುತ್ತಿದ್ದಾರೆ. ಇದು 'ಭೂತದ ಬಾಯಲ್ಲಿ ಭಗವದ್ಗೀತೆ' ಓದುವಂತಾಗಿದೆ' ಎಂದು ಅರಣ್ಯ ಸಚಿವರು ಟೀಕಿಸಿದ್ದಾರೆ.
ಅರಣ್ಯ ಸಚಿವರು ತಮ್ಮ ಪೋಸ್ಟ್‌ನಲ್ಲಿ ಚಾಮರಾಜನಗರ ಜಿಲ್ಲಾಡಳಿತ 3/9/2009ರ ಆದೇಶವನ್ನು ಉಲ್ಲೇಖಿಸಿದ್ದಾರೆ. ಈ ಆದೇಶ ಬಂಡೀಪುರ ರಾಷ್ಟ್ರೀಯ ಹೆದ್ದಾರಿ ಸಂ.212/ ಗುಂಡ್ಲುಪೇಟೆ-ಸುಲ್ತಾನ್ ಬತೇರಿ ಹಾಗೂ ರಾಷ್ಟ್ರೀಯ ಹೆದ್ದಾರೆ ಸಂ.67 ಗುಂಡ್ಲುಪೇಟೆ-ಊಟಿ ಮಾರ್ಗಗಳಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ವಾಹನ ಸಂಚಾರವನ್ನು ನಿಷೇಧಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಸ0.67 ಗುಂಡ್ಲುಪೇಟೆ-ಊಟಿ ಅರಣ್ಯ ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂ.212, ಗುಂಡ್ಲುಪೇಟೆ-ಸುಲ್ತಾನ್ ಬತೇರಿ ಅರಣ್ಯ ಮಾರ್ಗಗಳಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6ಗಂಟೆವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎರಡು ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಈ ಕಛೇರಿಯ ಆದೇಶ ದಿನಾಂಕ 03-06-2009ರಲ್ಲಿ ಅನುಮತಿ ನೀಡಲಾಗಿರುತ್ತದೆ ಎಂದು ಆದೇಶ ಹೇಳಿದೆ.
ಬಂಡೀಪುರ ಅರಣ್ಯದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಮ್ಮ ಸರ್ಕಾರ ಯಾವುದೇ ಹೊಸ ಅನುಮತಿ ನೀಡಿಲ್ಲ. ಹೀಗಾಗಿ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಎರಡು ಬಸ್ ಸೇವೆಗಳನ್ನು ಅನುಮತಿಸಿರುವ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಪ್ರಮಾಣಿಕ ಆರೋಪಗಳನ್ನು ಮಾಡುತ್ತಿವೆ ಮತ್ತು ಜನರಿಗೆ ತಪ್ಪು ಮಾಹಿತಿ ಹರಡಲು ಪ್ರಯತ್ನಿಸುತ್ತಿವೆ.
— Eshwar Khandre (@eshwar_khandre) January 9, 2025
ಹಳೆ… pic.twitter.com/XXiDxSvW6q
ಬಿಜೆಪಿ ಪೋಸ್ಟ್ ಹಾಕಿತ್ತು: ಕರ್ನಾಟಕ ಬಿಜೆಪಿ ಪೋಸ್ಟ್ ಒಂದನ್ನು ಹಾಕಿ, 'ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೇ, ನೀವು ಕರ್ನಾಟಕದ ಅರಣ್ಯ ಸಚಿವರೋ? ಕೇರಳದ ಅರಣ್ಯ ಸಚಿವರೋ?. ಬಂಡೀಪುರದಲ್ಲಿ ವನ್ಯಜೀವಿಗಳ ಸಂರಕ್ಷಣೆ ಮಾಡಬೇಕಾಗಿದ್ದು ನಿಮ್ಮ ಕೆಲಸ. ಅದನ್ನು ಬಿಟ್ಟು ಕೇರಳದ ಲಾಬಿಗೆ ಮಣಿದು ಹಾಗೂ ಕಾಂಗ್ರೆಸ್‌ನ ನಾಯಕರು ರಾತ್ರಿ ವೇಳೆ ಅರಣ್ಯ ಪ್ರದೇಶದಲ್ಲಿ ಸುತ್ತಿ ಮೋಜು ಮಸ್ತಿ ಮಾಡಲು ಅವಕಾಶ ಕೊಟ್ಟು ವನ್ಯಜೀವಿಗಳ ಜೀವಕ್ಕೆ ಕಂಟಕ ತಂದಿದ್ದಾರೆ' ಎಂದು ಆರೋಪಿಸಿತ್ತು.
'ಈ ಹಿಂದೆ ವಯನಾಡು ಮಾಜಿ ಸಂಸದ ರಾಹುಲ್ ಗಾಂಧಿ ಅವರ ತಾಳಕ್ಕೆ ಕುಣಿದು ಕನ್ನಡಿಗರ ತೆರಿಗೆ ಹಣವನ್ನು ನೀಡಿದ್ದೀರಿ. ಇದೀಗ ರಾಹುಲ್ ಗಾಂಧಿಯವರ ಸಹೋದರಿ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಮೆಚ್ಚಿಸಲು ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಕೊಟ್ಟಿದ್ದೀರಿ. ಕರ್ನಾಟಕದ ಅರಣ್ಯ ರಕ್ಷಣೆಗೆ ನಿಂತಿದ್ದಿರೋ ಅಥವಾ ಬಂಡೀಪುರದಲ್ಲಿ ವನ್ಯಜೀವಿಗಳ ಸರ್ವನಾಶಕ್ಕೆ ನಿಂತಿದ್ದಿರೋ?' ಎಂದು ಬಿಜೆಪಿ ಪ್ರಶ್ನೆ ಮಾಡಿತ್ತು.












Click it and Unblock the Notifications