ಬಂಡೀಪುರದಲ್ಲಿ ಕಟ್ಟಡ: ನಟ ಗಣೇಶ್‌ಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್
ಬೆಂಗಳೂರು, ಆಗಸ್ಟ್ 22: ಬಂಡೀಪುರದ ಬಳಿಯ ಹಂಗಳ ಹೋಬಳಿಯ ಜಕ್ಕಳ್ಳಿಯಲ್ಲಿ ಬೃಹತ್ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ಚಿತ್ರನಟ ಗಣೇಶ್ ಕಿಶನ್ ಅಲಿಯಾಸ್ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಕರ್ನಾಟಕ ಹೈಕೋರ್ಟ್ ಕೊಂಚ ರಿಲೀಫ್ ನೀಡಿದೆ. ನ್ಯಾಯಾಲಯ ಅವರ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಆದೇಶ ನೀಡಿರುವುದಲ್ಲದೇ, ಅರಣ್ಯ ಇಲಾಖೆ ನೀಡಿರುವ ನೋಟಿಸ್‌ಗೆ ಒಂದು ವಾರದಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಜಕ್ಕಳ್ಳಿಯಲ್ಲಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರಣ್ಯ ಇಲಾಖೆ ನೀಡಿದ್ದ ನೋಟಿಸ್ ಪ್ರಶ್ನಿಸಿ ಗಣೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

ಹೈಕೋರ್ಟ್ ಏನು ಹೇಳಿದೆ?; ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ತಾತ್ಕಾಲಿಕ ವಾಸದ ಮನೆ ನಿರ್ಮಾಣಕ್ಕೆ ಮಾತ್ರ ಅವಕಾಶವಿದೆ. ಜತೆಗೆ, ಯಾವುದೇ ಬೃಹತ್ ಮತ್ತು ಶಾಶ್ವತ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ತಿಳಿಸಿದೆ. ಈ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗದು ಎಂದು ತಿಳಿಸಿದೆ.
ಅಲ್ಲದೆ, ಬೃಹತ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಕ್ರಮವನ್ನು ಪ್ರಶ್ನಿಸಿ ಅರಣ್ಯ ಇಲಾಖೆ ನೀಡಿರುವ ನೋಟಿಸ್‌ಗೆ ಅರ್ಜಿದಾರ ಗಣೇಶ್ ಮುಂದಿನ ಒಂದು ವಾರದಲ್ಲಿ ಉತ್ತರ ನೀಡಬೇಕು. ಈ ಉತ್ತರವನ್ನು ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಿನ 4 ವಾರಗಳಲ್ಲಿ ಪರಿಶೀಲನೆ ನಡೆಸಿ ವಿಚಾರಣೆ ಪೂರ್ಣಗೊಳಿಸಿಬೇಕು ಎಂದು ಸೂಚನೆ ನೀಡಿದೆ. ಆದರೆ, ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಯಾವುದೇ ರೀತಿಯಲ್ಲಿಯೂ ಕಟ್ಟಡ ನಿರ್ಮಾಣ ಕಾಮಗಾರಿ ಪುನರಾರಂಭಿಸಬಾರದು ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಚಿತ್ರನಟ ಗಣೇಶ್ ಜಮೀನು ಖರೀಸಿದ್ದರು. ಈ ಜಮೀನಿನಲ್ಲಿ ತೋಟದ ಮನೆ ಕಟ್ಟುವುದಕ್ಕೆ ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಮನವಿ ಕುರಿತು ಪರಿಶೀಲನೆ ನಡೆಸಿದ್ದ ಅರಣ್ಯ ಇಲಾಖೆ ಮತ್ತು ಪ್ರಾದೇಶಿಕ ಆಯುಕ್ತರು ತಾತ್ಕಾಲಿಕವಾದ ವಾಸದ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ಜತೆಗೆ, ಗಣೇಶ್ ಅವರು ತಾತ್ಕಾಲಿಕ ವಾಸದ ಮನೆ ನಿರ್ಮಾಣ ಮಾಡಲಾಗುವುದು, ಯಾವುದೇ ರೀತಿಯ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಮುಂದಾಗುವುದಿಲ್ಲ, ಅಲ್ಲದೆ, ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುವುದಿಲ್ಲ ಹಾಗೂ ವನ್ಯ ಜೀವಿಗಳಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗುವಂತಹ ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದರು.
ಆದರೆ, ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಬೆಳವಣಿಗೆಗೆ ಪರಿಸರ ಪ್ರೇಮಿಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು. ಇದಾದ ಬಳಿಕ ಅರಣ್ಯ ಇಲಾಖೆ ಗಣೇಶ್‌ಗೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೆ, ಮುಂದಿನ ಆದೇಶದವರೆಗೂ ಕಾಮಗಾರಿ ನಡೆಸದಂತೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಗಣೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications