ಜನರಿಲ್ಲ -ಸಾರಿಗೆಯಿಲ್ಲ: ಕಲಬುರಗಿ, ಚಿಕ್ಕೋಡಿ, ಹು-ಧಾ ಬಂದ್
ಕಲಬುರಗಿ/ಧಾರವಾಡ, ಜನವರಿ 08: ಕೋರೆಗಾಂವ್ ನಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಖಂಡಿಸಿ, ಉತ್ತರ ಕರ್ನಾಟಕದ ವಿವಿಧೆಡೆ ಸೋಮವಾರ ಬಂದ್‌ಗೆ ಕರೆ ನೀಡಿದ್ದು, ಸಾರಿಗೆ ಸಂಚಾರ ಸ್ಥಗಿತಗೊಂಡಿದೆ, ಜನರು, ವಾಹನಗಳ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ವಾಹನಗಳಿಂದ ಗಿಜಿಗುಡುತ್ತಿದ್ದ ರಸ್ತೆಗಳಲ್ಲಿ ಬೀಡಾಡಿ ದನಗಳು ಸ್ವಚ್ಛಂದವಾಗಿ ಓಡಾಡುತ್ತಿವೆ.
ಕಲಬುರಗಿಯ ಆಳಂದ, ಚಿಕ್ಕೋಡಿ, ಹುಬ್ಬಳ್ಳಿ-ಧಾರವಾಡಗಳಲ್ಲೂ ಇದೇ ಚಿತ್ರಣ ಇದ್ದು, ಈ ನಗರಗಳಲ್ಲಿಯೂ ಬಂದ್ ಆಚರಣೆ ಮಾಡಲಾಗುತ್ತಿದೆ.

ಭೀಮ ಕೋರೆಗಾಂವ್ ನಲ್ಲಿ ದಲಿತರ ಮೇಲೆ ಹಲ್ಲೆ ಖಂಡಿಸಿ ಚಿಕ್ಕೋಡಿಯಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದ್ದು, ಅಂಗಡಿಗಳು ಬಾಗಿಲು ಹಾಕಿವೆ. ಬಸ್ ಸಂಚಾರ ಬಂದ್ ಆಗಿದ್ದು, ಬೆಳಿಗ್ಗೆ 6 ರಿಂದ ಬಂದ್ ಮುಗಿಯುವವರೆಗೂ ಸರಕಾರಿ ಬಸ್ ಸಂಚಾರ ಇರುವುದಿಲ್ಲ ಎಂದು ಚಿಕ್ಕೋಡಿ ಉಪವಿಭಾಗದ ಅಧಿಕಾರಿ ಚಂದ್ರಶೇಖರ್ ಹೇಳಿದ್ದಾರೆ. ನಗರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ವಿಜಯಪುರ ದಾನಮ್ಮ ಅತ್ಯಾಚಾರ ಕೊಲೆ ಪ್ರಕರಣ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಸಂವಿಧಾನ ಬದಲಿಸುವ ಕುರಿತ ಹೇಳಿಕೆ, ಉಡುಪಿ ಧರ್ಮ ಸಂಸತ್ ನಲ್ಲಿ ಪೇಜಾವರ ಸ್ವಾಮೀಜಿ ಹೇಳಿಕೆಗಳನ್ನು ಖಂಡಿಸಿ ಧಾರವಾಡ - ಹುಬ್ಬಳ್ಳಿ ಬಂದ್‌ಗೆ ದಲಿತಪರ ಸಂಘಟನೆಗಳು ಕರೆ ಕೊಟ್ಟಿವೆ.

ದಲಿತಪರ ಸಂಘಟನೆಗಳ ಸದಸ್ಯರು ಧಾರವಾಡ ನಗರದ ಜ್ಯೂಬಿಲಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಪೊಲೀಸ್ ಬಂದೋಬಸ್ತ್ ಇದೆ. ಅಂಗಡಿಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿಸುತ್ತಿದ್ದಾರೆ.












Click it and Unblock the Notifications