Bagalkot Clash: ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ, ಶಾಂತಿ ಕಾಪಾಡುವಂತೆ ಗೃಹ ಸಚಿವರ ಮನವಿ
ಬೆಂಗಳೂರು: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಈ ಗಲಾಟೆ ಕುರಿತು ಸೂಕ್ತ ಕ್ರಮಕ್ಕೆ ಆಗ್ರಹ ಕೇಳಿ ಬಂದ ಬೆನ್ನಲ್ಲೆ ಪ್ರತಿಕ್ರಿಸಿರುವ ಗೃಹ ಸಚಿವ ಜಿ.ಪರಮೇಶ್ವರ ಅವರು, ಹೆಚ್ಚಿನ ಪೊಲೀಸ್ ಫೋರ್ಸ್ ಅಲ್ಲಿಗೆ ಕಳುಹಿಸಲಾಗಿದೆ. ಹಿರಿಯ ಅಧಿಕಾರಿಗಳು, ಲಾಂಡ್ ಆ್ಯಂಡ್ ಆರ್ಡರ್ ಎಡಿಜಿಪಿ ಅವರನ್ನು ಕಳಿಸಿದ್ದೇನೆ. ಬಾಗಲಕೋಟೆ ಈಗ ಶಾಂತವಾಗಿದೆ. ಅಲ್ಲಿಯ ಜನರು ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕು. ಕಾನೂನು ಕೈಗೆತ್ತಿಕೊಳ್ಳದಂತೆ ಅವರು ಮನವಿ ಮಾಡಿದ್ದಾರೆ.
ಶಾಂತಿ ಸೌಹಾರ್ದ ಸಭೆಗೆ ಸೂಚನೆ
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲಾಗಿದೆ. ಪೊಲೀಸ್ ಇಮಿಡೆಟ್ ಆಗಿ ಆಕ್ಟ್ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು, ಲಾಂಡ್ ಆ್ಯಂಡ್ ಆರ್ಡರ್ ಎಡಿಜಿಪಿನ ಕಳಿಸಿದ್ದೇನೆ. ಘಟನೆ ವೇಳೆ ಪೊಲೀಸರಿಗೆ ಏಟು ಬಿದ್ದರೂ ಕೂಡ ಅವರು ಸಮಾಧಾನದಿಂದ ಇದ್ದಾರೆ. ಶಾಂತಿ ಸಮಿತಿ ರಚನೆ ಮಾಡಲು ಸೂಚಿಸಲಾಗಿದೆ. ಶಾಂತಿ ಸೌಹಾರ್ದ ಸಭೆ ಮಾಡಲು ಸೂಚನೆ ನೀಡಲಾಗಿದೆ ಎಂದು ಇಂದಿನ ಬೆಳವಣಿಗೆ ಕುರಿತು ತಿಳಿಸಿದರು.

ಆರ್ ಎಸ್ ಎಸ್ ಮೆರವಣಿಗೆಯನ್ನು ಸ್ಥಳೀಯವಾಗಿ ನೋಡಿಕೊಂಡು ನಿರ್ಧರಿಸಬೇಕಿದೆ. ಹೆಚ್ಚುವರಿ ಪೊಲೀಸ್ ಪೋರ್ಸ್ ಸ್ಥಳದಲ್ಲಿರಲಿದ್ದಾರೆ. ಯಾರಾದರೂ ಕಾನೂನು ಕೈಗೆತ್ತಿಕೊಂಡಲ್ಲಿ, ಗಲಾಟೆಗೆ ಪ್ರಚೋದಿಸಿದಲ್ಲಿ ಅಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಕಲ್ಲು ಹೊಡೆಯೊದು, ಪ್ರಚೋದನೆ ಕೊಡೋದು ಬೇಡ. ಶಾಂತಿ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲರು ಪೊಲೀಸರಿಗೆ ಸಹಕರಿಸಬೇಕೆಂದು ಅವರು ಪುನರುಚ್ಚರಿಸಿದರು.
ಶಾಂತಿ ಸಭೆಗೆ ಗೈರಾದವರ ಕುರಿತು ಮಾಹಿತಿ ಪಡೆದಿದ್ದೇನೆ. ಸಮುದಾಯಗಳನ್ನು ಮಾತ್ರವೇ ಕರೆದು ಸಭೆ ಮಾಡುವ ಪದ್ಧತಿ ಇದೆ. ಅದು ಯಾಕೆ ಮಾಡಿದ್ದಾರೋ ಗೊತ್ತಿಲ್ಲ. ಅದಕ್ಕೆ ಎಲ್ಲರನ್ನ ಸೇರಿಸಿ ಶಾಂತಿ ಸಭೆ ಮಾಡಬೇಕು. ಯಾರೆಲ್ಲ ಬರಲ್ಲ ಎಂದಿದ್ದಾರೆ ಅದನ್ನು ಗಮನಿಸುತ್ತೇವೆ ಎಂದರು.
ದಾಖಲೆ ಇಲ್ಲದೇ ಬಂಧನ ಆಗುತ್ತಾ? ಸಾಧ್ಯವಾ?
ಸ್ನೇಹಮಹಿ ಕೃಷ್ಣ ಬಂಧನ ವಿಚಾರ ಮಾತನಾಡಿದ ಅವರು, ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ನವರು, ಸರ್ಕಾರದ ವಿರುದ್ಧ ಮಾತನಾಡಿದ ತಕ್ಷಣಕ್ಕೆ ಬಂಧನವಾಗುತ್ತಾರೆ ಮರು ಪ್ರಶ್ನೆ ಮಾಡಿದರು. ಪುರಾವೆ ಇಲ್ಲದೇ ಏನು ಆಗಲ್ಲ. ಅದರಲ್ಲೂ ನಮ್ಮ ರಾಜ್ಯದಲ್ಲಿ ಅಂಥದ್ದು ಆಗಲ್ಲ. ದಾಖಲೆ ಪರಿಶೀಲನೆ ಮಾಡಲಾಗುತ್ತದೆ. ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುತ್ತೇವೆ ಎಂದರು. ಯಾರಾದರೂ ಅಷ್ಟೇ ಓಲೈಕೆ ಪ್ರಶ್ನೆಯೇ ಇಲ್ಲ.
ಒಲೈಕೆ ರಾಜಕಾರಣ ಕುರಿತು ಬಿಜೆಪಿ ದೂರಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಓಲೈಕೆ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಇಲ್ಲಿ ಕಾನೂನು ಎಲ್ಲರಿಗೂ ಒಂದೇ, ಅವರಿಗೊಂದು ಇವರಿಗೊಂದು ಮಾಡಲು ಬರುವುದಿಲ್ಲ. ಬಾಗಲಕೋಟೆಯಲ್ಲಿ ಕಲ್ಲು ತೂರಾಟ ಮಾಡಿದವರ ರಕ್ಷಣೆ ಮಾಡಲ್ಲ. ಗಲಾಟೆ ಮಾಡಿದವರಿಗೆ ರಕ್ಷಣೆ ಮಾಡಲು ಆಗುವುದಿಲ್ಲ. ಪೊಲೀಸರು ತನಿಖೆ ನಡೆಸಿ ಬಂಧಿಸುತ್ತಾರೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಸಹ ಎಚ್ಚರಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದರಲ್ಲಿ ಓಲೈಕೆ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.












Click it and Unblock the Notifications