'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ..ಕಳಂಕದ ಕಪ್ಪುಮಸಿ ನಿಮ್ಮನ್ನು ಆವರಿಸಿಕೊಂಡಿದೆ'
ಬೆಂಗಳೂರು, ಸೆಪ್ಟೆಂಬರ್ 25: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಿದೆ. ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ತೀರ್ಮಾನವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ ಬೆನ್ನಲ್ಲೇ ಇದೀಗ ಜನಪ್ರತಿನಿಧಿಗಳ ಕೋರ್ಟ್ನಲ್ಲೂ ಸಹ ಸಿಎಂ ಸಿದ್ದರಾಮಯ್ಯಗೆ ಹಿನ್ನೆಡೆಯಾಗಿದೆ. ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ ಹೊರಡಿಸಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಮುಡಾ ಹಗರಣದ ವಿಚಾರವಾಗಿ ನಿಮ್ಮ ವಿರುದ್ಧ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ಹೈಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಮೈಸೂರು ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ತನಿಖೆ ನಡೆಸಬೇಕೆಂದು ಆದೇಶ ನೀಡಿದೆ.

ಘನತೆವೆತ್ತ ರಾಜ್ಯ ಪಾಲರನ್ನು ಪಕ್ಷಪಾತಿಗಳು ಎಂದು ಜರಿದಿರಿ. ಅದಕ್ಕೆ ಘನ ಉಚ್ಚ ನ್ಯಾಯಾಲಯವೇ ನಿನ್ನೆ ಉತ್ತರಕೊಟ್ಟಿತು. ನಿಮ್ಮ ಮೇಲಿನ ಆರೋಪದಲ್ಲಿ ಹುರಳಿದೆ ಎಂಬುದನ್ನೂ ಉಲ್ಲೇಖಿಸಿತು. ಇಂದು ನಿಮ್ಮನ್ನು ಆರೋಪಿಯನ್ನಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಎರಡೂ ನ್ಯಾಯಾಲಯಗಳ ತೀರ್ಪುಗಳು ನೀವು ತಪ್ಪಿತಸ್ಥರೆಂಬ ಭಾವ ರಾಜ್ಯದ ಜನತೆಯಲ್ಲಿ ಮೂಡಲು ಪೂರಕವಾಗಿವೆ. ಇಷ್ಟಾಗಿಯೂ 'ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ' ಎಂಬಂತೆ ನಡೆದು ಕೊಳ್ಳುತ್ತಿದ್ದೀರಿ, ಈಗಾಗಲೇ ಕಳಂಕದ ಕಪ್ಪುಮಸಿ ನಿಮ್ಮನ್ನು ಆವರಿಸಿಕೊಂಡಿದೆ. ಇನ್ನಾದರೂ ರಾಜ್ಯದ ನೈತಿಕ ರಾಜಕಾರಣದ ಪರಂಪರೆಯ ಘನತೆ ಕುಗ್ಗದಂತೆ ನಡೆದುಕೊಳ್ಳಿ ಎಂದರು.

ಆರೋಪ ಕೇಳಿಬಂದ ತಕ್ಷಣ ಅಧಿಕಾರ ತ್ಯಜಿಸಿ ನೈತಿಕತೆ ಮೆರೆದ ರಾಜಕೀಯ ಧುರೀಣರ ಉದಾಹರಣೆಗಳು ಇತಿಹಾಸದ ಪುಟದಲ್ಲಿದೆ. ಟೆಲಿಪೋನ್ ಕದ್ದಾಲಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಮಕೃಷ್ಣ ಹೆಗಡೆಯವರ ಆದರ್ಶದ ನೆರಳಿನಲ್ಲಿ ಅಧಿಕಾರದ ಸವಿಯುಂಡವರು ತಾವು ಎಂಬುದನ್ನು ಮರೆತಂತೆ ವರ್ತಿಸಬೇಡಿ.
ಹಗರಣದ ಆರೋಪ ಹೊತ್ತು ನ್ಯಾಯಾಲಯದಲ್ಲಿ ಆರೋಪಿ ಎಂಬ ತೀರ್ಪು ಬಂದರೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತ ಭಂಡ ಮುಖ್ಯಮಂತ್ರಿ ಎಂಬ ಕಪ್ಪು ಚುಕ್ಕೆಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಸಿದ ಐತಿಹಾಸಿಕ ಪ್ರಮಾದಕ್ಕೆ ಕಾರಣರಾಗಬೇಡಿ, ನಿಮ್ಮ ಭಂಡತನದ ನಡೆಯನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸಲಾರರು ಎಂದು ಎಚ್ಚರಿಕೆ ನೀಡಿದರು.
'ನೈತಿಕತೆಯ ರಾಜಕೀಯವನ್ನು' ಎಂದೋ ಮೂಲೆಗೆ ಸರಿಸಿರುವ ಕಾಂಗ್ರೆಸ್ ಹೈಕಮಾಂಡ್ ತನ್ನ ಅಜೆಂಡ ಏನಿದ್ದರೂ ಭ್ರಷ್ಟರನ್ನು ರಕ್ಷಿಸುವುದು, ದೇಶದ ಕಾನೂನನ್ನು ಉಲ್ಲಂಘಿಸುವವರನ್ನು ಉತ್ತೇಜಿಸುವುದೇ ತಮ್ಮ ಆದ್ಯತೆ ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕರಣದಲ್ಲೂ ತೋರಿಸಿಕೊಟ್ಟಿದೆ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.












Click it and Unblock the Notifications