ದಸರಾ ಮೊದಲ ದಿನವೇ "ಘಜ್ನಿ ಮಹಮದ್ ಸಂಸ್ಕೃತಿ" ಎಂದ ವಿಜಯೇಂದ್ರ, ಯಾಕೆ ?
ದಸರಾ ಹಬ್ಬದ ಮೊದಲ ದಿನವೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘಜನಿ ಮಹಮದ್ ಸಂಸ್ಕೃತಿ ಮೆರೆದಿದೆ ಎಂದು ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಕಿಡಿಕಾರಿದ್ದಾರೆ. ದಸರಾದ ಮೊದಲ ದಿನವೇ ಕರ್ನಾಟಕದಲ್ಲಿ ಮಹನೀಯರಿಗೆ ಅವಮಾನ ಮಾಡಲಾಗಿದೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಈ ಘಟನೆಯು ನಾಡಹಬ್ಬಕ್ಕೆ ಬಳಿದ ಕಪ್ಪು ಚುಕ್ಕಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಯಾವ ವಿಷಯದ ಬಗ್ಗೆ ಈ ರೀತಿ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.
ಹಿಂದೂ ದೇವಾಲಯಗಳನ್ನು ಧ್ವಂಸ ಗೊಳಿಸಿದ ಕುಖ್ಯಾತಿಯ ಘಜ್ನಿ ಮಹಮದ್‌ಗೆ ಇದೆ. ಇದೀಗ ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರ ಅದೇ ಮಾದರಿಯ ಸಂಸ್ಕೃತಿಯನ್ನು ನಾಡ ಹಬ್ಬದ ದಿನವೇ ಮೆರೆದಿದೆ. ಕನ್ನಡ ನಾಡಿನ ಮಹನೀಯರನ್ನು ಅವಮಾನಿಸುವ ಮೂಲಕ ನಾಡಹಬ್ಬಕ್ಕೆ ಕಪ್ಪುಮಸಿ ಬಳೆಯಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ದಸರಾ ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಒಂದು ಭಾಗವಾಗಿದೆ.

ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ನಾಡಿನ ಕಲೆ, ಸಂಸ್ಕೃತಿಯ ವೈಭವವನ್ನು ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಇದನ್ನು ಆಸ್ವಾದಿಸಲು ಬರುವ ಪ್ರೇಕ್ಷಕ ವೃಂದಕ್ಕೆ ಕನ್ನಡ ನಾಡು,ನುಡಿ, ಪರಂಪರೆಗೆ ಮಹಾನ್ ಕೊಡುಗೆ ಕೊಟ್ಟ ಮಹನೀಯರನ್ನು ಸ್ಮರಿಸುವ ನಾಮಫಲಕಗಳನ್ನು ಅಳವಡಿಸಲಾಗುತ್ತಿತ್ತು. ಆದರೆ, ಈ ಬಾರಿ ಆಗಿರುವುದೇನು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದ ಮಹನೀಯರಾದ ಕನಕದಾಸರು, ಪುರಂದರದಾಸರು, ದ.ರಾ ಬೇಂದ್ರೆ, ವಿ.ಕೃ ಗೋಕಾಕ್, ಟಿ.ಎನ್. ಬಾಲಕೃಷ್ಣ, ಕುವೆಂಪು, ಡಾ.ರಾಜ್ ಕುಮಾರ್, ಸಂಗೀತ ದಿಗ್ಗಜರಾದ ವಾಸುದೇವಾಚಾರ್ಯ, ಪಿಟೀಲು ಚೌಡಯ್ಯ ಇಂತಹ ಅನೇಕ ಮಹನೀಯರ ನಾಮಫಲಕಗಳನ್ನು ಅಳವಡಿಸಿ ವಸ್ತು ಪ್ರದರ್ಶನಕ್ಕೆ ಬರುವವರಿಗೆ ಅವರನ್ನು ಸ್ಮರಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿತ್ತು.
“ದಸರೆಯ ಮೊದಲ ದಿನವೇ
— Vijayendra Yediyurappa (@BYVijayendra) October 3, 2024
ಘಜನಿ ಮಹಮದ್ ಸಂಸ್ಕೃತಿ ಮೆರೆದ ಕಾಂಗ್ರೆಸ್ ಸರ್ಕಾರ"
ಕಾಂಗ್ರೆಸ್ ಸರ್ಕಾರ ಹಿಂದೂ ದೇವಾಲಯಗಳನ್ನು ಧ್ವಂಸ ಗೊಳಿಸಿದ ಕುಖ್ಯಾತಿಯ ಘಜ್ನಿ ಮಹಮದ್ ನ ಸಂಸ್ಕೃತಿಯನ್ನು ನಾಡ ಹಬ್ಬ ದಸರೆಯ ಸಂದರ್ಭದಲ್ಲಿ ಮೆರೆದು ಕನ್ನಡ ನಾಡಿನ ಮಹನೀಯರನ್ನು ಅವಮಾನಿಸಿದೆ, ಇದು ನಾಡಹಬ್ಬಕ್ಕೆ ಬಳಿದ ಕಪ್ಪುಮಸಿಯಾಗಿದೆ.
ಈ ಹಿಂದೆ ಕರ್ನಾಟಕದ… pic.twitter.com/qSzvQQX4OZ
ಆದರೆ, ಈಚೆಗೆ ಮಾಜಿ ಮೇಯರ್ ಅಯೂಬ್ ಖಾನ್ ಅವರನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್ ನೇಮಿಸಿದೆ. ಈಗ ನಾಡಹಬ್ಬ ದಸರೆಯ ನವರಾತ್ರಿಯ ಪ್ರಾರಂಭದಂದೇ ನಮ್ಮ ಪರಂಪರೆ, ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಮಹಾನ್ ಕೊಡುಗೆ ಕೊಟ್ಟ ಮಹಾನ್ ಸಾಧಕ ಮಹನೀಯರುಗಳ ಸ್ಮರಿಸುವ ಫಲಕಗಳನ್ನೆಲ್ಲ ಕಿತ್ತೆಸೆಯಲಾಗಿದೆ. ಈ ಮೂಲಕ ಘಜ್ನಿ ಸಂಸ್ಕೃತಿಯನ್ನು ಪ್ರದರ್ಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕ್ಷಮೆಯಾಚನೆಗೆ ಆಗ್ರಹ: ಮೈಸೂರಿನಲ್ಲಿ ಮಹನೀಯರ ನಾಮಫಲಕಗಳನ್ನು ಹಾನಿಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿ.ವೈ ವಿಜಯೇಂದ್ರ ಅವರು, ಕೂಡಲೇ ಈಗಾಗಲೇ ಇದ್ದ ಸ್ಥಳದಲ್ಲೇ ಮಹಾನೀಯರ ನಾಮಫಲಕಗಳನ್ನು ಅಳವಡಿಸಬೇಕು. ಅಲ್ಲದೇ ರಾಜ್ಯ ಕಾಂಗ್ರೆಸ್ ಸರ್ಕಾರವು ನಾಡಿನ ಜನರ ಕ್ಷಮೆಯಾಚಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ, ಅವರ ನೆರಳಿನಲ್ಲೇ ನಡೆದಿರುವ ಈ ದುಷ್ಕೃತ್ಯದ ಹೊಣೆ ಹೊರಬೇಕು ಹಾಗೂ ಜನರ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಘಟನೆಯ ಹಿನ್ನೆಲೆ ಏನು: ಮೈಸೂರಿನಲ್ಲಿ ಪುರಂದರದಾಸರು, ಕನಕದಾಸರು, ದ.ರಾ ಬೇಂದ್ರೆ, ಕುವೆಂಪು, ಡಾ.ರಾಜ್ ಕುಮಾರ್, ವಿ.ಕೃ ಗೋಕಾಕ್, ಟಿ.ಎನ್. ಬಾಲಕೃಷ್ಣ, ಸಂಗೀತ ದಿಗ್ಗಜರುಗಳಾದ ವಾಸುದೇವಾಚಾರ್ಯ, ಪಿಟೀಲು ಚೌಡಯ್ಯ ಸೇರಿದಂತೆ ಹಲವು ಮಹಾನೀಯರ ನಾಮಫಲಕಗಳನ್ನು ಅಳವಡಿಸಲಾಗಿದೆ. ಆದರೆ, ಇದರಲ್ಲಿ ಕೆಲವು ಮಹಾನೀಯರ ನಾಮಫಲಕಗಳನ್ನು ಹಾನಿಗೊಳಿಸಲಾಗಿದೆ. ಅಲ್ಲದೇ, ಎಲ್ಲಾ ನಾಮಫಲಕಗಳನ್ನು ಒಂದೆಡೆ ತಂದು ಬಿಸಾಕಲಾಗಿದೆ. ಹಾನಿಯಾಗಿರುವ ಹಾಗೂ ಎಲ್ಲೆಂದರಲ್ಲಿ ಬಿಸಾಕಿರುವ ನಾಮಫಲಕಗಳ ಚಿತ್ರವನ್ನು ವಿಜಯೇಂದ್ರ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications