18 ಬಿಜೆಪಿ ಶಾಸಕರ ಅಮಾನತು ಆದೇಶ ಹಿಂಪಡೆಯಲು ವಿಜಯೇಂದ್ರ ಮನವಿ
ಬೆಂಗಳೂರು, ಮಾರ್ಚ್ 22: ಕರ್ನಾಟಕ ವಿಧಾನಸಭೆ ಸದನದ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿಪಕ್ಷ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶ ಹೊರಡಿಸಿದ್ದಾರೆ. ಸ್ಪೀಕರ್ ಪೀಠಕ್ಕೆ ಅಗೌರವ ತೋರಿದವರನ್ನು ಕ್ಷಮಿಸಲು ಆಗಲ್ಲ ಎಂದು ಯು.ಟಿ ಖಾದರ್ ವಿಧಾನಸಭೆ ಕಲಾಪದಿಂದ ಆರು ತಿಂಗಳುಗಳ ಕಾಲ 18 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದಾರೆ.
ಸ್ಪೀಕರ್ ಈ ನಡೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸ್ಪೀಕರ್ ಅವರು ನಮ್ಮ ಶಾಸಕರನ್ನು ಅಮಾನತು ಮಾಡಿ ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. ಇದು ಖಂಡನೀಯ ಕೂಡಲೇ 18 ಶಾಸಕರನ್ನು ಅಮಾನತು ಮಾಡುವ ಆದೇಶವನ್ನು ಸ್ಪೀಕರ್ ಅವರು ಹಿಂಪಡೆಯಬೇಕು ಎಂದು ಮನವಿ ಮಾಡಿದರು.

ಇಂದು (ಮಾರ್ಚ್ 22) ಶನಿವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸುವ ಕುರಿತ ನಿರ್ಧಾರವು ಸಂಪೂರ್ಣವಾಗಿ ಕಾನೂನುಬಾಹಿರ, ಅಸಾಂವಿಧಾನಾತ್ಮಕ, ಏಕಪಕ್ಷೀಯ ಹಾಗೂ ಮನಸೋಇಚ್ಛೆಯಿಂದ ತೆಗೆದುಕೊಂಡ ತೀರ್ಮಾನ ಎಂದು ಆಕ್ಷೇಪಿಸಿದರು. ಅಲ್ಲದೇ ಸ್ಪೀಕರ್ ಅವರು ಶಾಸಕರು ಮಾತ್ರವಲ್ಲ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಖಂಡಿಸಿದರು.
ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಮೀಸಲಾತಿ ಕೊಟ್ಟ ರಾಜ್ಯ ಸರಕಾರದ ನಿರ್ಧಾರವನ್ನು ಬಿಜೆಪಿ ವಿರೋಧಿಸುತ್ತದೆ ಎಂದ ಬಿ.ವೈ. ವಿಜಯೇಂದ್ರ, ಸದನದ ಒಳಗೆ ಮತ್ತು ಹೊರಗೆ ಇದರ ವಿರುದ್ಧ ಹೋರಾಟ ನಡೆಸಿ ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ ಎಂದು ಘೋಷಿಸಿದರು.

ಹಿಂದೂಗಳಲ್ಲಿ ಹಾಗಿದ್ದರೆ ಬಡವರೇ ಇಲ್ಲವೇ
ನಮ್ಮ ಸಂವಿಧಾನದಲ್ಲಿ ಧರ್ಮ ಆಧರಿತ ಮೀಸಲಾತಿ ಕೊಡಲು ಅವಕಾಶವಿಲ್ಲ. ಇದರ ನಡುವೆ ಮೀಸಲಾತಿ, ಹೊರ ದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ 20 ಲಕ್ಷ ಬದಲು 30 ಲಕ್ಷ ಕೊಡುವುದಾಗಿ ತಿಳಿಸುವುದು, ಮುಸ್ಲಿಂ ಹೆಣ್ಮಕ್ಕಳಿಗೆ ಆತ್ಮರಕ್ಷಣೆ ಕಲೆಗೆ ಸಂಬಂಧಿಸಿ ಬಜೆಟ್‍ನಲ್ಲಿ ಹಣ ಮೀಸಲಿಟ್ಟಿರುವುದು ಸರಿಯೇ ಎಂದು ಪ್ರಶ್ನಿಸಿದ ವಿಜಯೇಂದ್ರ ಅವರು ಹಿಂದೂಗಳಲ್ಲಿ ಹಾಗಿದ್ದರೆ ಬಡವರೇ ಇಲ್ಲವೇ ಅವರಿಗೆ ಹೊರ ದೇಶಕ್ಕೆ ಉನ್ನತ ಶಿಕ್ಷಣಕ್ಕೆ ಹೋಗುವ ಕನಸುಗಳಿಲ್ಲವೇ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದರು.
ರಾಜ್ಯ- ದೇಶದಲ್ಲಿ ಹಿಂದೂ ಹೆಣ್ಣು ಮಕ್ಕಳ ಲವ್ ಜಿಹಾದ್‍ಗೆ ಬಲಿ ಆಗುತ್ತಿದ್ದಾರೆ. ಕಾಮಗಾರಿಯಲ್ಲಿ ಮುಸ್ಲಿಂ ಮೀಸಲಾತಿ ಅಸಾಂವಿಧಾನಿಕ ಎಂದು ಟೀಕಿಸಿದರು. ಧರ್ಮ ಆಧಾರಿತ ಮೀಸಲಾತಿ ಕೊಡಲಾಗದು ಎಂದು ಸಂವಿಧಾನ ಸ್ಪಷ್ಟವಾಗಿ ತಿಳಿಸಿದೆ. ಇದನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ವಿವರಿಸಿದರು. ಈ ಸಂಬಂಧ ಸುಪ್ರೀಂ ಕೋರ್ಟ್ ಸೇರಿ ವಿವಿಧ ಕೋರ್ಟ್‌ಗಳ ತೀರ್ಪನ್ನು ಉಲ್ಲೇಖಿಸಿದರು. ಈ ತೀರ್ಪುಗಳು ನಮ್ಮ ಅನುಭವಿ ಮುಖ್ಯಮಂತ್ರಿಗಳಿಗೆ ತಿಳಿದಿದೆ. ಇದು ಸಂವಿಧಾನ ವಿರೋಧಿ ಎಂಬುದು ಗೊತ್ತಿದ್ದರೂ ನಾಡಿನ ಹಿಂದೂಗಳ ಮೇಲೆ ದೌರ್ಜನ್ಯ- ಅವಮಾನ ಮಾಡುವ ನಿರ್ಧಾರ ಖಂಡಿತ ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.

ಹೋರಾಟದ ಕುರಿತು ಪಕ್ಷದ ಮುಖಂಡರ ಜೊತೆ ಚರ್ಚಿಸಿದ್ದೇವೆ. ಅತಿ ಶೀಘ್ರದಲ್ಲಿ ಹೋರಾಟದ ರೂಪುರೇಷೆಯನ್ನು ಪ್ರಕಟಿಸುತ್ತೇವೆ. ಸದನದಲ್ಲಿ ಹಗಲು- ರಾತ್ರಿ ಧರಣಿ ಬಗ್ಗೆ ಚರ್ಚೆ ನಡೆದಿದೆ. ಜಿಲ್ಲೆಗಳಲ್ಲಿ ಸೋಮವಾರದಿಂದ ಹೋರಾಟ ನಡೆಯಲಿದೆ. ರಾಜ್ಯದಲ್ಲಿ ಜನಜಾಗೃತಿ ಮೂಡಿಸುವ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಸ್ಪೀಕರ್ ಅವರು ಯಾವ ಕಾರಣಕ್ಕಾಗಿ ನಮ್ಮ 18 ಶಾಸಕರನ್ನು ಅಮಾನತುಗೊಳಿಸುವ ನಿರ್ಧಾರ ಘೋಷಿಸಿದ್ದಾರೆ? ಎಂದ ಅವರು, ಹಣಕಾಸಿನ ಸಚಿವರಾದ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರಕಾರವು ಈ ರಾಜ್ಯದಲ್ಲಿರುವ ಮುಸಲ್ಮಾನರಿಗೆ ಸರಕಾರಿ ಕಾಮಗಾರಿಗಳಲ್ಲಿ ಶೇ. 4 ಮೀಸಲಾತಿ ನೀಡುವ ತೀರ್ಮಾನ ಕೈಗೊಂಡಿದೆ.
ಬಜೆಟ್‍ನಲ್ಲೂ ಅಲ್ಪಸಂಖ್ಯಾತರ ಓಲೈಕೆ- ಹಿಂದೂಗಳನ್ನು ಅವಮಾನಿಸುವ ಅನೇಕ ಘೋಷಣೆ ಮಾಡಿದ್ದಾರೆ. ಹಿಂದೂ ವಿರೋಧಿ ನೀತಿಗಳನ್ನು ಸಿದ್ದರಾಮಯ್ಯನವರು ಅನುಸರಿಸುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ನಿರಂತರ ಹೋರಾಟ ಮಾಡುತ್ತ ಬಂದಿದ್ದೇವೆ ಎಂದರು.
18 ಶಾಸಕರು ಹಾಗಿದ್ದರೆ ಭಯೋತ್ಪಾದಕರೇ?
ಕರ್ನಾಟಕ ವಿಧಾನಸಭೆಯಲ್ಲಿ ಸ್ಪೀಕರ್ ಅವರು ನಮ್ಮ ರಕ್ಷಣೆಗೆ ಬರಬೇಕಿತ್ತು. 6 ತಿಂಗಳು 18 ಜನಪ್ರತಿನಿಧಿಗಳನ್ನು ಅಮಾನತು ಮಾಡುವ ಸ್ಪೀಕರ್ ಅವರ ನಡೆಯು ಸರಿಯಲ್ಲ. ಅಮಾನತಾದವರು ವಿಧಾನಸಭಾ ಲಾಬಿ, ಸಭಾಂಗಣ ಪ್ರವೇಶಿಸುವಂತಿಲ್ಲ ಎಂದಿದ್ದಾರೆ. ಹಾಗಿದ್ದರೆ ಅವರು ಭಯೋತ್ಪಾದಕರೇ, ನಕ್ಸಲೈಟರೇ ಎಂದು ವಿಜಯೇಂದ್ರ ಪ್ರಶ್ನಿಸಿದರು.
ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿಸಿದ್ದಾರೆ. ಇದು ಶಾಸಕರ ಹಕ್ಕು ಮೊಟಕುಗೊಳಿಸುವ, ಹಕ್ಕು ಕಿತ್ತುಕೊಳ್ಳುವ ಕಾರ್ಯ ಎಂದು ಆಕ್ಷೇಪಿಸಿದರು. ಕ್ಷೇತ್ರಾಭಿವೃದ್ಧಿಗೆ ಎರಡು ಕಾಸು ಬಿಡುಗಡೆ ಮಾಡುವ ಯೋಗ್ಯತೆ ಸರಕಾರಕ್ಕೆ ಇಲ್ಲ. ಸ್ಪೀಕರ್ ಆದೇಶ ಅಸಾಂವಿಧಾನಾತ್ಮಕ, ಮನಸೋಇಚ್ಛೆಯದು ಎಂದು ಸರ್ಕಾರ ವಿರುದ್ಧ ಆರೋಪಿಸಿದರು.
ನಿನ್ನೆ ನಮ್ಮ ಶಾಸಕರು ಬಾವಿಗಿಳಿದು ಹೋರಾಟ ನಡೆಸುತ್ತಿರುವಾಗ ಏಕಾಏಕಿಯಾಗಿ ಅಮಾನತು ಮಾಡಿದ್ದು ಸಂಪೂರ್ಣ ಕಾನೂನುಬಾಹಿರ ಎಂದು ಟೀಕಿಸಿದರು. ಸಂವಿಧಾನದ ಬಗ್ಗೆ ಪಾಠ ಹೇಳುವ, ಪದೇಪದೇ ಡಾ. ಅಂಬೇಡ್ಕರರ ಹೆಸರು ದುರುಪಯೋಗ ಪಡಿಸಿಕೊಳ್ಳುವ ಮುಖ್ಯಮಂತ್ರಿಗಳು, ಕಾಂಗ್ರೆಸ್ ಮುಖಂಡರು ಬಜೆಟ್‍ನಲ್ಲಿ ತೆಗೆದುಕೊಂಡ ನಿರ್ಧಾರಗಳು ಕೇವಲ ಅಲ್ಪಸಂಖ್ಯಾತರ ಓಲೈಕೆಯಷ್ಟೇ ಅಲ್ಲ, ಹಿಂದೂಗಳನ್ನು ಅಪಮಾನಿಸುವ ನಿರ್ಧಾರ ಎಂದು ದೂರಿದರು.
ಈ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಹನಿಟ್ರ್ಯಾಪ್ ಕುರಿತ ಸಚಿವರ ಹೇಳಿಕೆ- ಮುಸ್ಲಿಮರಿಗೆ ಸಂವಿಧಾನ ವಿರೋಧಿಯಾಗಿ ಮೀಸಲಾತಿ ವಿಚಾರ ಮುಂದಿಟ್ಟು ನಾವು ಹೋರಾಟ ಮಾಡಿದ್ದೇವೆ. ಸ್ಪೀಕರ್ ನಡವಳಿಕೆ ತುಘಲಕ್ ದರ್ಬಾರ್‍ನಂತಿದೆ. ಹಿಟ್ಲರ್ ಸಂಸ್ಕೃತಿಯನ್ನು ನಾವು ನೋಡುತ್ತಿದ್ದೇವೆ ಎಂದು ಟೀಕಿಸಿದರು.
ಸಿದ್ದರಾಮಯ್ಯನವರು ಬೂಟುಗಾಲು ಹಾಕಿ ಬಾಗಿಲು ಒದ್ದು ಹಾಕಿದ್ದು, ಜಮೀರ್ ಅಹ್ಮದ್ ಸ್ಪೀಕರ್ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆಸಿದ್ದನ್ನು ಸದನದಲ್ಲಿ ನೋಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಧಾನಪರಿಷತ್ತಿನಲ್ಲಿ ಪಕ್ಷಗಳ ಬಲ, ಮೇಲ್ಮನೆಯಲ್ಲಿ ಹೋರಾಟ ಕುರಿತು ಮಾಹಿತಿ ನೀಡಿದರು. ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.












Click it and Unblock the Notifications