ಕರ್ನಾಟಕ; ಜುಲೈ 28ಕ್ಕೆ ಆಟೋ ಮುಷ್ಕರ, ಬೇಡಿಕೆಗಳು
ಬೆಂಗಳೂರು, ಜುಲೈ 13; ಕಾಂಗ್ರೆಸ್ ಪಕ್ಷದ ಕರ್ನಾಟಕದ ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ 'ಶಕ್ತಿ' ಯೋಜನೆ ಮೊದಲು ಜಾರಿಗೆ ಬಂದಿತು. ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಶೂನ್ಯ ದರದ ಟಿಕೆಟ್ ಪಡೆದು ಮಹಿಳೆಯರು ಉಚಿತವಾಗಿ ಸಂಚಾರ ನಡೆಸುವ ಯೋಜನೆ ಒಂದು ತಿಂಗಳು ಪೂರೈಸಿದ್ದು, ಯಶಸ್ವಿಯಾಗಿದೆ.
ಆದರೆ 'ಶಕ್ತಿ' ಯೋಜನೆ ಜಾರಿಗೆ ಬಂದ ಬಳಿಕ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಟೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಈ ಕುರಿತು ಸರ್ಕಾರಕ್ಕೆ ಸಹ ಆಟೋ ಚಾಲಕರು ಮನವರಿಕೆ ಮಾಡಿಕೊಟ್ಟಿದ್ದಾರೆ. 'ಶಕ್ತಿ' ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವಿರುದ್ಧ ಸಿಡಿಡೆದ್ದಿರುವ ಆಟೋ ಚಾಲಕರು ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಜುಲೈ 28ರಂದು ಆಟೋ ಸಂಚಾರ ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
10 ಸಾವಿರ ಪರಿಹಾರ ನೀಡಿ; ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಈ ಕುರಿತು ಮಾಹಿತಿ ನೀಡಿದ್ದಾರೆ. "ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜುಲೈ 28ರಂದು 21 ಆಟೋ ಸಂಘಟನೆಗಳು, ಖಾಸಗಿ ಬಸ್ ಒಕ್ಕೂಟ, ಶಾಲಾ ವಾಹನಗಳನ್ನು ಬಂದ್ ಮಾಡಿಸಿ ಅನಿರ್ದಿಷ್ಟಾವಧಿ ಮುಷ್ಕರ, ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ" ಎಂದು ಹೇಳಿದ್ದಾರೆ.
"ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಆಟೋ ಮತ್ತು ಟ್ಯಾಕ್ಸಿ ಚಾಲಕರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಆಟೋ ಚಾಲಕರಿಗೆ ಪ್ರತಿ ತಿಂಗಳು 10 ಸಾವಿರ ರೂ. ಪರಿಹಾರವನ್ನು ನೀಡಬೇಕು" ಎಂದು ಮಂಜುನಾಥ್ ಒತ್ತಾಯಿಸಿದರು.
ರಾಜ್ಯ ಸರ್ಕಾರದ ಮುಂದೆ ಅಸಂಘಟಿತ ವಾಣಿಜ್ಯ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 2 ಲಕ್ಷ ರೂ. ಸಾಲ ಸೌಲಭ್ಯ ನೀಡಬೇಕು, ಎಲೆಕ್ಟ್ರಿಕ್ ಆಟೋ ಮತ್ತು rapido ಬಂದ್ ಮಾಡಬೇಕು. ಓಲಾ ಮತ್ತು ಊಬರ್ ಕಂಪನಿಗೆ ನೋಂದಣಿ ನಿಲ್ಲಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು ಸೇರಿ ಪ್ರಮುಖ ನಗರದಲ್ಲಿ ಈಗಾಗಲೇ ಬೈಕ್ ಟ್ಯಾಕ್ಸಿಗಳ ಕಾರಣಕ್ಕೆ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದರು. ಬೈಕ್ ಟ್ಯಾಕ್ಸಿ ನಿಷೇಧಿಸಬೇಕು ಎಂದು ಸಾರಿಗೆ ಇಲಾಖೆಯನ್ನು ಒತ್ತಾಯಿಸಿದ್ದರು. ಈಗ 'ಶಕ್ತಿ' ಯೋಜನೆಯ ಕಾರಣದಿಂದ ಆಟೋದವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆದರ್ಶ ಆಟೋ ಯೂನಿಯನ್ ಕರೆ ನೀಡಿರುವ ರಾಜ್ಯವ್ಯಾಪ್ತಿ ಮುಷ್ಕರಕ್ಕೆ 21 ಆಟೋ ಸಂಘಟನೆಗಳು ಬೆಂಬಲ ನೀಡಿವೆ. ಇದರ ಜೊತೆಗೆ ಖಾಸಗಿ ಬಸ್ ಒಕ್ಕೂಟ, ಶಾಲಾ ವಾಹನಗಳು ಸಹ ಬೆಂಬಲ ನೀಡಿದರೆ ಜನರು ಮುಷ್ಕರದ ದಿನ ಸಂಚಾರ ನಡೆಸಲು ಪರದಾಡ ನಡೆಸಬೇಕಿದೆ.
ಖಾಸಗಿ ಬಸ್ ಮಾಲೀಕರು ಸಹ ಆಟೋ ಚಾಲಕರಂತೆ 'ಶಕ್ತಿ' ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯೋಜನೆ ಜಾರಿಗೆ ಬಂದ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ, ನಮಗೆ ಪರಿಹಾರ ನೀಡಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಾರಿಗೆ ಸಚಿವರ ಹೇಳಿಕೆ; 'ಶಕ್ತಿ' ಯೋಜನೆ ಜಾರಿಗೆ ಬಂದ ಬಳಿಕ ಆಟೋ ಚಾಲಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿದ್ದರು. "ಆಟೋ ಚಾಲಕರಿಗೆ ಸಮಸ್ಯೆಯಾದರೆ ಸರ್ಕಾರ ಅವರ ನೆರವಿಗೆ ಧಾವಿಸುವ ಬಗ್ಗೆ ನಿರ್ಧಾರ ಮಾಡಲಿದೆ" ಎಂದು ಹೇಳಿದ್ದರು.
ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ್ದ ಸಚಿವರು, "ಜೂನ್ 11ರಂದು ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದೆ. ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಒಂದು ತಿಂಗಳು ಪೂರೈಸಲಿ. ಆಟೋದವರಿಗೆ ಏನು ತೊಂದರೆ ಆಗಿದೆ ಎಂದು ನೋಡೋಣ" ಎಂದು ತಿಳಿಸಿದ್ದರು.
"ಯಾವ ಆಟೋ ಚಾಲಕರ ಸಂಘದವರು ನನ್ನ ಬಳಿ ಬಂದು ಕಷ್ಟ ಎಂದು ಹೇಳಿಲ್ಲ. ಯೋಜನೆ ಒಂದು ತಿಂಗಳು ಪೂರೈಸಲಿ ಬಳಿಕ ಪರಿಶೀಲನೆ ಮಾಡಿ ಆಟೋದವರಿಗೆ ಸಮಸ್ಯೆಯಾದರೆ ಪರಿಹಾರವನ್ನು ಸರ್ಕಾರ ಕೊಡಲಿದೆ" ಎಂದು ಸಾರಿಗೆ ಸಚಿವರು ಭರವಸೆ ನೀಡಿದ್ದರು.












Click it and Unblock the Notifications