ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆರೆ ಒತ್ತುವರಿ ಮಾಡಿದ್ರೆ ಆರು ತಿಂಗಳು ಜೈಲು ಶಿಕ್ಷೆ

|
Google Oneindia Kannada News

ಬೆಂಗಳೂರು, ಮೇ 29 : ರಾಜ್ಯ ಸರ್ಕಾರ ಕೆರೆಗಳನ್ನು ಸಂರಕ್ಷಿಸಲು ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಕೆರೆ ಒತ್ತುವರಿ ಮಾಡಿದವರಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸುವ ಕಾಯಿದೆ ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದು, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತ ಮಸೂದೆ ಮಂಡನೆಯಾಗಲಿದೆ.

ಬುಧವಾರ ಸಂಜೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ 'ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2014'ಕ್ಕೆ ಅನುಮೋದನೆ ನೀಡಲಾಗಿದ್ದು, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಲಿದೆ ಎಂದು ಸಭೆಯ ನಂತರ ಕಾನೂನು ಸಚಿವ ಟಿಬಿ ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನೂತನ ಕಾಯ್ದೆ ಜಾರಿಗೆ ಬಂದರೆ, ಜಲಮೂಲಗಳ ರಕ್ಷಣೆ, ಕೆರೆಗಳ ಒತ್ತುವರಿ ತೆರವು, ಅತಿಕ್ರಮಣ ಮಾಡಿಕೊಂಡವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಕಾಯ್ದೆ ಜಾರಿಗೊಂಡ ಬಳಿಕ ಕೆರೆ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದ್ದು, ಒತ್ತುವರಿ ತೆರವು, ಜೀರ್ಣೋದ್ಧಾರ, ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಶಿಕ್ಷಿಸುವ ಶಾಸನಾತ್ಮಕ ಅಧಿಕಾರ ಪ್ರಾಧಿಕಾರಕ್ಕೆ ದೊರೆಯಲಿದೆ ಎಂದು ಸಚಿವರು ಹೇಳಿದರು.

ಕೆರೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಕ್ಕೆ ಬಂದರೆ, ನಗರಪಾಲಿಕೆ, ನಗರಸಭೆ, ಪುರಸಭೆ, ಗ್ರಾ.ಪಂ, ಜಿ.ಪಂ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳನ್ನು ಸಂರಕ್ಷಿಸುವ ಶಾಸನಾತ್ಮಕ ಅಧಿಕಾರ ಅಭಿವೃದ್ಧಿ ಪ್ರಾಧಿಕಾರಕ್ಕೆ ದೊರೆಯಲಿದೆ. ಒಂದು ಕಾಲದಲ್ಲಿ 34 ಸಾವಿರ ಕೆರೆಗಳಿದ್ದವು. ಈಗಿನ ದಾಖಲೆಗಳ ಪ್ರಕಾರ 28 ಸಾವಿರ ಕೆರೆಗಳು ಮಾತ್ರ ಇವೆ. ಆದ್ದರಿಂದ ಕೆರೆಗಳ ಸಂರಕ್ಷಣೆಗಾಗಿ ಈ ಕಾಯ್ದೆ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು. ಸಂಪುಟದ ಇತರ ನಿರ್ಣಯಗಳು

ಜಾತಿ ಸಮೀಕ್ಷೆಗೆ ವಿಶೇಷಾಧಿಕಾರಿ ನೇಮಕ

ಜಾತಿ ಸಮೀಕ್ಷೆಗೆ ವಿಶೇಷಾಧಿಕಾರಿ ನೇಮಕ

ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿವೃತ್ತ ಐಎಎಸ್ ಅಧಿಕಾರಿ ಡಿ.ಎನ್.ನಾಯಕ್ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಮೂಲಕ ಈ ಸಮೀಕ್ಷೆ ನಡೆಯಲಿದೆ. ಹಿಂದುಳಿದ ವರ್ಗಗಳ ಸ್ಥಿತಿಗತಿ ಕುರಿತು ಶೀಘ್ರ ಸಮೀಕ್ಷೆ ನಡೆಸಿ, ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ.

ಪಡಿತರ ಅದಾಲತ್ ನಡೆಸಲು ತೀರ್ಮಾನ

ಪಡಿತರ ಅದಾಲತ್ ನಡೆಸಲು ತೀರ್ಮಾನ

ಸರ್ಕಾರ ತನ್ನ ಕನಸಿನ ಅನ್ನಭಾಗ್ಯ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದೆ. ಸದ್ಯ ಪ್ರತಿ ತಿಂಗಳು ಪಡಿತರ ಅದಾಲತ್ ನಡೆಸಿ, ಯೋಜನೆ ಬಗ್ಗೆ ಜನರಿಂದ ದೂರು ಸ್ವೀಕರಿಸಲು ಮುಂದಾಗಿದೆ. ಅನ್ನಭಾಗ್ಯ ಯೋಜನೆ ಜಾರಿಗೆ ಬಂದಿರುವುದರಿಂದ ಪ್ರತಿ ತಿಂಗಳ ಮೊದಲ 10 ದಿನ ಕಡ್ಡಾಯವಾಗಿ ಪಡಿತರ ಅಂಗಡಿಯಗಳು ತೆರೆದಿರಬೇಕು. ಈ ಅವಧಿಯಲ್ಲಿಯೇ ಅದಾಲತ್ ನಡೆಸಲು ತೀರ್ಮಾನಿಸಲಾಗಿದೆ.

ಹಿಂಬಾಕಿ ಪಾವತಿ ಮಾಡಲು ಒಪ್ಪಿಗೆ

ಹಿಂಬಾಕಿ ಪಾವತಿ ಮಾಡಲು ಒಪ್ಪಿಗೆ

4ನೇ ವೇತನ ಆಯೋಗದ ಶಿಫಾರಸ್ಸಿನಂತೆ ಮೈಸೂರು ಮಿನರಲ್ಸ್ ಲಿಮಿಟೆಡ್ ನ 772 ಸಿ ದರ್ಜೆ ಹಾಗೂ 3,400 ಡಿ ದರ್ಜೆ ನೌಕರರ ಹಿಂಬಾಕಿ ಪಾವತಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇದರ ಒಟ್ಟು ಮೊತ್ತ 11 ಕೋಟಿಯಾಗಲಿದೆ.

ಜೂನ್ 23ರಿಂದ ವಿಧಾನಮಂಡಲ ಅಧಿವೇಶನ

ಜೂನ್ 23ರಿಂದ ವಿಧಾನಮಂಡಲ ಅಧಿವೇಶನ

ಜೂನ್ 23ರಿಂದ ಜುಲೈ 30ರ ವರೆಗೆ ವಿಧಾನಮಂಡಲ ಅಧಿವೇಶನ ನಡೆಸುವುದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇತರ ಪ್ರಮುಖ ನಿರ್ಣಯಗಳು

ಇತರ ಪ್ರಮುಖ ನಿರ್ಣಯಗಳು

* ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿನಿಯರ ಬೋಧನಾ ಶುಲ್ಕ ಹಾಗೂ ಪ್ರಯೋಗಾಲಯ ಶುಲ್ಕ ವಿನಾಯಿತಿಗೆ 25 ಕೋಟಿ ರೂ. ಅನುದಾನ.

*ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಸರ್ಕಾರಿ ಟೂಲ್ ತರಬೇತಿ ಕೇಂದ್ರ ಸ್ಥಾಪನೆಗೆ 28.65 ಕೋಟಿ ರೂ. ಅನುದಾನ.

*ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ವರ್ತುಲ ರಸ್ತೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ 34 ಕೋಟಿ ರೂ. ನೀಡಲು ಒಪ್ಪಿಗೆ.

English summary
The Karnataka Cabinet on Wednesday decided to enact legislation setting up a tank authority to protect lakes from land sharks, recover the already encroached lake lands and take necessary steps to rejuvenate them across the State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X