ಅಟಲ್ ಬಿಹಾರಿ ವಾಜಪೇಯಿ ಪುತ್ಥಳಿ-ಉದ್ಯಾನ ಅನಾವರಣ: ಬೊಮ್ಮಾಯಿ
ಬೆಂಗಳೂರು, ಡಿಸೆಂಬರ್ 25: ಸ್ವತಂತ್ರ್ಯಾ ನಂತರ ಯಾವುದಾದರೂ ಪ್ರಧಾನಮಂತ್ರಿಗಳಿಗೆ ಅಜಾತಶತ್ರು ಎನ್ನುವ ನಾಮಾಂಕಿತವಿದ್ದರೆ, ಅದು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಭಾನುವಾರ ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರ ಕಂಚಿನ ಪ್ರತಿಮೆ ಹಾಗೂ ಉದ್ಯಾನವನದ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಎಲ್ಲರನ್ನು ಪ್ರೀತಿಸುವಂತಹ, ಆಧರಿಸುವಂತಹ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದೇಶವನ್ನು ಮುನ್ನಡೆಸಿದ ಸಮರ್ಥ ಪ್ರಧಾನಿಗಳು. ಅಟಲ್ ಬಿಹಾರಿ ವಾಜಪೇಯಿ ಅವರ ಶಕೆ ಬೇರೆಲ್ಲರಿಗಿಂತ ವಿಭಿನ್ನವಾಗಿತ್ತು. ಸುಮಾರು 26 ಪಕ್ಷಗಳನ್ನೊಳಗೊಂಡ ಸಮ್ಮಿಶ್ರ ಸರ್ಕಾರವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ. ಅದಕ್ಕಿಂತ ಪೂರ್ವದಲ್ಲಿ ಅವರಿಗೆ ಸಂಖ್ಯಾಬಲ ಇಲ್ಲದ ಸಂದರ್ಭದಲ್ಲಿ ರಾಜೀನಾಮೆ ನೀಡಿ ಜನರಿಗೆ ಬಳಿಗೆ ಹೋಗಿರುವ ಏಕಮೇವ ನಾಯಕ ಅಟಲ್ ಬಿಹಾರಿ ವಾಜಪೇಯಿ ಎಂದು ಸ್ಮರಿಸಿದರು.

ಸರ್ವ ಶಿಕ್ಷಣ ಅಭಿಯಾನದಡಿ ಕ್ರಾಂತಿ
ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದ್ದು, ನವ ಭಾರತ ನಿರ್ಮಾಣಕ್ಕೆ ನಾಂದಿಯಾಗಿದೆ. ಪೋಕಾರ್ನ್ ಬ್ಲ್ಯಾಷ್ಟ್ ಮಾಡಿ ಆತ್ಮ ಬಲ ಹೆಚ್ಚಿಸಿದ್ದನ್ನು ನಾವು ಸ್ಮರಿಸಿಬೇಕು. ಶಿಕ್ಷಣದಲ್ಲಿ ಅಮೂಲ್ಯಾಗ್ರಹವಾದ ಬದಲಾವಣೆ ಅವರು ತಂದಿದ್ದಾರೆ. ಸರ್ವ ಶಿಕ್ಷಣ ಅಭಿಯಾನದ ಮೂಲಕ ಶಿಕ್ಷಣದ ಕ್ರಾಂತಿಯನ್ನು ಮಾಡಿದ್ದಾರೆ. ಅವರ ದಾರಿಯಲ್ಲಿ ನಮ್ಮ ರಾಜ್ಯ ಸರ್ಕಾರ ನಡೆಯುತ್ತಿದೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ವಿವೇಕ ಕಾರ್ಯಕ್ರಮದ ಮೂಲಕ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದು, ಆದರ್ಶವಾದ ಶಾಲೆಗಳ ಕಟ್ಟುವುದಕ್ಕೆ ಅಟಲ ಬಿಹಾರಿ ವಾಜಪೇಯಿ ಅವರು ಪ್ರೇರಣೆ ಆಗಿದ್ದಾರೆ ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿಗೆ ಸಾಫ್ಟವೇರ್ ಪಾರ್ಕ್ ನಿರ್ಮಾಣ ಕಾರಣ
ಹಿಂದಿನ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಅಂತ ಕರೆ ಕೊಟ್ಟಿದ್ದರು. ನವ ಭಾರತ ನಿರ್ಮಾಣದ ಕಲ್ಪನೆಗೆ ಅಟಲ್ ಬಿಹಾರಿ ವಾಜಪೇಯಿ ಅವರು ಜೈ ಜವಾನ್, ಜೈ ಕಿಸಾನ್ , ಜೈ ವಿಜ್ಞಾನ ಎಂದು ಕರೆ ಕೊಟ್ಟಿದ್ದರು. ವಿಜ್ಞಾನದ ಮಹತ್ವವನ್ನು ಅರಿತ ಅವರು ಇವತ್ತು ನಮ್ಮ ಐಟಿಬಿಟಿ ಮತ್ತು ಎಲ್ಲಾ ಬೆಳವಣಿಗೆಗಾಗಿ ಕೇಂದ್ರ ಸರ್ಕಾರದ ಐಟಿ ಪಾಲಿಸಿಗಳನ್ನು ಮಾಡಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ಇವತ್ತು ಬೆಂಗಳೂರು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಕ್ಕೆ ಅವರ ಕಾಲದಲ್ಲಿ ಸಾಫ್ಟವೇರ್ ಪಾರ್ಕ್ ನಿರ್ಮಾಣ ಆಗಿದ್ದೆ ಮುಖ್ಯ ಕಾರಣ ಎಂದು ಬೊಮ್ಮಾಯಿ ತಿಳಿಸಿದರು.

ವಾಟಪೇಯಿಯವರ ಆದರ್ಶ ಮಾರ್ಗದರ್ಶನ ಆಗಿದೆ
ವಾಜಪೇಯಿ ಅವರ ರಾಜಕಾರಣ, ಅವರ ವಿಚಾರ, ಮಾತುಗಳು ಸದಾ ಪ್ರಜಾಪ್ರಭುತ್ವದ ಏಳಿಗೆಗಾಗಿ ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಆದರ್ಶಗಳು ನಮಗೆ ಮಾರ್ಗದರ್ಶನವಾಗಿದೆ. ವಾಟಪೇಯಿಯವರು ಹಾಕಿಕೊಟ್ಟ ದಾರಿಯಲ್ಲಿ ನಾವು ಮುನ್ನೆಡೆಯುತ್ತೆವೆ. ಅವರ ಹುಟ್ಟಿದ ದಿನದಂದು ಈ ಮೂರ್ತಿ ಅನಾವರಣ ಮಾಡಿದ್ದು ಅತ್ಯಂತ ಒಳ್ಳೆಯ ಕೆಲಸ. ಈ ಕೆಲಸ ಮಾಡಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ದೇಶದಲ್ಲಿ ಅತ್ಯುತ್ತಮ ಆಡಳಿತವನ್ನು ನೀಡಿದವರು ಅಟಲ್ ಬಿಹಾರಿ ವಾಜಪೇಯಿ ಅವರು. ಈ ದಿನವನ್ನು ಸುಶಾಸನ ದಿನ ಅಂತಲೂ ನಾವು ಕರೆಯುತ್ತೇವೆ. ಜನರ ಮನದಾಳದಲ್ಲಿ ಅವರು ಸದಾ ಅಚ್ಚಳಿಯದೆ ಉಳಿಯುತ್ತಾರೆ ಎಂದು ವಿವರಿಸಿದರು.

ಸಾಧಕರಿಗೆ ಸಾವು ಅಂತ್ಯವಲ್ಲ: ಸಿಎಂ
"ಸಾಧಕರಿಗೆ ಸಾವು ಅಂತ್ಯವಲ್ಲ. ಸಾವಿನ ನಂತರ ಬದುಕುವವನು ಸಾಧಕ" ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಇವತ್ತು ಅವರು ನಮ್ಮ ಜೊತೆಗೆ ಇಲ್ಲ. ಆದರೆ ಅವರ ಮೌಲ್ಯಗಳು, ವಿಚಾರಗಳು ನಮಗೆ ದಾರಿದೀಪವಾಗಿರುತ್ತದೆ. ಅದರ ಮುಖಾಂತರ ನಮ್ಮ ಕೆಲಸ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಲೋಕಸಭಾ ಸದಸ್ಯರಾದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ವಲಯ ಆಯುಕ್ತರಾದ ಜಯರಾಮ್ ರಾಯಪುರ ಉಪಸ್ಥಿತರಿದ್ದರು.












Click it and Unblock the Notifications