"ಪ್ರಿಯಾಂಕ್ ಖರ್ಗೆ ಒಬ್ಬ ಫಸ್ಟ್ ಕ್ಲಾಸ್ ಈಡಿಯಟ್" ಎಂದ ಅಸ್ಸಾಂ ಸಿಎಂ, ಏನಿದು ವಿವಾದ?
ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ನಾಯಕರ ನಡುವೆ ರಾಜ್ಯದಲ್ಲಿ ಟಾಕ್ ವಾರ್ ನಡೆಯುತ್ತಲೇ ಇದೆ. ಇದೀಗ ದೂರದ ಅಸ್ಸಾಂ ಜೊತೆಗೂ ಪ್ರಿಯಾಂಕ್ ಕಿರಿಕ್ ಮಾಡಿಕೊಂಡಿದ್ದಾರೆ. ಅಸ್ಸಾಂ ಯುವಕರ ಬಗ್ಗೆ ಪ್ರಿಯಾಂಕ್ ಖರ್ಗೆ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗರಂ ಆಗಿದ್ದಾರೆ. ಖರ್ಗೆ ಮಾತಿಗೆ ಕೌಂಟರ್ ಕೊಟ್ಟಿರುವ ಅವರು ಪ್ರಿಯಾಂಕ್ ಖರ್ಗೆ ಒಬ್ಬ ಫಸ್ಟ್ ಕ್ಲಾಸ್ ಈಡಿಯಟ್ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಸ್ಸಾಂ ಹಾಗೂ ಪ್ರಿಯಾಂಕ್ ನಡುವಿನ ವಿವಾದವೇನು ಗೊತ್ತಾ?
ಸೆಮಿಕಂಡಕ್ಟರ್ ಕೈಗಾರಿಕೆಗಳು ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿರುವ ವಿಚಾರವಾಗಿ ಪ್ರಿಯಾಂಕ್ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಬರಬೇಕಿದ್ದ ಹೂಡಿಕೆಗಳನ್ನ ಆ ರಾಜ್ಯಗಳಿಗೆ ಕಳಿಸುತ್ತಿದೆ. ಗುಜರಾತ್ ಹಾಗೂ ಅಸ್ಸಾಂನಲ್ಲಿ ಏನಿದೆ? ಅಲ್ಲಿ ಪ್ರತಿಭೆ ಇದೆಯೇ ಎಂದು ಪ್ರಶ್ನಿಸಿದ್ದರು. ಇದು ಸದ್ಯ ಭಾರೀ ವಿವಾದ ಸೃಷ್ಟಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, 'ಪ್ರಿಯಾಂಕ್ ಖರ್ಗೆ ಒಬ್ಬ ಪ್ರಥಮ ದರ್ಜೆ ಮೂರ್ಖ. ಅವರು ಅಸ್ಸಾಂ ಯುವಕರನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್ ಇನ್ನೂ ಇದನ್ನು ಖಂಡಿಸಿಲ್ಲ. ಬಹುಶಃ ಅಸ್ಸಾಂನಲ್ಲಿ ವಿದ್ಯಾವಂತ ಯುವಕರಿಲ್ಲ ಎಂದು ಅವರು ಹೇಳಿರುವುದರಿಂದ ನಾವು ಅವರ ವಿರುದ್ಧ ಪ್ರಕರಣ ಕೂಡ ದಾಖಲಿಸಬಹುದು. ಇದು ಇಡೀ ಅಸ್ಸಾಂ ಯುವಕರಿಗೆ ಮಾಡಿದ ಅವಮಾನ' ಎಂದು ಖಂಡಿಸಿದ್ದಾರೆ.

'ನನ್ನ ಮಾತು ತಿರುಚಿದ್ದಾರೆ'
ಅಸ್ಸಾಂ ಸಿಎಂ ಮಾತಿಗೆ ಪ್ರಿಯಾಂಕ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. 'ಎಂದಿನಂತೆ ಬಿಜೆಪಿ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನನ್ನ ಮಾತುಗಳನ್ನು ತಿರುಚುತ್ತಿದ್ದಾರೆ. ನನ್ನ ಹೇಳಿಕೆ ಸ್ಪಷ್ಟ ಮತ್ತು ನಿರ್ದಿಷ್ಟವಾಗಿದೆ. ನಮ್ಮ ಇಂಜಿನಿಯರಿಂಗ್ ಪ್ರತಿಭೆ ಮತ್ತು ಸ್ಥಾಪಿತ ಪರಿಸರ ವ್ಯವಸ್ಥೆಯ ಕಾರಣದಿಂದಾಗಿ ಅವರು ಕರ್ನಾಟಕದ ಬಗ್ಗೆ ಸ್ಪಷ್ಟ ಆಸಕ್ತಿಯನ್ನು ವ್ಯಕ್ತಪಡಿಸಿದ್ದರೂ ಸಹ ಗುಜರಾತ್ ಮತ್ತು ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಕಂಪನಿಗಳನ್ನು ಸ್ಥಾಪಿಸಲು ಹೇಗೆ ಒತ್ತಡ ಹೇರಲಾಗುತ್ತಿದೆ ಎಂದು ನಾನು ಹೇಳಿದ್ದು' ಎಂದು ಸ್ಪಷ್ಟನೆ ನೀಡಿದ್ದಾರೆ.
'ನೀತಿ ಆಯೋಗದ ಇತ್ತೀಚಿನ ವರದಿಯ ಪ್ರಕಾರ, ಸುಮಾರು ಒಂದು ದಶಕದ ಬಿಜೆಪಿ ಆಡಳಿತದ ನಂತರ ಅಸ್ಸಾಂ ಇಂದು ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆಯಂತಹ ನಿರ್ಣಾಯಕ ಅಭಿವೃದ್ಧಿ ಸೂಚಕಗಳಲ್ಲಿ ಕೊನೆಯ ಐದು ರಾಜ್ಯಗಳಲ್ಲಿ ಒಂದಾಗಿದೆ. ಶರ್ಮಾ ಬೆಳೆಯಲು ನಿರ್ವಹಿಸಿದ ಏಕೈಕ ವಿಷಯವೆಂದರೆ ಅವರ ಸ್ವಂತ ಸಂಪತ್ತು. ಪ್ರತಿಯೊಂದು ಪ್ರಮುಖ ಹಗರಣ ಅಥವಾ ಭ್ರಷ್ಟಾಚಾರ ಪ್ರಕರಣವು ಅವರ ಮನೆ ಬಾಗಿಲಿಗೆ ಬರುವಂತೆ ತೋರುತ್ತದೆ. ಆದರೆ ಅಸ್ಸಾಂನ ಯುವಕರು ಉದ್ಯೋಗಗಳು ಅಥವಾ ಅವಕಾಶಗಳಿಲ್ಲದೆ ಉಳಿದಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.
'ನನ್ನ ಹೇಳಿಕೆಗಳನ್ನು ರಾಜಕೀಯವಾಗಿ ತಿರುಚಿ, ತಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳುವ ಬದಲು, ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಯುವಜನರಿಗೆ ಏನು ಮಾಡಿದ್ದಾರೆ ಎಂದು ತಮ್ಮನ್ನು ತಾವು ಕೇಳಿಕೊಳ್ಳಬೇಕು. ಅವರು ಬೇರೆಡೆ ಕೆಲಸ ಹುಡುಕಲು ಅಸ್ಸಾಂ ಬಿಟ್ಟು ಏಕೆ ಹೋಗುತ್ತಿದ್ದಾರೆ? ಅಸ್ಸಾಂನಲ್ಲಿ ಬಿಜೆಪಿಯ ದಿನಗಳು ಎಣಿಸಲ್ಪಟ್ಟಿವೆ. ಅಸ್ಸಾಂನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ, ನಮ್ಮ ಗಮನ ಕೌಶಲ್ಯ, ಉದ್ಯೋಗಾವಕಾಶ ಮತ್ತು ಆಡಳಿತದಲ್ಲಿ ನಂಬಿಕೆ ಪುನರ್‌ನಿರ್ಮಿಸುತ್ತೇವೆ. ರಾಜ್ಯದ ಪ್ರತಿಯೊಂದು ಮೂಲೆಯಲ್ಲೂ ಪ್ರತಿಭೆಗಳು ಅಭಿವೃದ್ಧಿ ಹೊಂದುವ ಮತ್ತು ಯುವಜನರು ಭ್ರಷ್ಟ ಆಡಳಿತ ಮತ್ತು ರಾಜಕೀಯದ ಹಿಡಿತದಿಂದ ಮುಕ್ತರಾಗುವ ವಾತಾವರಣವನ್ನು ನಾವು ಸೃಷ್ಟಿಸುತ್ತೇವೆ' ಎಂದು ಪ್ರಿಯಾಂಕ್ ತಿರುಗೇಟು ನೀಡಿದ್ದಾರೆ.












Click it and Unblock the Notifications