ನಿರ್ಮಲಾ ಸೀತಾರಾಮನ್‌ರನ್ನ "ಎಂಥವಳೋ ಅವಳು" ಅಂದ್ರಾ ಸಿದ್ದರಾಮಯ್ಯ? ಅಶೋಕ್ ಆರೋಪ
ಸಿಎಂ ಸಿದ್ದರಾಮಯ್ಯ ಅವರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿದ್ದರಾಮಯ್ಯ ಏಕವಚನ ಬಳಕೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪ ಹೊರಿಸಿದೆ. ಈ ಸಂಬಂಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಖಂಡನೆ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದ ಗೌರವಾನ್ವಿತ ಹಣಕಾಸು ಸಚಿವೆ ಅವರನ್ನು ಹೀಗೆ ಏಕವಚನದಲ್ಲಿ, ಅಗೌರವದಿಂದ ಸಂಬೋಧನೆ ಮಾಡುವುದು ಯಾವ ಸಂಸ್ಕೃತಿ ಸ್ವಾಮಿ? ಇದು ಮನುವಾದನಾ? ಅಥವಾ ಸಿದ್ದರಾಮಯ್ಯವಾದನಾ? ಅಥವಾ ರಾಹುಲ್ ಗಾಂಧಿವಾದನಾ? ಎಂದು ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಇದನ್ನ ಪ್ರಶ್ನೆ ಮಾಡಿದರೆ, ತಮ್ಮದು ಗ್ರಾಮೀಣ ಭಾಷೆ, ತಾವು ಹಳ್ಳಿಯಿಂದ ಬಂದವರು ಎಂಬ ಬುರುಡೆ ಸಮಜಾಯಿಷಿ ಕೊಡಬೇಡಿ. ಇಂದಿರಾ ಗಾಂಧಿ ಅವರನ್ನ ಅಥವಾ ಸೋನಿಯಾ ಗಾಂಧಿ ಅವರನ್ನ ಅಥವಾ ಪ್ರಿಯಾಂಕಾ ಗಾಂಧಿ ಅವರನ್ನ ಇದೇ ಭಾಷೆಯಲ್ಲಿ, ಇದೇ ಧಾಟಿಯಲ್ಲಿ "ಎಂಥವಳೋ ಅವಳು?" ಎಂದು ಸಂಬೋಧನೆ ಮಾಡೋ ತಾಕತ್ತಿದೆಯಾ? ಎಂದು ಸವಾಲ್ ಹಾಕಿದ್ದಾರೆ. ಮಹಿಳೆಯರನ್ನ ತುಚ್ಛವಾಗಿ ಕಾಣುವ ಕಾಂಗ್ರೆಸ್ ಪಕ್ಷದ ಈ ಕೀಳು ಮನಸ್ಥಿತಿಯನ್ನ ಕರ್ನಾಟಕದ ಸ್ವಾಭಿಮಾನಿ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಸುಳ್ಳುಬುರುಕ ಸಿದ್ದರಾಮಯ್ಯ
ಸುಳ್ಳುಬುರುಕ ಸಿಎಂ ಸಿದ್ದರಾಮಯ್ಯನವರೇ, ಸುಳ್ಳು ಹೇಳೋದಕ್ಕೂ ಒಂದು ಮಿತಿ ಬೇಡವೇ? ನುಡಿದಂತೆ ನಡೆದ ಸರ್ಕಾರ ಎಂದು ಕನ್ನಡಿಗರಿಗೆ ಇನ್ನೆಷ್ಟು ದಿನೇ ಹೀಗೆ ಸುಳ್ಳಿನ ಮೇಲೆ ಸುಳ್ಳು ಹೇಳಿ ವಂಚನೆ ಮಾಡುತ್ತೀರಿ? 2013-18ರಲ್ಲಿ ತಾವು ಕೊಟ್ಟ 162 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇನೆ ಎಂದು ಹೇಳಿದ್ದೀರಿ. ಅಸಲಿಗೆ ನಿಮ್ಮ ಪ್ರಣಾಳಿಕೆಯಲ್ಲಿದ್ದ ಘೋಷಣೆಗಳು 162 ಅಲ್ಲ 173. ಅದರಲ್ಲಿ ಐದು ವರ್ಷಗಳಲ್ಲಿ ತಾವು ಈಡೆರಿಸಿದ್ದು ಕೇವಲ 38% ಅಂದರೆ 67 ಮಾತ್ರ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈಗ ತಮ್ಮ ಎರಡನೇ ಅವಧಿಯಲ್ಲಿ 2.5 ವರ್ಷಗಳು ಪೂರ್ಣವಾದ ನಂತರ ಕೊಟ್ಟ 134 ಭರವಸೆಗಳಲ್ಲಿ ಈಡೇರಿರುವುದು ಕೇವಲ 9 ಮಾತ್ರ. ಈ ಅಂಕಿ-ಅಂಶಗಳು ನಾನು ಹೇಳುತ್ತಿರುವುದಲ್ಲ. ಸ್ವತಂತ್ರ ಸಂಸ್ಥೆಗಳು ಪ್ರಕಟ ಮಾಡಿರುವುದು ಮತ್ತು ಮಾಧ್ಯಮಗಳು ವರದಿ ಮಾಡಿರುವುದು. ಸುಳ್ಳುಗೇಡಿತನದಲ್ಲಿ ಯಾವುದಾದರೂ "ಲಂಡನ್ ಬುಕ್ ಆಫ್ ರೆಕಾರ್ಡ್" ಪ್ರಶಸ್ತಿ ಇದ್ದರೆ ಅದು ತಮಗೇ ಸಲ್ಲಬೇಕು. ಈ ಹಸಿ ಸುಳ್ಳುಗಳು, ನಯವಂಚನೆಯನ್ನ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ, ನೆನಪಿಡಿ ಎಂದು ಅಶೋಕ್ ಟೀಕಿಸಿದ್ದಾರೆ.












Click it and Unblock the Notifications