Industry: ಉತ್ತರ ಕರ್ನಾಟಕ ಕೈಗಾರಿಕೆ ಅಭಿವೃದ್ಧಿಗೆ ಇದು ಬೆಸ್ಟ್ ಟೈಮ್: GIM-2025
ಬೆಂಗಳೂರು, ಫೆಬ್ರವರಿ 10: ಕರ್ನಾಟಕದ ಮಟ್ಟಿಗೆ ಕೈಗಾರಿಕಾ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಅಸಮತೋಲನ ಇದೆ. ಇದು ಇಂದು ನೆನ್ನೆಯದಲ್ಲ. ಬಹುದಿನಗಳ ಕೂಗು ಮತ್ತು ಆರೋಪ. ಎಲ್ಲ ಸರ್ಕಾರಗಳು ಕೇವಲ ಬೆಂಗಳೂರು ಸುತ್ತಮುತ್ತ ಮಾತ್ರವೇ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಇಂತಹ ಆದ್ಯತೆಗಳು ಉತ್ತರ ಕರ್ನಾಟಕದ ಭಾಗಕ್ಕೆ ಸಿಕ್ಕಿಲ್ಲ ಎಂಬುದು ಆ ಭಾಗದ ಜನರ ಕೂಗು, ಇದು ನಿಜವೂ ಕೂಡ. ಇನ್ನುಮುಂದೆ ಹೀಗಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ 2025ದಲ್ಲಿ ಉತ್ತರ ಕರ್ನಾಟಕ ಭಾಗದ ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು ಎಂಬ ಆಗ್ರಹ ಜೋರಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 11ರಿಂದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 2025 (GIM-2025) ನಡೆಯಲಿದೆ. ಇಲ್ಲಿ ಪಾಲ್ಗೊಳ್ಳಲಿರುವ ವಿದೇಶಿ ಕಂಪನಿಗಳ ಜೊತೆಗೆ ಕೈಗಾರಿಕಾ ಒಪ್ಪಂದ ನಡೆಯಲಿವೆ. ಈ ವೇಳೆ ಉತ್ತರ ಕರ್ನಾಟಕದ ಭಾಗದಲ್ಲೂ ಕೈಗಾರಿಕೆಗಳು ತಲೆ ಎತ್ತುವಂತೆ, ಇಲ್ಲಿ ಸಹ ಕೈಗಾರಿಕಾ ವಲಯ ವಿಸ್ತರಣೆಗೆ ಆದ್ಯತೆ ನೀಡುವಂತೆ ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸೋಮವಾರ GIM-2025 ಕುರಿತು ಪೋಸ್ಟ್ ಮಾಡಿರುವ ಅರವಿಂದ್ ಬೆಲ್ಲದ್ ಅವರು, ಉತ್ತರ ಕರ್ನಾಟಕವು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದೆ. ಪ್ರತಿಭೆ ಮತ್ತು ಸಾಮರ್ಥ್ಯವು ಇಲ್ಲಿ ಸಮೃದ್ಧವಾಗಿದೆ. ಆದರೆ ಕೈಗಾರಿಕಾ ಬೆಳವಣಿಗೆಯಲ್ಲಿ ಹಿಂದುಳಿದಿದೆ. ನಮ್ಮ ಯುವಕರು ಉದ್ಯೋಗಗಳಿಗಾಗಿ ವಲಸೆ ಹೋಗಬೇಕಾಗಿದೆ. ಇಲ್ಲಿ ಕೈಗಾರಿಕೆ ಬೆಳವಣಿಗೆಗೆ ವಿಫಲು ಅವಕಾಶಗಳಿವೆ. ಹೀಗಾಗಿ ಇಲ್ಲಿನ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಮತೋಲಿತ ಅಭಿವೃದ್ಧಿಗೆ ಒತ್ತು ನೀಡಲು ಸುಸಮಯ
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಉತ್ತಮ ನೀತಿಗಳು, ಹೆಚ್ಚಿನ ಪ್ರೋತ್ಸಾಹಕಗಳು ಮತ್ತು ನೈಜ ಹೂಡಿಕೆಗಳಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೈಗಾರಿಕೆ ಎಂಬಿ ಪಾಟೀಲ್ ಹಾಗೂ ಐಟಿ-ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಒತ್ತಾಯಿಸುತ್ತಿದ್ದೇನೆ. ರಾಜ್ಯದಲ್ಲಿ ಸಮತೋಲಿತ ಅಭಿವೃದ್ಧಿಗೆ ಒತ್ತು ನೀಡಲು ಇದೊಂದು ಸುಸಮಯ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ದಕ್ಷಿಣ ಭಾಗದಲ್ಲೇ ಹೆಚ್ಚಿನ ಒತ್ತು
ಹಿಂದಿನಿಂದಲೂ ರಾಜ್ಯದಲ್ಲಿ ಹೂಡಿಕೆ ಪ್ರಮಾಣ ಕರ್ನಾಟಕ ದಕ್ಷಿಣ ಭಾಗದಲ್ಲಿ ಹೆಚ್ಚಾಗುತ್ತಿದೆ. ಮೊಬೈಲ್ ಬಿಡಿಭಾಗ ತಯಾರಿಕೆ, ಇವಿ ಬಿಡಿ ಭಾಗ ತಯಾರಿಕಾ ಘಟಕ, ಹೊಸ ಫ್ಯಾಕ್ಟರಿ, ನ್ಯೂ ಸಿಟಿ, ಕೈಗಾರಿಕಾ ಪಾರ್ಕ್ ಸೇರಿದಂತೆ ಕೈಗಾರಿಕೆಗೆ ಸಂಬಂಧಿಸಿದ ಹೂಡಿಕೆಗಳು ಬೆಂಗಳೂರು ಹಾಗೂ ಸಮೀಪ (ರಾಜ್ಯದ ದಕ್ಷಿಣ ಭಾಗ)ದಲ್ಲಿ ಆಗುತ್ತಿವೆ. ಉತ್ತರ ಕರ್ನಾಟಕಕ್ಕೆ ಆಗೊಂದು ಈಗೊಂದು ಯೋಜನೆಗಳು ಬರುತ್ತಿವೆ. ಹೊರತು ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ ಎಂಬ ಮಾತಿದೆ.
ಈಗಾಗಲೇ ಬೆಂಗಳೂರಿನಲ್ಲಿ ಜನಸಂಖ್ಯೆ, ಇಲ್ಲಿ ಪರಭಾಷಿಗರ ಹಾವಳಿ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕದಿಂದ ವಲಸೆ ಬರುವುದು ಹೆಚ್ಚಾಗಿದೆ. ಜನ ಕೃಷಿ ವಿಮುಖರಾಗುತ್ತಿದ್ದಾರೆ. ರಾಜ್ಯಕ್ಕೆ ಬೆಂಗಳೂರು ಪ್ರಮುಖ ನಗರ, ಐಟಿ ಕೇಂದ್ರ, ಅನೇಕರಿಗೆ ಬದುಕು ಕಟ್ಟಿಕೊಟ್ಟಿದೆ. ಇದರೊಂದಿಗೆ ಇಲ್ಲಿ ನೀರಿನ ಸಮಸ್ಯೆ, ಟ್ರಾಫಿಕ್, ಮಳೆ ಬಂದರೆ ಪ್ರವಾಹ, ಒತ್ತುವರಿಗಳು ಹೆಚ್ಚಿದೆ. ಜನಸಂಖ್ಯೆ ಹೆಚ್ಚಾದರೆ ಮೂಲಸೌಲಭ್ಯ ಪೂರೈಕೆಗೂ ತೊಂದರೆ ಆಗಬಹುದು.
ಇದೆಲ್ಲ ಗಮನದಲ್ಲಿಟ್ಟುಕೊಂಡು ಸರ್ಕಾರ, ಪ್ರಾದೇಶಿಕ ಕೈಗಾರಿಕಾ ಅಭಿವೃದ್ಧಿಯಲ್ಲಿ ಸಮತೋಲನ ಕಾಪಾಡಲು, ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹಿಂದಿನಿಂದಲೂ ಇಂಥದ್ದೊಂದು ಬೇಡಿಕೆ ಈ ಭಾಗದ ಜನರದ್ದಾಗಿದೆ. ಜಾಗತಿಕ ಹೂಡಿಕೆದಾರರ ಸಭೆ ಕಾರಣಕ್ಕೆ ಇಂತದ್ದ ಒತ್ತಾಯಗಳು ಮತ್ತೆ ಹೆಚ್ಚಾಗುತ್ತಿವೆ. ಈ ಮನವಿಗೆ ಅರವಿಂದ್ ಬೆಲ್ಲದ್ ಅವರು ಸಹ ಧ್ವನಿಯಾಗಿದ್ದಾರೆ.












Click it and Unblock the Notifications