Arecanut Price: 55 ಸಾವಿರ ಗಡಿ ದಾಟಿದ ಅಡಿಕೆ ದರ: ರೈತರಲ್ಲಿ ಸಂತಸ
ತೀವ್ರ ಕುಸಿತ ಕಂಡಿದ್ದ ಅಡಿಕೆ ಬೆಲೆ ಈಗ ಏರುಗತಿಯಲ್ಲಿ ಸಾಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ಸದ್ಯ ಒಂದು ಕ್ವಿಂಟಾಲ್ ಅಡಿಕೆ ಬೆಲೆ 55 ಸಾವಿರ ರೂಪಾಯಿ ಗಡಿ ದಾಟಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ದರಕ್ಕೆ ವ್ಯತ್ಯಾಸವಿರುತ್ತದೆ. ಕೆಲವು ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ದರ 55 ಸಾವಿರದ ಗಡಿದಾಟಿದ್ದು 56 ಸಾವಿರದ ಸಮೀಪಕ್ಕೆ ಬಂದಿದೆ. ದಾವಣಗೆರೆ, ತುಮಕೂರು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ 55 ಸಾವಿರಕ್ಕಿಂತ ಅಧಿಕ ದರಕ್ಕೆ ಮಾರಾಟವಾಗಿದೆ.

ಜುಲೈ 3ರಂದು ದಾವಣಗೆರೆ ಮಾರುಕಟ್ಟೆಯಲ್ಲಿ ಉತ್ತಮ ರಾಶಿ ಅಡಿಕೆ ಗರಿಷ್ಠ ಬೆಲೆ 55,512 ರೂ.ಗೆ ಮಾರಾಟವಾಗಿದೆ. ತುಮಕೂರು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಗರಿಷ್ಠ ಬೆಲೆ 55,969 ರೂ.ಗಳಿಗೆ ಮಾರಾಟವಾಗಿದೆ. ಏಪ್ರಿಲ್‌ನಲ್ಲಿ 46-48 ಸಾವಿರದಷ್ಟಿದ್ದ ಅಡಿಕೆ ಬೆಲೆ ಕಳೆದ ಎರಡು ತಿಂಗಳಿನಿಂದ ಏರಿಕೆಯಾಗುತ್ತಿರುವುದು ರೈತರಲ್ಲಿ ಸಂತಸ ಉಂಟುಮಾಡಿದೆ.
ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಉತ್ತಮ ರಾಶಿ ಅಡಿಕೆ ಬೆಲೆ ಕನಿಷ್ಠ 52,591 ಗರಿಷ್ಠ 55,512 ರೂಪಾಯಿಗೆ ಮಾರಾಟವಾಗಿದೆ. ಸರಾಸರಿ ಬೆಲೆ 54,543 ರೂ. ಆಗಿದೆ. ಬೆಟ್ಟೆ ಅಡಿಕೆ ಪ್ರತಿ ಕ್ವಿಂಟಾಲ್ ಗರಿಷ್ಠ 40,138ರೂ.ಗಳಂತೆ ಮಾರಾಟವಾಗಿದೆ.
ಜುಲೈ 3ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)
| 1 | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
|---|---|---|---|---|---|
| 2 | ತುಮಕೂರು | ರಾಶಿ | ₹52,591 | ₹55,512 | ₹54,543 |
| 3 | ಗುಬ್ಬಿ | ರಾಶಿ | ₹50,100 | ₹52,000 | ₹52,000 |
| 4 | ಬಂಟ್ವಾಳ | ಕೋಕಾ | ₹12,500 | ₹25,000 | ₹22,500 |
| 5 | ಬಂಟ್ವಾಳ | ಹಳೆ ವೆರೈಟಿ | ₹48,000 | ₹50,500 | ₹49,000 |
| 6 | ಹೊನ್ನಳ್ಳಿ | ರಾಶಿ | ₹53,279 | ₹53,279 | ₹53,279 |
| 7 | ಪುತ್ತೂರು | ಹಳೆಚಾಲಿ | ₹35,819 | ₹38,205 | ₹37,529 |
| 8 | ಶಿವಮೊಗ್ಗ | ರಾಶಿ | ₹40,300 | ₹55,421 | ₹54,599 |
| 9 | ಶಿವಮೊಗ್ಗ | ಸರಕು | ₹56,100 | ₹77,700 | ₹73,100 |
| 10 | ಸಾಗರ | ರಾಶಿ | ₹37,899 | ₹51,899 | ₹50,399 |
ಬೆಲೆ ಏರಿಕೆಗೆ ಕಾರಣವೇನು?
ಕಳೆದ ವರ್ಷ ಭಾರಿ ಮಳೆಯ ಕಾರಣ ಹಲವು ಕಡೆಗಳಲ್ಲಿ ಅಡಿಕೆ ತೋಟಗಳು ನಾಶವಾಗಿದ್ದರೆ. ಬೇಸಿಗೆಯಲ್ಲಿ ಬಿಸಿಲು ಹೆಚ್ಚಾದ ಕಾರಣ ಕೆಲವು ಕಡೆ ತೋಟಗಳು ನಾಶವಾಗಿವೆ. ಹವಾಮಾನ ಬದಲಾವಣೆಯಾದ ಕಾರಣ ಇಳುವರಿ ಕೂಡ ಕಡಿಮೆಯಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಅಡಿಕೆಗೆ ಹಳದಿ ರೋಗ, ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದ್ದು ಇಳುವರಿ ಕಡಿಮೆಯಾಗಿದೆ. ಕೆಲವು ಕಡೆ ತೋಟಗಳು ನಾಶವಾಗಿವೆ.
ಅಡಿಕೆ ಕೊಯ್ಲು ಸೀಸನ್ ಮುಗಿದಿದ್ದು, ಅಡಿಕೆ ಆವಕ ಕೂಡ ಕಡಿಮೆಯಾಗಿದೆ. ಆದ್ದರಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಮತ್ತೆ ಅಡಿಕೆ ಕೊಯ್ಲು ಆರಂಭವಾಗುವವರೆಗೆ ಅಡಿಕೆ ಧಾರಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ಇದೆ.












Click it and Unblock the Notifications