ಬಾಡಿಗೆದಾರರು ಗೃಹಜ್ಯೋತಿ ಯೋಜನೆಗೆ ಅರ್ಹರೇ: ಸಚಿವ ಜಾರ್ಜ್ ಹೇಳಿದ್ದೇನು?
ಬೆಂಗಳೂರು, ಜೂನ್ 6: ಗೃಹಜ್ಯೋತಿ ಯೋಜನೆಗೆ ಸಂಬಂಧಿದಂತೆ ಮಾರ್ಗಸೂಚಿಯಲ್ಲಿ ಯಾವುದೇ ಉಲ್ಲೇಖವಿರದ ಕಾರಣ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಬಾಡಿಗೆದಾರರಿಗೂ ಕೂಡ ಉಚಿತ ವಿದ್ಯುತ್ ಸಿಗಲಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆಜೆ ಜಾರ್ಜ್ ಅವರು ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತದೆ. ಇದಕ್ಕಾಗಿ ಸೇವಾ ಸಿಂಧೂ ಪೋರ್ಟಲ್‌ನಲ್ಲಿ ಅರ್ಜಿ ಹಾಕಬೇಕು ಎಂದು ಹೇಳಲಾಗಿತ್ತು. ಆದರೆ ಈ ಸಂಬಂಧ ಹೊರಡಿಸಲಾದ ಮಾರ್ಗಸೂಚಿಯಲ್ಲಿ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಯೋಜನೆ ಸಿಗುವ ಯಾವುದೇ ಉಲ್ಲೇಖವಿರಲಿಲ್ಲ. ಹೀಗಾಗಿ ಇಂಧನ ಸಚಿವರಾದ ಕೆಜೆ ಜಾರ್ಜ್ ಹೇಳಿಕೆ ನೀಡಿದ್ದಾರೆ.

ಸೂಕ್ತ ದಾಖಲೆಗಳು ಇರಬೇಕು:
ಬಾಡಿಗೆದಾರರಿಗೂ 200 ಯುನಿಟ್ ಉಚಿತ ವಿದ್ಯುತ್ ಸಿಗುತ್ತದೆ. ಇದಕ್ಕೆ ಸೂಕ್ತ ದಾಖಲೆಗಳು ಇರಬೇಕು, ಬಾಡಿಗೆದಾರರು ವಿದ್ಯುತ್ ಬಿಲ್ ಹೊಂದಿದ್ದು, ಬಾಡಿಗೆ ಕರಾರುಪತ್ರ (Rental Agreement) ಹೊಂದಿರಬೇಕು. ಇದಲ್ಲದೆ ಮನೆ ಮಾಲೀಕರು ಸಮರ್ಪಕವಾಗಿ ತೆರಿಗೆ ಪಾವತಿಸಿರಬೇಕು. ಬಾಡಿಗೆದಾರರು ಎಷ್ಟು ವರ್ಷಗಳಿಂದ ವಾಸ ಇದ್ದಾರೆ ಎಂಬ ದಾಖಲೆ ಇರಬೇಕು ಎಂದು ಹೇಳಿದ್ದಾರೆ.
ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆ:
ಪ್ರತಿ ತಿಂಗಳು ರೀಡಿಂಗ್ ಮಾಡಿ ಬಿಲ್ ನೀಡಲಾಗುತ್ತದೆ. ಒಂದು ವೇಳೆ 200 ಯುನಿಟ್‌ಗಿಂತಲೂ ಕಡಿಮೆ ವಿದ್ಯುತ್ ಬಳಸಿದ್ದರೆ ಶೂನ್ಯ ಶುಲ್ಕದ ಬಿಲ್ ಮನೆ ಮಾಲೀಕರಿಗೆ ಸಿಗುತ್ತದೆ ಎಂದು ಹೇಳಲಾಗಿದೆ. ಸೋಮವಾರ ಈ ಸಂಬಂಧ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಇಂಧನ ಇಲಾಖೆಯು ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದರೆ ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ ಎಂದು ತಿಳಿಸಲಾಗಿತ್ತು.
ರೆವಿನ್ಯೂ ರೆಕಾರ್ಡ್ ನಂಬರ್:
ಆದ್ದರಿಂದ ಸಹಜವಾಗಿ ನಗರ ಮತ್ತು ಪಟ್ಟಣ ಪ್ರದೇಶಗಳ ಬಾಡಿಗೆ ಮನೆ ವಾಸಿಗಳು ಈ ಯೋಜನೆಯ ಸೌಲಭ್ಯದಿಂದ ವಂಚಿತರಾಗುತ್ತಾರೆ ಎನ್ನಲಾಗಿತ್ತು, ಸ್ಥಾವರ ಎಂದರೆ ಆರ್‌ಆರ್ ನಂಬರ್ ( ರೆವಿನ್ಯೂ ರೆಕಾರ್ಡ್ ನಂಬರ್, RR Number) ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಂಟಿ ಮನೆಗಳು ಕಡಿಮೆ. ಬಹುಮಹಡಿ ಮನೆಗಳಲ್ಲಿ ಪ್ರತಿ ಮನೆಗೂ ಪ್ರತ್ಯೇಕ ಮೀಟರ್ ಇದ್ದರೂ ಎಲ್ಲವೂ ಕಟ್ಟಡ ಮಾಲೀಕರ ಹೆಸರಿನಲ್ಲಿ ಇರುತ್ತವೆ. ಬಾಡಿಗೆದಾರರ ಹೆಸರಿಗೆ ವಿದ್ಯುತ್ ಮಾಪಕ (Electric Meter) ಮಂಜೂರಾಗಿರುವುದಿಲ್ಲ. ಹೀಗಾಗಿ ಬಾಡಿಗೆದಾರರಿಗೆ ಗೃಹಜ್ಯೋತಿ ಬೆಳಕು ತರುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು.

ಸಿಂಧೂ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ :
ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಗ್ರಾಹಕರು ಸೇವಾ ಸಿಂಧೂ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ ತನ್ನ ಗ್ರಾಹಕ ಐಡಿ ಅಕೌಂಟ್ ಐಡಿಯನ್ನು ಆಧಾರ್ ನಂಬರ್‌ಗೆ ಜೋಡಣೆ ಮಾಡುವುದು ಕಡ್ಡಾಯವಾಗಿರುತ್ತದೆ, ಬಾಡಿಗೆದಾರರು ಗ್ರಾಹಕ ಐಡಿ ಇಲ್ಲದೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ, ಇದರಿಂದಾಗಿ ಯೋಜನೆ ಫಲಾನುಭವಿಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಭಾವಿಸಲಾಗಿತ್ತು.
ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ:
ಇಂಧನ ಇಲಾಖೆ ಹೊರಡಿಸಲಾಗಿದ್ದ ಮಾಗಸೂಚಿಯಲ್ಲಿ ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ, ಸೌಲಭ್ಯ ಪಡೆಯಲು ಗ್ರಾಹಕರು ಸೇವಾ ಸಿಂಧೂ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರತಿ ಫಲಾನುಭವಿ ತನ್ನ ಗ್ರಾಹಕ ಐಡಿ/ ಅಕೌಂಟ್ ಐಡಿ ಅನ್ನು ಆಧಾರ್ ನಂಬರ್‌ಗೆ ಜೋಡಣೆ ಮಾಡುವುದು ಕಡ್ಡಾಯ. ಪ್ರತಿ ತಿಂಗಳು ಮೀಟರ್ ರೀಡಿಂಗ್ ವೇಳೆ ಒಟ್ಟು ವಿದ್ಯುತ್ ಬಳಕೆ ಪ್ರಮಾಣಕ್ಕೆ ಬಿಲ್ ನಮೂದಿಸಬೇಕು ಎಂದು ತಿಳಿಸಲಾಗಿತ್ತು.
ಬಿಲ್ ಮೊತ್ತ ಪಾವತಿ ಕಡ್ಡಾಯ:
ಅಲ್ಲದೆ ಮಾಸಿಕ ಸರಾಸರಿ ಮೇಲೆ 10% ಹೆಚ್ಚಿನ ಬಳಕೆಯ ಮಿತಿಯನ್ನು ಮೀರಿದ ಪ್ರಕರಣಗಳಲ್ಲಿ ಹೆಚ್ಚುವರಿ ಬಿಲ್ ಮೊತ್ತ ಪಾವತಿ ಕಡ್ಡಾಯವಾಗಿರುತ್ತದೆ. ನಿಗದಿತ ಪ್ರಮಾಣದೊಳಗೆ ವಿದ್ಯುತ್ ಬಳಕೆ ಮಾಡಿದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ ನೀಡಲಾಗುವುದು. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಗಳ ಫಲಾನುಭವಿಗಳೂ ಗೃಹ ಜ್ಯೋತಿ ಯೋಜನೆ ವ್ಯಾಪ್ತಿಗೆ ಬರುತ್ತಾರೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು.












Click it and Unblock the Notifications