ಮಹಾ ಕುಂಭಮೇಳದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯಕ್ಕೆ ಅರವಿಂದ ಬೆಲ್ಲದ್ ತಿರುಗೇಟು
ಹುಬ್ಬಳ್ಳಿ, ಜನವರಿ 29: ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಥಸ್ನಾನದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ. ಗಂಗಾ ನದಿಯ ಸ್ನಾನದಿಂದ ಬಡತನವನ್ನು ಕೊನೆಗೊಳಿಸಲು ಸಾಧ್ಯವೇ? ಎನ್ನುವ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯಕ್ಕೆ ರಾಜ್ಯ ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಬೇಜಾಬ್ದಾರಿತನದ ಹೇಳಿಕೆ ಆಗಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆ ಆಗಿದೆ. ಇಡೀ ಜಗತ್ತಿನ ಜನತೆ ತ್ರೀವೇಣಿ ಸಂಗಮದ ಸ್ಥಳದಲ್ಲಿ ಸ್ನಾನಕ್ಕೆ ಬರುತ್ತಿದ್ದಾರೆ. ಮಹಾ ಕುಂಭಮೇಳ ಇದೊಂದು ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಆಗಿದ್ದು, ಇಲ್ಲಿಗೆ ಶ್ರದ್ಧಾ ಭಕ್ತಿಯಿಂದ ಹೋಗುತ್ತಿದ್ದಾರೆ. ತಾವು ಮುಸ್ಲಿಮರಿಗೆ ಹಣ ಕೊಟ್ಟು ಮೆಕ್ಕಾಗೆ ಕಳುಹಿಸುತ್ತೀರಿ. ಸೋನಿಯಾ ಗಾಂಧಿ ರೋಮ್ ದೇಶಕ್ಕೆ ಪೋಪ್ ದರ್ಶನ ಪಡೆಯಲು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆ ಬೇಜವಾಬ್ದಾರಿಯುತ ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ತರುವ ಹೇಳಿಕೆ ನೀಡಿದ್ದಾರೆ. ಜಗತ್ತಿನಾದ್ಯಂತ ಜನ ಪ್ರಯಾಗ್ ರಾಜ್ ತೆರಳಿ ತ್ರಿವೇಣಿ ಸಂಗಮದಲ್ಲಿ ಮುಳುಗಿ ಪುಣ್ಯ ಸಂಪಾದಿಸುತ್ತಿದ್ದು, 144 ವರ್ಷಕ್ಕೊಮ್ಮೆ ನಡೆಯವ ಮಹಾ ಕುಂಭಮೇಳ ಇದಾಗಿದೆ. ಖರ್ಗೆ ಅವರು ಗಂಗಾ ನದಿಯಲ್ಲಿ ಮುಳುಗಿದರೆ ಬಡತನ ಹೋಗುತ್ತದೆಯೇ ಎಂದು ವ್ಯಂಗ್ಯವಾಡಿದ್ದು ಅಕ್ಷಮ್ಯವಾಗಿದೆ. 40 ಕೋಟಿ ಜನರು ಸ್ವಂತ ಖರ್ಚಿನಿಂದ ಅಲ್ಲಿಗೆ ತೆರಳುತ್ತಾರೆ. ಇವರಿಗೆ ಇದೇ ಪ್ರಶ್ನೆಯನ್ನು ಮುಸ್ಲಿಮರಿಗೆ ಕೇಳುವ ಧೈರ್ಯ ಇಲ್ಲವೇ. ಮೆಕ್ಕಾಗಿ ಹೋಗಿ ಬಂದರೆ ಬಡತನ ಪರಿಹಾರವಾಗುತ್ತದೆಯೇ ಎಂದು ಕೇಳುವ ಧೈರ್ಯ ಇಲ್ಲವೇ ಎಂದು ಪ್ರಶ್ನಿಸಿದರು.
ಹಿಂದೂಗಳನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡುತ್ತೀರಿ. ಕೂಡಲೇ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷಮೆ ಕೇಳಬೇಕು. ಇದೇ ರೀತಿಯಲ್ಲಿ ಸಚಿವ ಸಂತೋಷ ಲಾಡ್ ಸಹ ಅದೇ ಪ್ರಶ್ನೆ ಕೇಳಿದ್ದಾರೆ. ನೀವು ಮರಾಠ ಸಮಾಜದ ನಾಯಕರು, ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲ್ಲಿಲ್ಲ. ಖರ್ಗೆ ಅವರನ್ನು ಓಲೈಸಲು ಹೀಗೆ ಮಾಡುವುದು ಸರಿಯಲ್ಲ. ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾ, ಸೋನಿಯಾ ಗಾಂಧಿ ಕ್ಯಾಥೋಲಿಕ್ ಚರ್ಚ್‌ಗೆ ನಡೆದುಕೊಳ್ಳುತ್ತಾರೆ. ಈ ಬಗ್ಗೆ ಅವರನ್ನು ಕೇಳಲ್ಲ. ಆದರೆ ಹಿಂದೂಗಳ ಭಾವನೆಗೆ ಧಕ್ಕೆ ತರಲು ಏನೇನೋ ಮಾತನಾಡಿದ್ದೀರಿ. ಇದರಿಂದಾಗಿ ರಾಷ್ಟ್ರೀಯ, ರಾಜ್ಯ ನಾಯಕರಿಗೂ ಬೆಲೆ ಇಲ್ಲದಂತಾಗಿದೆ ಎಂದರು.












Click it and Unblock the Notifications