ಧ್ವನಿವರ್ಧಕ ವಿವಾದ: ರಾಜ್ಯದಾದ್ಯಂತ ಧಾರ್ಮಿಕ ಸಂಸ್ಥೆಗಳಿಗೆ ನೋಟೀಸ್ ಜಾರಿ
ಬೆಂಗಳೂರು ಏಪ್ರಿಲ್ 8: ಆಜಾನ್ ಕೂಗುವ ವೇಳೆ ಧ್ವನಿವರ್ಧಕ ವಿಚಾರವಾಗಿ ರಾಜ್ಯದಲ್ಲಿ ಅಶಾಂತಿ ಕದಡುವಂತ ಪ್ರಯತ್ನಗಳ ನಡುವೆ ರಾಜ್ಯದಾದ್ಯಂತ ಧಾರ್ಮಿಕ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಈ ಮೂಲಕ ಧಾರ್ಮಿಕ ಕ್ಷೇತ್ರಗಳಲ್ಲಿ ಶಬ್ದವನ್ನು ಮಿತಿಗೊಳಿಸಲು ಕರೆ ನೀಡಲಾಗಿದೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಧಾರ್ಮಿಕ ಕ್ಷೇತ್ರಗಳಲ್ಲಿ ಶಬ್ದವನ್ನು ಮಿತಿಗೊಳಿಸಲು ಕರೆ ನೀಡಲಾಗಿದೆ ಎಂದರು. 22 ವರ್ಷಗಳ ಹಿಂದೆಯೇ ಲೌಡ್ ಸ್ಪೀಕರ್ ಬಳಕೆ ಬಗ್ಗೆ ಸ್ಪಷ್ಟ ಕಾನೂನು ರಚನೆಯಾಗಿದೆ. ಅಲ್ಲದೇ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳೂ ಲೌಡ್ ಸ್ಪೀಕರ್ ಕುರಿತಾಗಿ ತಮ್ಮ ಆದೇಶಗಳನ್ನು ನೀಡಿವೆ.
Notice issued to religious institutions across the state. Not only this but they've also been called&are being taken into confidence to reduce noise to permissible limit otherwise action will be taken. Everyone has to follow court orders: Karnataka HM on Azaan loudspeaker issue pic.twitter.com/kJOnFJmzWg
— ANI (@ANI) April 8, 2022
ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ತಿಂಗಳ ಹಿಂದೆಯೇ ಹೈಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್ ನಿರ್ದೇಶನದಂತೆ ಪೊಲೀಸರು ಮಸೀದಿ, ಮಂದಿರ, ಕಾರ್ಖಾನೆ, ಪಬ್ ಸೇರಿ ಎಲ್ಲರಿಗೂ ನೋಟಿಸ್ ನೀಡಿದ್ದಾರೆ. ಜೊತೆಗೆ ಧಾರ್ಮಿಕ ಮುಖಂಡರ ಜತೆ ಈ ಬಗ್ಗೆ ಸಭೆ ನಡೆಸಲಾಗಿದೆ. ಅವರಿಗೂ ಮಾರ್ಗದರ್ಶನ ನೀಡಲಾಗಿತ್ತು. ಅದರಂತೆ ಧರ್ಮಗುರುಗಳು ನಡೆದುಕೊಂಡಿದ್ದಾರೆ. ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಲೇಬೇಕು. ಹೈಕೋರ್ಟ್ ಆದೇಶ ಉಲ್ಲಂಘಿಸಿದರೆ ಶಿಕ್ಷೆ ಆಗುತ್ತದೆ ಎಂದು ಹೇಳಿದರು.

'ಆದೇಶ ಉಲ್ಲಂಘಿಸಿದ ಕಡೆ ಮೈಕ್‌ಗಳನ್ನು ಜಪ್ತಿ ಮಾಡಿದ್ದೇವೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ಬಾಲ ಬಿಚ್ಚಿದರೆ ಕ್ರಮ ಕೈಗೊಳ್ಳಲಾಗುತ್ತೆ. ಎಲ್ಲರೂ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು' ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.
ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಮೂಲಕ ಅಜಾನ್ ಕೂಗುವುದನ್ನು ಪ್ರಶ್ನಿಸಿ 2019 ರಲ್ಲೇ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಕೆಯಾಗಿತ್ತು. ಗೋವಿಂದರಾಜನಗರದ ಮಸೀದಿ, ನಂತರ ಥಣಿಸಂದ್ರದ ಮಸೀದಿಯಲ್ಲಿ ಲೌಡ್ ಸ್ಪೀಕರ್ ಬಳಕೆ ಪ್ರಶ್ನಿಸಲಾಗಿತ್ತು. ಈ ಸಂದರ್ಭದಲ್ಲೇ ಹೈಕೋರ್ಟ್ 2000 ನೇ ಇಸವಿಯಲ್ಲಿ ಜಾರಿಯಾದ ಶಬ್ದಮಾಲಿನ್ಯ ನಿಯಂತ್ರಣ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆದೇಶ ನೀಡಿದೆ.

Recommended Video
ಕೋರ್ಟ್ ಆದೇಶದಂತೆ ಶಬ್ದಮಾಲಿನ್ಯ ನಿಯಂತ್ರಣ ನಿಯಮದ ಪ್ರಕಾರ ಪೊಲೀಸರ ಅನುಮತಿಯಿಲ್ಲದೇ ಲೌಡ್ ಸ್ಪೀಕರ್ ಬಳಸುವಂತೆಯೇ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ವೇಳೆ ಲೌಡ್ ಸ್ಪೀಕರ್ ಬಳಸುವಂತಿಲ್ಲ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಲೌಡ್ ಸ್ಪೀಕರ್ ಬಳಕೆಗೆ ನಿರ್ಬಂಧವನ್ನು ವಿಧಿಸಲಾಗಿದೆ. ಇನ್ನು ಆಡಿಟೋರಿಯಂ, ಮುಚ್ಚಿದ ಸಭಾಂಗಣಗಳಲ್ಲಾದರೆ ಮಿತಿಯಲ್ಲಿ ಬಳಸಬಹುದಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಲೌಡ್ ಸ್ಪೀಕರ್ ಬಳಸಬಹುದು. ರಾಜ್ಯ ಸರ್ಕಾರ ರಾತ್ರಿ 10 ರಿಂದ 12 ಗಂಟೆವರೆಗೆ ಕೆಲವೊಮ್ಮೆ ಅನುಮತಿಸಬಹುದು. ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು ನಡೆಯುವಾಗ ರಾತ್ರಿ 10 ರಿಂದ 12 ರವರೆಗೆ ಲೌಡ್ ಸ್ಪೀಕರ್ ಬಳಕೆಗೆ ಸರ್ಕಾರ ವಿನಾಯಿತಿ ನೀಡಬಹುದು. ಆದರೆ 15 ದಿನಗಳಿಗೆ ಸೀಮಿತವಾಗಿ ಮಾತ್ರ ಈ ವಿನಾಯಿತಿ ನೀಡಬಹುದಾಗಿದೆ.












Click it and Unblock the Notifications