ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಸಿದ್ರಾಮಣ್ಣನ ಅನ್ನಭಾಗ್ಯ ಸ್ಕೀಂನಲ್ಲಿ ಉಂಡವನೇ ಜಾಣ

By ಬಾಲರಾಜ್ ತಂತ್ರಿ
|
Google Oneindia Kannada News

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ 'ಅನ್ನಭಾಗ್ಯ' ಯೋಜನೆಯ ಲಾಭ ಪಡೆಯುತ್ತಿರುವವರು ಯಾರು? ಫಲಾನುಭವಿಗಳ ಜೊತೆ ಅಧಿಕಾರಿಗಳು ಮತ್ತು ರೇಷನ್ ಅಂಗಡಿಯವರಾ? ಈ ರೀತಿಯ ಸಂದೇಹ ಮತ್ತು ಪ್ರಶ್ನೆ ಕಾಡುವುದಕ್ಕೆ ಕಾರಣ ಇಲ್ಲದಿಲ್ಲ.

ಈ ಸ್ಕೀಂಗಾಗಿ ಸರಕಾರ ಖರ್ಚು ಮಾಡುತ್ತಿರುವ ಹಣವೆಷ್ಟು? ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿರುವ ಅಕ್ಕಿಮೂಟೆಗಳೆಷ್ಟು, ಅದಕ್ಕೆ ಕೊಟ್ಟ ದುಡ್ಡೆಷ್ಟು? ಬಂದ ಮೂಟೆಗಳಲ್ಲಿ ರೇಷನ್ ಅಂಗಡಿ ತಲುಪುವುದೆಷ್ಟು? ಅದರಲ್ಲಿ ಎಪಿಎಲ್ ಕಾರ್ಡುದಾರರಿಗೆ ಸಿಗುವುದೆಷ್ಟು? ಈ ರೀತಿಯ ಪ್ರಶ್ನೆಗಳು ನಿರಂತರ..

ಅದೆಷ್ಟು ಸತ್ಯವೋ, ಸುಳ್ಳೋ, ಬೆಂಗಳೂರಿನ ದರ್ಶಿನಿ ಹೋಟೇಲುಗಳನಲ್ಲಿ ನಾವು ನಿತ್ಯ ತಿನ್ನುವ ಸೆಟ್/ಮಸಾಲ ದೋಸೆಗಳಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಗಳ ಪಾಲೂ ಇದೆ ಎನ್ನುವ ಸುದ್ದಿಯಿದೆ. (ಅನ್ನಭಾಗ್ಯ ಬಗ್ಗೆ ದೂರಿದ್ದರೆ ಕರೆಮಾಡಿ)

Annabhagya scheme: Whether Siddaramaiah governments purpose served

ಒಂದು ರೂಪಾಯಿಯ ಅಕ್ಕಿ ಹತ್ತು ಪಟ್ಟಿಗೆ ಕಾಳದಂಧೆಯಲ್ಲಿ ನಿರಾಂತಕವಾಗಿ ಹೋಟೇಲಿಗೆ ಮಾರಾಟವಾಗಿ ದೋಸೆಯ ಮೂಲಕ ದರ್ಶಿನಿ ಅಭಿಮಾನಿಗಳ ಉದರ ಸೇರುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆಯೆಂದರೆ ಸಚಿವ ದಿನೇಶ್ ಗುಂಡೂರಾವ್ ಅಪಾರ್ಥ ಮಾಡಿಕೊಳ್ಳಬಾರದು.

ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ವಲಯದ್ದು, ಅವರೂ ತಪ್ಪು ದಾರಿಯಲ್ಲಿ ನಡೆದರೆ ಎಚ್ಚರಿಸಬೇಕಾದವರು ಇತರರು ಎನ್ನುವ ಮಾತನ್ನು ಒಪ್ಪಿಕೊಳ್ಳಬಹುದಾದರೂ, ನಮ್ಮ ಚೌಕಟ್ಟಿನಲ್ಲಿ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಪ್ರಶ್ನಿಸಲು ಸಾಧ್ಯವಾ ಎನ್ನುವ ಪ್ರಶ್ನೆಗೆ ಜನಸಾಮಾನ್ಯರಿಗೆ ಕಾಡದೇ ಇರದು.

ನಮ್ಮ ಊರಿನ ಬಸ್ ಸ್ಟಾಂಡ್, ದೇವಸ್ಥಾನ, ಗಡಂಗ್ (ಬಾರ್) ನಲ್ಲಿ ಜನ ಆವಾಗಾವಾಗ ಈ ಅನ್ನಭಾಗ್ಯ ಸ್ಕೀಂ ಬಗ್ಗೆ ಜನ ಹಾಸ್ಯಮಿಶ್ರಿತವಾಗಿ ಮಾತನಾಡಿಕೊಳ್ಳುತ್ತಿರುತ್ತಾರೆ. ಸರಕಾರದ ಒಂದು ರೂಪಾಯಿ ಸ್ಕೀಂನಿಂದ ಜನ ಇನ್ನಷ್ಟು ಸೋಂಬೇರಿಗಳಾದರು ಎಂದು. ಜನರ ಈ ಮಾತನ್ನು ಒಪ್ಪಿಕೊಳ್ಳುವುದು, ಬಿಡುವುದು ಸರಕಾರದ ವಿವೇಚನೆಗೆ ಬಿಟ್ಟದ್ದು.

ಈ ಯೋಜನೆಯ ಫಲಾನುಭವಿಗಳು ದಿನದಿಂದ ದಿನಕ್ಕೆ ಸೋಮಾರಿಗಳಾಗುತ್ತಿದ್ದಾರೆ ಎನ್ನುವ ಆಪಾದನೆಯ ಜೊತೆ ಇದನ್ನು ಗಿರಾಣಿ ಅಂಗಡಿಗಳಿಗೆ, ಹೋಟೇಲುಗಳಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ವಿವಾದವೂ ಇದೆ. ನಮ್ಮ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು 'ಅಕ್ಕಿ ಮಾರಿಕೊಂಡ್ರೆ, ಮಾರಿಕೊಳ್ಳಲಿ ಬಿಡ್ರೀ' ಎನ್ನುವ ಹೇಳಿಕೆಯನ್ನೂ ನೀಡಿ ನಗೆಪಟಾಲಿಗೆ ಗುರಿಯಾಗಿದ್ದೂ ಉಂಟು.

ಆಹಾರ, ವಿದ್ಯೆ, ಆರೋಗ್ಯ ಮುಂತಾದ ಮೂಲಸೌಕರ್ಯಗಳನ್ನು ಜನತೆಗೆ ಒದಗಿಸುವುದು ಸರಕಾರದ ಕರ್ತ್ಯವ್ಯ. ಅದರಂತೆ ಆಹಾರ ಭದ್ರತೆ ಒದಗಿಸುವುದಕ್ಕಾಗಿ ಸರಕಾರ ಅನ್ನಭಾಗ್ಯ ಯೋಜನೆಯಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಸರಕಾರದ ಉದ್ದೇಶ ಸಫಲತೆಯನ್ನು ಪಡೆಯುತ್ತಿದೆಯೇ ಎನ್ನುವುದು ಇಲ್ಲಿರುವ ಗಂಭೀರ ಪ್ರಶ್ನೆ. (ಅನ್ನಭಾಗ್ಯ: ಗೀತಾರ ನೆಮ್ಮದಿಯ ನುಡಿಗಳು)

Annabhagya scheme: Whether Siddaramaiah governments purpose served

ಪ್ರತೀದಿನ ಅನ್ನಭಾಗ್ಯ ಯೋಜನೆಯ ಅಕ್ಕಿಗಳನ್ನು ಅಕ್ರಮವಾಗಿ ಸಾಗಿಸುವ ಸುದ್ದಿಗಳನ್ನು ಓದುತ್ತಲೇ ಇರುತ್ತೇವೆ. ಇದಲ್ಲದೇ, ಬೇನಾಮಿ ಹೆಸರಿನಲ್ಲಿನ ಬಿಪಿಎಲ್ ಪಡಿತರ ಚೀಟಿಗಳು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಸರಬರಾಜು ಆಗುವ ಅಕ್ಕಿ ಮತ್ತು ಗೋಧಿಯನ್ನು ಅಕ್ರಮವಾಗಿ ಸ್ಥಳೀಯ ಕಿರಾಣಿ ಅಂಗಡಿಗಳಿಗೆ ಮಾರಾಟ ಮಾಡುತ್ತಿರುವುದು ಹಲವು ಜಿಲ್ಲೆಯ ಆಡಳಿತದ ಗಮನಕ್ಕೆ ಬಂದಿದ್ದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದೂ ಆಗಿದೆ.

ಬೇನಾಮಿ ಬಿಪಿಎಲ್‌ ಪಡಿತರ ಚೀಟಿಗಳ ರದ್ದತಿಗೆ ಸೂಕ್ತ ಕ್ರಮ ಸರಕಾರ ಕೈಗೊಂಡಿದೆ ಮತ್ತು ಆಹಾರ ಧಾನ್ಯಗಳ ಖರೀದಿ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಯನ್ನು ತಂದಿದ್ದೇವೆ. ಹಾಗಾಗಿ, ಪ್ರಸಕ್ತ ಸಾಲಿನ ಅನ್ನಭಾಗ್ಯ ಯೋಜನೆಗೆ ಮೀಸಲಿಟ್ಟ ಹಣದಲ್ಲಿ ಸುಮಾರು 1,300 ಕೋಟಿ ಉಳಿತಾಯವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಬಡವರಿಗೆ ಒಂದು ರೂಪಾಯಿ ಅಕ್ಕಿ ನೀಡುವುದು ಸಿದ್ದರಾಮಯ್ಯ ಸರಕಾರದ ಉತ್ತಮ ನಿರ್ಧಾರವಾಗಿದ್ದರೂ, ಇದು ಇನ್ನಷ್ಟು ಭ್ರಷ್ಟಾಚಾರಕ್ಕೆ ದಾರಿಯಾಗದಿರಲಿ. ಜನ ಸೋಮಾರಿಗಳಾಗದಿರಲಿ, ಬಡವರಿಗೆ ಸೇರಬೇಕಾಗಿರುವ ಅಕ್ಕಿ ಅವರಿಗೇ ಸಿಗಲಿ.

English summary
Annabhagya scheme in Karnataka: Whether Siddaramaiah governments purpose served?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X