ಅಂಕೋಲಾ ಆರೆನ್ ನಾಯಕನನ್ನು ಸಾಯಿಸಿದ್ದು ನಾನೇ

ಅಂಕೋಲಾ ನಾಯಕನನ್ನು ಸಾಯಿಸಿದ್ದು ನಾನೇ ಎಂದು ಭೂಗತ ಪಾತಕಿ ಬನ್ನಂಜೆ ರಾಜಾ ಘೋಷಿಸಿಕೊಂಡಿದ್ದಾನೆ.
ಹಫ್ತಾ ನೀಡುವಂತೆ ಈ ಹಿಂದೆ ನಾಲ್ಕಾರು ಬಾರಿ ಆರ್ ಎನ್ ನಾಯಕ್ ಗೆ ಫರ್ಮಾನು ಹೊರಡಿಸಿದ್ದೆ. ಆದರೆ ನನ್ನ ಮಾತನ್ನು ಕೇಳಿರಲಿಲ್ಲ. ಹಾಗಾಗಿ ನನ್ನ ಹುಡುಗರಿಂದ ಆತನ ಹತ್ಯೆಗೆ ನಾನೇ ಸುಪಾರಿ ನೀಡಿದ್ದೆ ಎಂದು ಪಾತಕಿ ಬನ್ನಂಜೆ ರಾಜಾ ಅಲಿಯಾಸ್ ರಾಜೇಂದ್ರ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಪಾತಕಿ ಬನ್ನಂಜೆ ರಾಜಾ, ಉಡುಪಿಯ ಬನ್ನಂಜೆಯಲ್ಲಿರುವ ಸುಂದರ್ ಶೆಟ್ಟಿಗಾರ್ ಅವರ ಪುತ್ರ.
ಆರ್ ಎನ್ ನಾಯಕ್ ಅವರು ರಾಜಕೀಯವಾಗಿ ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದರು, ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು ಹಾಗೂ ಹಣಕಾಸು ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಕಬ್ಬಿಣದ ಅದಿರು ವಹಿವಾಟು ಸಹ ನಡೆಸುತ್ತಿದ್ದರು. ಅಂಕೋಲಾದ ಕೆಸಿ ರಸ್ತೆ ಬಳಿಯ ದ್ವಾರಕ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಸ್ಥೆ ಕಚೇರಿಯಿಂದ ಹೊರ ಬರುತ್ತಿದ್ದಂತೆ ಗುಂಡಿನ ದಾಳಿ ನಡೆಸಲಾಗಿತ್ತು.
ಹತ್ಯೆ ಹೇಗಾಗಿತ್ತು?: ಅಂಕೋಲಾ ಪಟ್ಟಣದ ಬಸ್ ನಿಲ್ದಾಣದ ಬಳಿ ನಾಲ್ವರು ದುಷ್ಕರ್ಮಿಗಳ ತಂಡ ಶನಿವಾರ ಮಧ್ಯಾಹ್ನ ಸಹಕಾರಿ ಕ್ಷೇತ್ರದ ಧುರೀಣ ಆರ್ ಎನ್ ನಾಯಕ್ ಅವರನ್ನು ಗುಂಡಿಟ್ಟು ಸಾಯಿಸಿದ್ದರು. ನಾಲ್ವರ ತಂಡ ನಡೆಸಿದ ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡ ರಕ್ತದ ಮಡುವಿನಲ್ಲಿದ್ದ ಆರ್ ಎನ್ ನಾಯಕ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯತ್ನಿಸಲಾಯಿತು. ಆದರೆ, ಮಾರ್ಗಮಧ್ಯದಲ್ಲೇ ನಾಯಕ್ ಅವರು ಅಸುನೀಗಿದ್ದರು.
ಗುಂಡಿನ ಚಕಮಕಿ ಆರಂಭವಾಗುತ್ತಿದ್ದಂತೆ ನಾಯಕ್ ಅವರ ಗನ್ ಮ್ಯಾನ್ ಕೂಡಾ ಪ್ರತಿದಾಳಿ ನಡೆಸಿದ್ದು, ಓರ್ವ ದುಷ್ಕರ್ಮಿ ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳೀಯರ ಸಹಕಾರಿಂದ ಇನ್ನೊಬ್ಬ ಹಂತಕನನ್ನು ಸೆರೆ ಹಿಡಿಯಲಾಗಿದೆ.
ಹಣ ಸುಲಿಗೆ ಬನ್ನಂಜೆ ರಾಜಾ ಗ್ಯಾಂಗ್ ಮುಖ್ಯ ದಂಧೆ. ತನ್ನ ಕೃತ್ಯಕ್ಕೆ ಶಾರ್ಪ್ ಶೂಟರ್‌ಗಳನ್ನು ಉತ್ತರ ಪ್ರದೇಶದಿಂದ ಕರೆಸಿಕೊಳ್ಳುತ್ತಿದ್ದ. ಬಿಹಾರದ ಸಿವಾನ್ ನಲ್ಲಿ ತಯಾರಾದ ವಿಶೇಷ ಪಿಸ್ತೂಲ್ ಮತ್ತು ರಿವಾಲ್ವರ್ ಗಳನ್ನು ಬಳಸುತ್ತಿದ್ದರು. ಬನ್ನಂಜೆ ರಾಜಾಗೆ ಸ್ಥಳೀಯರಿಂದ ಕಾಲಕಾಲಕ್ಕೆ ಮಾಹಿತಿ ಹರಿದುಬರುತ್ತದೆ ಎನ್ನಲಾಗಿದೆ.


Click it and Unblock the Notifications
