ಯಡಿಯೂರಪ್ಪ, ವಿಜಯೇಂದ್ರ ಜೊತೆ ಅಮಿತ್ ಶಾ ರಹಸ್ಯ ಸಭೆ!
ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬಣ ಹಾಗೂ ಒಳ ಜಗಳದ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಜೊತೆ ರಹಸ್ಯ ಸಭೆ ನಡೆಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಹೌದು ಶುಕ್ರವಾರ ಅಮಿತ್ ಶಾ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಮಾರತ್ತಹಳ್ಳಿಯಲ್ಲಿರುವ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಹಸ್ಯ ಮಾತುಕತೆ ನಡೆದಿದೆ. ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಬದಲಾಯಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ. ಅಲ್ಲದೆ ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಲೇಬೇಕು. ಹೊಸ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಚುನಾವಣೆಯ ಮೂಲಕವೇ ಮಾಡಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದ್ದು. ಇನ್ನೇನು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದೇ ಹೋಯಿತು ಎನ್ನುವಾಗಲೇ ಈ ವಿಷಯ ತಣ್ಣಗಾಗಿತ್ತು. ಇದೀಗ ಯಡಿಯೂರಪ್ಪ ಮತ್ತು ಬಿ.ವೈ ವಿಜಯೇಂದ್ರ ಅವರೊಂದಿಗೆ ಅಮಿತ್ ಶಾ ಅವರು ರಹಸ್ಯ ಸಭೆ ನಡೆಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಚುನಾವಣೆಯಲ್ಲಿ ಬ್ಯುಸಿ ಇತ್ತು. ಇದೀಗ ದೆಹಲಿಯಲ್ಲೂ ಅಧಿಕಾರಕ್ಕೆ ಬರುವ ಮೂಲಕ ಬಿಜೆಪಿಯು ಹೊಸ ದಾಖಲೆಯನ್ನು ಬರೆದಿದೆ. ಹೀಗಾಗಿ, ಬಿಜೆಪಿ ಹೈಕಮಾಂಡ್ ಇದೀಗ ತುಸು ನಿರಾಳವಾಗಿದೆ. ದೇಶದಲ್ಲಿ ಇನ್ನೊಂದು ಆರು ತಿಂಗಳ ವರೆಗೆ ಯಾವುದೇ ಪ್ರಮುಖ ರಾಜ್ಯಗಳ ಚುನಾವಣೆ ಇಲ್ಲ. ಹೀಗಾಗಿ ವಿವಿಧ ರಾಜ್ಯಗಳ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳಿಗೆ ಬ್ರೇಕ್ ಹಾಕುವುದಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ಪಕ್ಕಕ್ಕೆ ಕರೆದು ರಹಸ್ಯ ಮಾತುಕತೆ: ಸಮಾರಂಭ ಮುಗಿಸಿಕೊಂಡು ಹಿಂದಿರುಗುವಾಗ ಅಮಿತ್ ಶಾ ಅವರು ಬಿ.ವೈ ವಿಜಯೇಂದ್ರ ಹಾಗೂ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ರಹಸ್ಯವಾಗಿ ಮಾತನಾಡಿದ್ದಾರೆ. ಅವರ ಅಕ್ಕಪಕ್ಕದಲ್ಲಿ ಇದ್ದವರನ್ನು ದೂರ ಹೋಗುವಂತೆ ಹೇಳಿ ಮಾತನಾಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟು ಜೋರಾಗಿ ಇರುವಾಗಲೇ ಈ ರೀತಿಯ ಸಭೆ ನಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ, ಅಮಿತ್ ಶಾ ಅವರು ಸಮಾರಂಭದಲ್ಲಿ ಗರಂ ಆಗಿರುವುದು ಸಹ ಕಂಡು ಬಂದಿದೆ. ಹೀಗಾಗಿ ಅಮಿತ್ ಶಾ ಅವರು ಬಿ.ವೈ ವಿಜಯೇಂದ್ರ ಅವರ ಮೇಲೆ ಗರಂ ಆಗಿದ್ದಾರೆಯೇ ಎನ್ನುವ ಅನುಮಾನವೂ ಶುರುವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಸನ್ನಿಹಿತ ?
ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಸನ್ನಿಹಿತವಾಗಿದೆಯೇ ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಬಿಜೆಪಿಯಲ್ಲಿ ಕಿತ್ತಾಟ ಜೋರಾಗುತ್ತಿದೆ. ಇದರಿಂದ ಬಿಜೆಪಿಯ ವರ್ಚಸ್ಸಿಗೆ ಧಕ್ಕೆಯಾಗುತ್ತಿದ್ದು. ಇದನ್ನು ಸರಿಪಡಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಅಮಿತ್ ಶಾ ಅವರು ಏನು ಮಾತನಾಡಿದ್ದಾರೆ ಈ ನಿಟ್ಟಿನಲ್ಲಿ ಯಾವ ಬೆಳವಣಿಗೆ ಆಗಲಿದೆ ಎನ್ನುವುದು ಕಾದು ನೋಡಬೇಕಿದೆ.












Click it and Unblock the Notifications