ಸಿದ್ದರಾಮಯ್ಯ-ಡಿಕೆಶಿ ಕುರ್ಚಿ ಕದನ: ಮತ್ತೆ ಕಮಲ ಅರಳಿಸಲು ಕುಮಾರಸ್ವಾಮಿಗೆ ಅಮಿತ್ ಶಾ ಕೊಟ್ಟ ಭರ್ಜರಿ ಪ್ಲಾನ್ ಏನು?
ಬೆಂಗಳೂರು, ಅಕ್ಟೋಬರ್ 27: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಗುಸು ಗುಸು ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ನವೆಂಬರ್‌ಗೆ ಕ್ರಾಂತಿಯಾಗಲಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಕುರ್ಚಿ ಕಾಳಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಈ ಕುರ್ಚಿ ಕಾಳಗ ರಾಜ್ಯ ಮಟ್ಟಕ್ಕೆ ಮಾತ್ರ ಸೀಮಿತವಾಗದೇ ರಾಷ್ಟ್ರಮಟ್ಟದಲ್ಲೂಈ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ನಡುವಿನ ಕುರ್ಚಿ ಕದನದ ಲಾಭವನ್ನ ಬಿಜೆಪಿಯ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಡೆಯಲಿದ್ದಾರೆ.
ಹೌದು, ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾಗಿರುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕಾಳಗದ ಮೇಲೆ ಅಮಿತ್ ಶಾ ಅವರ ಕಣ್ಣಿಟ್ಟಿದ್ದಾರೆ. ನವೆಂಬರ್ ಹೊತ್ತಿಗೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಶುರುವಾಗುವ ಸಂಘರ್ಷದ ಲಾಭವನ್ನ ಅಮಿತ್ ಶಾ ಅವರು ಪಡೆದು ಮತ್ತೆ ಕರ್ನಾಟಕದಲ್ಲಿ ಕಮಲ ಅರಳಿಸಲು ಬಿಜೆಪಿಯ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ರಾಜ್ಯದಲ್ಲಿ ಮತ್ತೆ ಕಮಲ ಅರಳಿಸಲು ಅಮಿತ್ ಶಾ ತೆರೆಮರೆಯಲ್ಲಿ ಒಂದು ಬೃಹತ್ ಯೋಜನೆಯನ್ನು ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ರಾಜ್ಯದಲ್ಲಿ ಕಮಲ ಅರಳಿಸಬೇಕು ಎಂದು ಅಮಿತ್ ಶಾ ಹಲವು ತಂತ್ರಗಾರಿಕೆಯನ್ನ ಹಾಕಿದ್ರು, ಆದ್ರೆ, ಯಾವ ತಂತ್ರಗಾರಿಕೆಯೂ ವರ್ಕೌಟ್ ಆಗಿರಲಿಲ್ಲ. ಇದೀಗ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಕುರ್ಚಿ ಕದನದ ಲಾಭ ಪಡೆಯಲು ಅಮಿತ್ ಶಾ ಅವರು ಮುಂದಾಗಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಈಗಾಗಲೇ ಅಮಿತ್ ಶಾ ಬೃಹತ್ ಯೋಜನೆಯನ್ನ ಹಾಕಿಕೊಟ್ಟಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಶುರುವಾದ ವಿಚಾರವನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಅಮಿತ್ ಶಾ ಯೋಜನೆ ಹಾಕಿಕೊಟ್ಟಿದ್ದಾರೆ. ಇತ್ತೀಚೆಗೆ ಅಮಿತ್ ಶಾ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರು ಭೇಟಿಯಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಚರ್ಚೆ ನಡೆದಿದ್ದು, ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಮೇಲೆ ನಿರಂತರ ನಿಗಾ ಇಡುವಂತೆ ಮತ್ತು ಸರಿಯಾದ ಸಮಯದಲ್ಲಿ ದಾಳಿ ಮಾಡಲು ಸಜ್ಜಾಗುವಂತೆ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಅಮಿತ್ ಶಾ ಅವರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ನವೆಂಬರ್ ತಿಂಗಳಿಗೆ ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಪೂರೈಸಲಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಅಧಿಕಾರ ಹಂಚಿಕೆಯ ಕಿತ್ತಾಟ ಸ್ಫೋಟಕ ರೂಪ ಪಡೆಯಲಿದೆ. ಇನ್ನೂ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಾಗುತ್ತದೆ. ಬಿಹಾರ ಫಲಿತಾಂಶದ ಬಳಿಕ ಕೈ ಪಾಳಯದಲ್ಲಿ ರಾಜಕೀಯ ಬಿಕ್ಕಟ್ಟು ಹೆಚ್ಚಾಗಿದ್ದು, ಈ ವೇಳೆಯೇ ಕಾಂಗ್ರೆಸ್ ಸರ್ಕಾರದ ಹಲವು ಭ್ರಷ್ಟಾಚಾರದ ಹಗರಣಗಳನ್ನು ಬಯಲಿಗೆಳೆಯುವಂತೆ ಕುಮಾರಸ್ವಾಮಿಯವರಿಗೆ ಶಾ ನಿರ್ದೇಶನ ನೀಡಿದ್ದಾರೆ.
ಅಮಿತ್ ಶಾ ಅವರ ಲೆಕ್ಕಾಚಾರದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿ ಮಧ್ಯಂತರ ಚುನಾವಣೆ ಎದುರಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಕಾಂಗ್ರೆಸ್‌ನ ಆಂತರಿಕ ಜಗಳದಿಂದಾಗಿ ಜನ ಬಿಜೆಪಿಯ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಅಲ್ಲದೇ ಮೋದಿ ಅಲೆ ಹಾಗೂ ಜೆಡಿಎಸ್ ಮೈತ್ರಿಯ ಲಾಭ ಪಡೆದು ಸುಲಭವಾಗಿ ಅಧಿಕಾರಕ್ಕೆ ಬರಬಹುದು ಎಂಬ ಲೆಕ್ಕಾಚಾರವನ್ನ ಅಮಿತ್ ಶಾ ಅವರು ಹಾಕಿಕೊಂಡಿದ್ದಾರೆ. ಈ ಲೆಕ್ಕಾಚಾರದ ಮೇಲೆ ಕುಮಾರಸ್ವಾಮಿ ಜೊತೆಗೆ ಅಮಿತ್ ಶಾ ಅವರು ಚರ್ಚೆ ನಡೆಸಿದ್ದು, ಯೋಜನೆಯನ್ನೂ ಸಹ ರೂಪಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications