ಪತ್ರಕರ್ತರ ಮುಂದೆ ಗುಟ್ಟುಬಿಟ್ಟುಕೊಡದ ಮಾಸ್ಟರ್ ಸ್ಟ್ರಾಟಜಿಸ್ಟ್ ಅಮಿತ್
ಬೆಂಗಳೂರು, ಆಗಸ್ಟ್ 14 : ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದೇತರುತ್ತೇನೆಂದು ಪ್ರತಿಜ್ಞೆ ಮಾಡಿರುವ ಮಾಸ್ಟರ್ ಸ್ಟ್ರಾಟಜಿಸ್ಟ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಇದನ್ನು ಹೇಗೆ ಸಾಧಿಸುತ್ತಾರೆ, ಅವರ ಸ್ಟ್ರಾಟಜಿಗಳೇನು ಎಂಬುದರ ಗುಟ್ಟನ್ನು ಎಳ್ಳಷ್ಟು ಬಿಟ್ಟುಕೊಟ್ಟಿಲ್ಲ.
ಮೂರು ದಿನಗಳ ಕಾಲ ಕರ್ನಾಟಕದಲ್ಲಿ ನಾಯಕರು, ಕಾರ್ಯಕರ್ತರು, ಶಾಸಕರು, ಸಂದದರನ್ನು ಭೇಟಿ ಮಾಡಿದ ನಂತರ, ಕರ್ನಾಟಕಕ್ಕೆ ಬೈಬೈ ಹೇಳುವ ಮುನ್ನ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು, ನರೇಂದ್ರ ಮೋದಿ ಸರಕಾರ ಮಾಡಿದ ಸಾಧನೆಗಳ ಬಗ್ಗೆ ಮತ್ತು ಸಿದ್ದರಾಮಯ್ಯ ಮಾಡಿರುವ ಭ್ರಷ್ಟಾಚಾರಗಳ ಬಗ್ಗೆ ಮೀಸಲಿಟ್ಟರು.
ಆರಂಭದಲ್ಲಿ ಪುಂಖಾನುಪುಂಖವಾಗಿ ನರೇಂದ್ರ ಮೋದಿ ಜಾರಿಗೆ ತಂದಿರುವ ಸ್ವಚ್ಛ ಭಾರತ, ಉಜಾಲಾ, ಜಿಎಸ್ ಟಿ ಜಾರಿ, ಮುದ್ರಾ ಬ್ಯಾಂಕ್ ಮುಂತಾದ ಹಲವಾರು ಯೋಜನೆಗಳ ಪಟ್ಟಿಯನ್ನು ಪತ್ರಕರ್ತರ ಮುಂದೆ ಬಿಚ್ಚಿಟ್ಟರು. ನಂತರ ತಾಜ್ ವೆಸ್ಟ್ ಎಂಡ್ ಹೋಟೆಲಿನ ಸಭಾಂಗಣದಲ್ಲಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿಯ ಸುರಿಮಳೆ ಸುರಿಯಿತು.
ಬೆಂಗಳೂರಿನ ಮೇಲ್ಭಾಗದಲ್ಲಿ ಮೋಡಿ ಮುಚ್ಚಿದ ವಾತಾವರಣ, ಯಾವುದೇ ಸಮಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇಂಥ ವಾತಾವರಣದಲ್ಲಿ, ಮೂರು ದಿನಗಳ ಕಾಲ ಆರಾಮವಾಗಿ ಕಾಲಕಳೆಯುತ್ತಿರುವ ಶಾಸಕರು, ಸಂಸದರು, ನಾಯಕರ ಬೆವರಿಳಿಸಿರುವ ಅಮಿತ್ ಶಾ ಅವರಿಂದ ಹೋಟೆಲಿನಲ್ಲಿ ಮಾತಿನ ಭೋರ್ಗರೆತವಾಗುತ್ತದೆ ಎಂದು ಕಾದಿದ್ದವರಿಗೆ ನಿರಾಶೆಯೆಂದೇ ಹೇಳಬೇಕು.
ಪತ್ರಕರ್ತರ ಪ್ರಶ್ನೆಗಳಿಗೂ ಚುಟುಕಾಗಿಯೇ ಉತ್ತರ ನೀಡಿದ ಅವರು, ದೆಹಲಿಗೆ ತೆರಳುವ ತರಾತುರಿಯಲ್ಲಿ ಇನ್ನಷ್ಟು ಪ್ರಶ್ನೆಗಳು ಕೇಳಿಬರುವ ಮುನ್ನವೇ ಕುರ್ಚಿಯಿಂದೆದ್ದು ಹೊರಟೇಬಿಟ್ಟರು. ವೇದಿಕೆಯಲ್ಲಿ ಕರ್ನಾಟಕದ ಉಸ್ತುವಾರಿ ವಹಿಸಿರುವ ಮುರಳೀಧರ ರಾವ್, ಯಡಿಯೂರಪ್ಪ, ಅನಂತ್ ಕುಮಾರ್, ಜಗದೀಶ್ ಶೆಟ್ಟರ್, ಡಿವಿ ಸದಾನಂದ ಗೌಡ, ಈಶ್ವರಪ್ಪ ಕುಳಿತಿದ್ದರು.
ಅವರ ಮಾತಿನ ಇತರ ಮುಖ್ಯಾಂಶಗಳು ಮುಂದಿನಂತಿವೆ.

ಬಿಜೆಪಿ ನಾಯಕರ ದುರಸ್ತಿ ಮಾಡಲು ಬಂದಿದ್ದೆ
ಕರ್ನಾಟಕಕ್ಕೆ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಲು ಮತ್ತು ರಿಪೇರಿಗೆ ಬಂದಿರುವ ನಾಯಕರ ದುರಸ್ತಿ ಮಾಡಲು ಬಂದಿದ್ದುದಾಗಿಯೇ ಮಾತಿಗೆ ಮುನ್ನುಡಿ ಹಾಕಿದ ಅಮಿತ್ ಶಾ ಅವರು, ಕಳೆದ ಮೂರು ವರ್ಷದಲ್ಲಿ ಅತ್ಯುತ್ತಮ ಆಡಳಿತ ನೀಡಿರುವ ನರೇಂದ್ರ ಮೋದಿ ಸರಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಮಾತು ಕೇಳಿಬಂದಿಲ್ಲದಿರುವುದು ನಿಜಕ್ಕೂ ಗರ್ವದ ಸಂಕೇತ ಎಂದು ವಿರೋಧಿಗಳಿಗೆ ಮಾತಿನಿಂದ ತಿವಿದರು.

ಮೂರು ವರ್ಷಗಳಲ್ಲಿ ಐವತ್ತಕ್ಕೂ ಹೆಚ್ಚು ಸಾಧನೆ
ಕಳೆದ 50 ವರ್ಷಗಳಲ್ಲಿ ಮೂರೇಮೂರು ಸಾಧನೆಗಳನ್ನೂ ಮಾಡದ ಸರಕಾರವನ್ನು ದೇಶ ಕಂಡಿರುವಾಗ, ಮೂರೇಮೂರು ವರ್ಷಗಳಲ್ಲಿ 50ಕ್ಕೂ ಹೆಚ್ಚು ಹೇಳಿಕೊಳ್ಳುವಂಥ ಸಾಧನೆಗಳನ್ನು ಮಾಡಿದ್ದು ನರೇಂದ್ರ ಮೋದಿಯವರ ಹೆಗ್ಗಳಿಕೆ. ಮೋದಿಯವರು ಅತ್ಯಂತ ಪಾರದರ್ಶಕ ಆಡಳಿತ ನೀಡಿದ್ದು ಮಾತ್ರವಲ್ಲ, ಅನೇಕ ನೀತಿಗಳನ್ನು ರೂಪಿಸಿದ್ದಾರೆ, ಅವನ್ನು ಯಶಸ್ವಿಯಾಗಿ ಜಾರಿಗೂ ತಂದಿದ್ದಾರೆ ಎಂದು ಶಭಾಸ್ ಗಿರಿ ತಟ್ಟಿಕೊಂಡರು.

ಹನುಮಂತನ ಬಾಲದಂತೆ ಬೆಳೆದ ಸಾಧನೆಗಳ ಪಟ್ಟಿ
ಶಾ ಅವರ ಮಾತುಗಳಲ್ಲಿ ಮೋದಿಯವರ ಯೋಜನೆಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಯಿತು. ಭಾರತದಲ್ಲಿ ಡಿನೋಟಿಫಿಕೇಷನ್ ಮಾಡಿ ಆರ್ಥಿಕ ಅಭಿವೃದ್ಧಿಗೆ ಶ್ರೀಕಾರ ಹಾಕಿದ್ದಲ್ಲದೆ, ಪಾಕಿಸ್ತಾನದ ಸೈನಿಕರಿಗೆ ಅವರ ಗಡಿಯೊಳಗೇ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಠ ಕಲಿಸಿದ್ದು, ಇಸ್ರೋದಂಥ ಸಂಸ್ಥೆ ಜಾಗತಿಕವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದು ಮೋದಿ ಸರಕಾರಕ್ಕೆ ಅಭಿಮಾನದ ಗರಿ ಮೂಡಿಸಿದೆ ಎಂದು ಗರ್ವದಿಂದ ನುಡಿದರು.

ಸಿದ್ದರಾಮಯ್ಯ ಮೇಲೆ ಮಾತಿನ ಬಾಣ
ಐಟಿ ದಾಳಿಗೊಳಗಾಗಿರುವ ಡಿಕೆ ಶಿವಕುಮಾರ್ ಪ್ರತಿಭಟನೆ ಮಾಡುವ ಮಾತುಗಳನ್ನು ಯಡಿಯೂರಪ್ಪನವರಿಗೆ ಬಿಟ್ಟುಕೊಟ್ಟಿದ್ದ ಅಮಿತ್ ಶಾ ಅವರು, ತಮ್ಮ ಮಾತಿನ ಬಾಣವನ್ನು ಸಿದ್ದರಾಮಯ್ಯ ಅವರೆಡೆಗೆ ತೂರಿದರು. ಕರ್ನಾಟಕಕ್ಕೆ ಕೇಂದ್ರ ಇಷ್ಟೂ ಸಹಾಯ ಮಾಡಿಲ್ಲ ಎಂದು ದೂರುತ್ತಲೇ ಇರುವ ಸಿದ್ದರಾಮಯ್ಯನವರು, ಕೇಂದ್ರ ಸರಕಾರವೇ ರಾಜ್ಯಕ್ಕೆ ನೀಡಿರುವ ಅನುದಾನಗಳ ಪಟ್ಟಿಯನ್ನು ತೆಗೆದು ನೋಡಲಿ ಎಂದು ಸವಾಲು ಎಸೆದರು.

ಕರ್ನಾಟಕಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನ
13ನೇ ಹಣಕಾಸು ಆಯೋಗ ನೀಡಿದ್ದ ಅನುದಾನಕ್ಕಿಂತ 14ನೇ ಹಣಕಾಸು ಆಯೋಗ ಸಿದ್ದರಾಮಯ್ಯ ಸರಕಾರಕ್ಕೆ ಅತೀಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದೆ. ಸ್ಮಾರ್ಟ್ ಸಿಟಿ, ಸ್ವಚ್ಛ ಭಾರತ, ನಮ್ಮ ಮೆಟ್ರೋ, ಪ್ರಧಾನಮಂತ್ರಿ ಆವಾಸ ಯೋಜನೆ, ರಸ್ತೆ ನಿರ್ಮಾಣ, ರೈಲ್ವೆಗಾಗಿ ಸಾಕಷ್ಟು ಹಣಕಾಸು ಸಹಾಯವನ್ನು ಕೇಂದ್ರ ಮಾಡಿದೆ. ಇದನ್ನೆಲ್ಲ ಸಿದ್ದರಾಮಯ್ಯನವರೇಕೆ ನೋಡುತ್ತಿಲ್ಲ?

ಕೇಂದ್ರ ನೀಡಿದ ಹಣವನ್ನೆಲ್ಲ ಎಲ್ಲಿಟ್ಟಿದ್ದೀರಿ ಸಿದ್ದರಾಮಯ್ಯನವರೆ
ಎಷ್ಟೊಂದು ಯೋಜನೆಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡಿದೆ, ಇದೆಲ್ಲದರ ಬಗ್ಗೆ ವೆಬ್ ಸೈಟಿನಲ್ಲಿ ಮಾಹಿತಿಯಿದೆ. ಅದನ್ನೆಲ್ಲ ಇಟ್ಟುಕೊಂಡೇ ಮಾತಾಡುತ್ತಿದ್ದೇನೆ. ಆದರೆ, ಸಿದ್ದರಾಮಯ್ಯನವರೇ, ಬರೀ ಪ್ರಶ್ನೆ ಕೇಳುತ್ತೀರಲ್ಲ, ಸಾರ್ವಜನಿಕವಾಗಿ ಕೇಳುತ್ತಿದ್ದೇನೆ ಸಿದ್ದರಾಮಯ್ಯನವರೇ ಕೇಂದ್ರ ಬಿಡುಗಡೆ ಮಾಡಿದ ಆ ಹಣವೆಲ್ಲ ಎಲ್ಲಿಟ್ಟಿದ್ದೀರಿ ಎಂದು ಅಮಿತ್ ಶಾ ಪ್ರಶ್ನಿಸಿದರು. ಈ ಮಾತಿಗೆ ಪಕ್ಕದಲ್ಲೇ ಕುಳಿತಿದ್ದ ಅನಂತ್ ಕುಮಾರ್ ಅವರು ತಲೆಯಾಡಿಸುತ್ತಿದ್ದರು.

ಬಾಯಿತಪ್ಪಿ ಯಡಿಯೂರಪ್ಪನವರ ಬೆವರಿಳಿದ ಅಮಿತ್
ಮಾತಿನ ಭರದಲ್ಲಿ ಸಿದ್ದರಾಮಯ್ಯನವರ ಹೆಸರಿನ ಬದಲು ಯಡಿಯೂರಪ್ಪನವರ ಹೆಸರನ್ನು ತೆಗೆದುಕೊಂಡು ಅಮಿತ್ ಅವರು ಯಡಿಯೂರಪ್ಪನವರಿಗೇ ಬೆವರಿಳಿಯುವಂತೆ ಮಾಡಿದರು. ಆದ ತಪ್ಪನ್ನು ಕಿವಿಯಲ್ಲಿ ಉಸುರಿದಾಗ, ತಿದ್ದಿಕೊಂಡು ಭ್ರಷ್ಟಾಚಾರಿಗಳಿಗೆ ಆಶ್ರಯ ನೀಡುತ್ತಿರುವ ಸಿದ್ದರಾಮಯ್ಯನವರದು ಅತ್ಯಂತ ಭ್ರಷ್ಟ ಸರಕಾರ, ಅವರಂಥ ನಾಚಿಕೆಗೇಡಿನ ವ್ಯಕ್ತಿಯನ್ನು ನಾನೆಂದೂ ಕಂಡಿಲ್ಲ. ಈ ಭ್ರಷ್ಟಾಚಾರದ ಆರೋಪಗಳನ್ನೇ ಅವರು ಮೆಡಲ್ ಎಂಬಂತೆ ಸಿಕ್ಕಿಸಿಕೊಂಡು ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.

ಪತ್ರಕರ್ತರ ಪ್ರಶ್ನೆಗೆ ಜಾಣತನದ ಉತ್ತರ
ಕೇರಳ, ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶದಲ್ಲಿಯೂ ನಡೆದಿರುವ ಅನಾಚಾರಗಳ ಬಗ್ಗೆ ಪ್ರಶ್ನೆಗಳು ತೂರಿಬಂದಾಗ, ಜಾಣತನದಿಂದ ಉತ್ತರ ನೀಡಿದ ಅವರು, ತನಿಖೆ ಮಾಡದೆ ಬಿಜೆಪಿ ಯಾವ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ. ತನಿಖೆಯಾಗಿ ತಪ್ಪತಸ್ಥನೆಂದು ಗೊತ್ತಾದರೂ ಎಂಥವರ ವಿರುದ್ಧವೂ ಕ್ರಮ ತೆಗೆದುಕೊಳ್ಳದೆ ಬಿಡುವುದಿಲ್ಲ. ಇದೇ ಪ್ರಶ್ನೆಯನ್ನು ಸಿದ್ದರಾಮಯ್ಯನವರಿಗೆ ನೀವು ಏಕೆ ಕೇಳುವುದಿಲ್ಲ ಎಂದು ಅವರು ತಿರುಗುಬಾಣ ಎಸೆದರು.

ಯಡಿಯೂರಪ್ಪ ನೇತೃತ್ವದ ಸರಕಾರ ಶತಸಿದ್ಧ
ಕಡೆಗೆ, ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಸರಕಾರ ರಚಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೊಂಚ ಅತಿಯಾದ ಆತ್ಮವಿಶ್ವಾಸದಿಂದಲೇ ಹೇಳಿದರು. ಇದಕ್ಕೆ ತಮ್ಮ ಸ್ಟ್ರಾಟಜಿಯೇನೆಂದು ಕೇಳಿದಾಗ, ನಮ್ಮ ಸ್ಟ್ರಾಟಜಿಯನ್ನು ಪತ್ರಕರ್ತರ ಮುಂದೆ ಮುಕ್ತವಾಗಿ ಹೇಳುವಷ್ಟು ಮೂರ್ಖ ನಾನಲ್ಲ ಎಂದು ನಗೆಯುಕ್ಕಿಸಿದರು. ಅಂತಿಮ ಮತ ಎಣಿಕೆ ಮುಗಿದಾಗ ನಿಮಗೇ ಎಲ್ಲ ತಿಳಿಯುತ್ತದೆ ಎಂದು ಹೇಳಿರುವ ಅಮಿತ್ ಶಾ ತಾವೊಬ್ಬ ಎಂತಹ ಸ್ಟ್ರಾಟಜಿಸ್ಟ್ ಎಂಬುದನ್ನು ಮತ್ತೆ ಸಾಬೀತುಪಡಿಸುವ ಹವಣಿಕೆಯಲ್ಲಿದ್ದಾರೆ.
-
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ












Click it and Unblock the Notifications