ಅಂಬರೀಶ್ ಚಿಕಿತ್ಸಾ ವೆಚ್ಚ, ಲೋಕಾಯುಕ್ತಕ್ಕೆ ದೂರು?
ಬೆಂಗಳೂರು, ಫೆ.2 : ವಸತಿ ಸಚಿವ ಅಂಬರೀಶ್ ವಿರುದ್ಧ ದೂರು ದಾಖಲಿಸಲು ಸ್ಪೀಕರ್ ಅನುಮತಿ ಬೇಕಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸ್ಪಷ್ಟಪಡಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅಂಬರೀಶ್ ವಿದೇಶಿ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆಗೆ ಸರ್ಕಾರದಿಂದ ಪಡೆದ ಹಣ ಕಾನೂನು ಬಾಹಿರವಾಗಿದ್ದು, ಇದರ ವಿರುದ್ಧ ದೂರು ಸಲ್ಲಿಸಲು ವಕೀಲ ವಿನೋದ್ ಅನುಮತಿ ಕೇಳಿದ್ದರು.
ಡಿಸೆಂಬರ್ 19ರಂದು ಶಿವಮೊಗ್ಗ ಮೂಲದ ವಕೀಲ ವಿನೋದ್ ಅವರು ವಸತಿ ಸಚಿವ ಅಂಬರೀಶ್ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡುವಂತೆ ಸ್ಪೀಕರ್, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಸೋಮವಾರ ಸ್ಪೀಕರ್ ಕಚೇರಿಯಿಂದ ದೂರು ಕೊಡಲು ಅನುಮತಿ ಬೇಕಿಲ್ಲ ಎಂದು ವಿನೋದ್ ಅವರಿಗೆ ಉತ್ತರ ನೀಡಲಾಗಿದೆ. [ಬೆಂಗಳೂರಿನಲ್ಲಿ ಮನಬಿಚ್ಚಿ ಮಾತನಾಡಿದ ಅಂಬರೀಶ್]

ಏನಿದು ವಿವಾದ : ಅನಾರೋಗ್ಯಕ್ಕೆ ಒಳಗಾಗಿದ್ದ ಸಚಿವ ಅಂಬರೀಶ್ ಬೆಂಗಳೂರಿನ ಖಾಸಗಿ ಆಸ್ಪತ್ರೆ ಹಾಗೂ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಚಿಕಿತ್ಸಾ ವೆಚ್ಚ 1.16 ಕೋಟಿ ರೂ.ಗಳನ್ನು ಸರ್ಕಾರ ಪಾವತಿ ಮಾಡಿತ್ತು. [ಬಿಲ್ ಕಟ್ಟಲಾಗದಷ್ಟು ದರಿದ್ರ ಇಲ್ಲ ಅಂದಿದ್ರು ಅಂಬರೀಶ್]
ಇದರಲ್ಲಿ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್, ಆಪ್ತ ಕಾರ್ಯದರ್ಶಿ ಕೆಂಪೇಗೌಡ ಹಾಗೂ ಬೆಂಗಳೂರಿನ ಖಾಸಗಿ ಆಸ್ಪತ್ರೆ ವೈದ್ಯರಾದ ಶೇಖರ್, ಸತೀಶ್ ಹಾಗೂ ರಘನಂದನ್‌ರವರ ವಿಮಾನ ಪ್ರಯಾಣ ವೆಚ್ಚವೂ ಸೇರಿತ್ತು. ಕರ್ನಾಟಕ ಮಿನಿಸ್ಟರ್ ಮೆಡಿಕಲ್ ಅಟೆಂಡಿನ್ಸಿ ರೂಲ್ಸ್ 1958 ಮತ್ತು ವಿನಾಯ್ತಿ ನಿಯಮದ 7ರ ಪ್ರಕಾರ ಸರ್ಕಾರ ಹಣ ವೆಚ್ಚವನ್ನು ನೀಡಿತ್ತು.
ನಿಯಮದ ಪ್ರಕಾರ ದೇಶದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಚಿವರಿಗೆ ಗರಿಷ್ಠ 5 ಲಕ್ಷ ರೂ. ಮಾತ್ರ ಸರ್ಕಾರ ಚಿಕಿತ್ಸಾ ವೆಚ್ಚ ಬಿಡುಗಡೆ ಮಾಡಬಹುದು. ವಿದೇಶದಲ್ಲಿ ಚಿಕಿತ್ಸೆ ಪಡೆದರೆ ಸಚಿವರ ಆರ್ಥಿಕ ಸ್ಥಿತಿಗತಿ ನೋಡಿ ಸಂಪುಟದ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡಬೇಕು.
ಸಚಿವ ಅಂಬರೀಶ್ ಅವರು ಚಿಕಿತ್ಸಾ ವೆಚ್ಚ ಭರಿಸುವಷ್ಟು ಆರ್ಥಿಕವಾಗಿ ಶಕ್ತಿ ಉಳ್ಳವರಾಗಿದ್ದಾರೆ. ಆದರೂ ಸರ್ಕಾರ ಹಣ ಬಿಡುಗಡೆ ಮಾಡಿರುವುದು ಜನರ ಹಣದ ದುರುಪಯೋಗವಾಗಿದೆ. ಆದ್ದರಿಂದ, ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲು ಅವಕಾಶ ನೀಡಬೇಕೆಂದು ವಿನೋದ್ ಮನವಿ ಮಾಡಿದ್ದರು.
ಸದ್ಯ, ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ದೂರು ನೀಡಲು ಸ್ಪೀಕರ್ ಅನುಮತಿ ಬೇಕಾಗಿಲ್ಲ ಎಂದು ವಿನೋದ್ ಅವರಿಗೆ ಉತ್ತರ ನೀಡಿದ್ದು, ಅಂಬರೀಶ್ ವಿರುದ್ಧ ದೂರು ದಾಖಲಾಗುವ ಸಾಧ್ಯತೆ ಇದೆ. ವಿನೋದ್ ಅವರು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಉಲ್ಲಂಘನೆ ಅನ್ವಯ ದೂರು ದಾಖಲಿಸುವ ಸಾಧ್ಯತೆ ಇದೆ.












Click it and Unblock the Notifications