ಮೈತ್ರಿ ಬಗ್ಗೆ ಮಾತಾಡಿದ್ದಕ್ಕೆ ಮುನಿಸು, ಎಚ್ಚರಿಕೆ ಕೊಟ್ಟ ಎಚ್ಡಿಕೆ
ಬೆಂಗಳೂರು, ನವೆಂಬರ್ 27 : ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತನಾಡುತ್ತಿರುವ ಪಕ್ಷದ ಶಾಸಕರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ ಎಂದು ದೇವೇಗೌಡರು ಹೇಳಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, '3 ರಿಂದ 4 ಜನರಿಗೋಸ್ಕರ ಪಕ್ಷದ ಲಕ್ಷಾಂತರ ಕಾರ್ಯಕರ್ತರನ್ನು ಬಲಿಕೊಡಲು ನಾನು ಸಿದ್ಧನಿಲ್ಲ. ಯಾವುದೇ ವಿಷಯಗಳನ್ನು ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಿ, ಸಾರ್ವಜನಿಕರ ಮುಂದೆ ಚರ್ಚಿಸಬೇಡಿ' ಎಂದು ಹೇಳಿದರು. [ಕುಮಾರಸ್ವಾಮಿಯನ್ನು ಚರ್ಚೆಗೆ ಆಹ್ವಾನಿಸಿದ ಜಮೀರ್!]
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಳ್ಳುವ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಜಮೀರ್ ಅಹಮದ್ ಖಾನ್ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಗುರುವಾರ ಸವಾಲು ಹಾಕಿದ್ದರು. ಇಂದು ಅದಕ್ಕೆ ಕುಮಾರಸ್ವಾಮಿ ಅವರು ಖಡಕ್ ಆಗಿ ತಿರುಗೇಟು ನೀಡಿದರು. [ಕುಮಾರಸ್ವಾಮಿ ರಾಜೀನಾಮೆ ಮಾತಾಡಿದ್ದು ಏಕೆ?]
'ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ. ಜೆಡಿಎಸ್ ಪಕ್ಷ ಏಕಾಂಗಿಯಾಗಿ 25 ಸ್ಥಾನಗಳಲ್ಲಿಯೂ ಸ್ಪರ್ಧಿಸಲಿದೆ. ಯಾವುದೇ ಪಕ್ಷದ ಜೊತೆಗೂ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ' ಎಂದು ಎಚ್.ಡಿ.ದೇವೇಗೌಡರು ಶುಕ್ರವಾರ ಸ್ಪಷ್ಟಪಡಿಸಿದರು. ಕುಮಾರಸ್ವಾಮಿ ನೀಡಿದ ಎಚ್ಚರಿಕೆ ಏನು? ಚಿತ್ರಗಳಲ್ಲಿ ನೋಡಿ.....

ಹುಡುಗಾಟಿಕೆಯ ರಾಜಕಾರಣ ಬೇಡ
'ವಿಧಾನಪರಿಷತ್ ಚುನಾವಣೆಯಲ್ಲಿ ಬೇರೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಹುಡುಗಾಟಿಯ ರಾಜಕಾರಣ ಮಾಡಬೇಡಿ. ಇಂತಹ ರಾಜಕಾರಣ ಮಾಡಿದರೆ ಶಿಸ್ತುಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ' ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಕುಮಾರಸ್ವಾಮಿ ಎಚ್ಚರಿಕೆ ಯಾವ ಶಾಸಕರಿಗೆ?
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮತ್ತು ನಾಗಮಂಗಲ ಶಾಸಕ ಎನ್.ಚೆಲುವರಾಯಸ್ವಾಮಿ ಮುಂದಾಳತ್ವ ವಹಿಸಿದ್ದಾರೆ. ಈ ಶಾಸಕರಿಗೆ ಪರೋಕ್ಷವಾಗಿ ಎಚ್ಡಿಕೆ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ
'ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡಿ ಈ ನಿರ್ಧಾರಕ್ಕೆ ಬಂದಿದ್ದೇನೆ' ಈ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಲಕ್ಷಾಂತರ ಕಾರ್ಯಕರ್ತರಿಗೆ ಅವಮಾನ ಮಾಡೋಲ್ಲ
'ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯ ಕುರಿತು 3 -4 ಜನರಿಗೋಸ್ಕರ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ನಾನು ಅವಮಾನ ಮಾಡುವುದಿಲ್ಲ. ಇಂತಹ ವಿಷಯಗಳನ್ನು ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು, ಬಹಿರಂಗವಾಗಿ ಚರ್ಚೆ ನಡೆಸಬಾರದು' ಎಂದು ಕುಮಾರಸ್ವಾಮಿ ಹೇಳಿದರು.

ದೇವೇಗೌಡರನ್ನು ಭೇಟಿ ಮಾಡುವೆ
'ಚುನಾವಣೆಯಲ್ಲಿ ಜೆಡಿಎಸ್ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ. ಈ ಸಂಬಂಧ ಶುಕ್ರವಾರ ಸಂಜೆ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ ದೇವೇಗೌಡರನ್ನು ಭೇಟಿ ಮಾಡಲಾಗುವುದು' ಎಂದು ಕುಮಾರಸ್ವಾಮಿ ಹೇಳಿದರು.

ಜಮೀರ್ ಏನು ಹೇಳಿದ್ದರು?
ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಜಮೀರ್ ಅಹಮದ್ ಖಾನ್, 'ಪಕ್ಷದ ನಾಯಕರ ಸೂಚನೆ ಸಿಕ್ಕಮೇಲೆ ಮೈತ್ರಿ ಮಾತುಕತೆ ನಡೆಸಿದ್ದೇವೆ. ಸ್ವತಂತ್ರವಾಗಿ ಹೋಗಿ ನಾವು ಹೇಗೆ ಮಾತುಕತೆ ನಡೆಸಲು ಸಾಧ್ಯ?. ಕುಮಾರಸ್ವಾಮಿ ಅವರ ಜೊತೆ ಈ ಬಗ್ಗೆ ಬಹಿರಂವಾಗಿ ಚರ್ಚೆ ಮಾಡಲು ಸಿದ್ಧನಿದ್ದೇನೆ' ಎಂದು ಹೇಳಿದ್ದರು.

ಮೈತ್ರಿ ಮುಗಿದ ಅಧ್ಯಾಯ ಅಂದ್ರು ಗೌಡ್ರು
'ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ. ಜೆಡಿಎಸ್ ಪಕ್ಷ ಏಕಾಂಗಿಯಾಗಿ 25 ಸ್ಥಾನಗಳಲ್ಲಿಯೂ ಸ್ಪರ್ಧಿಸಲಿದೆ. ಯಾವುದೇ ಪಕ್ಷದ ಜೊತೆಗೂ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ' ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.

ಮೊದಲಿನಿಂದಲೂ ಮೈತ್ರಿ ವಿರೋಧಿಸುತ್ತಿದ್ದಾರೆ
'ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಿದರೆ 5-6 ಸ್ಥಾನಗಳಲ್ಲಿ ಜಯಗಳಿಸಬಹುದು. ಹೀಗಿರುವಾಗ ಕಾಂಗ್ರೆಸ್ ಜೊತೆ ಹೊಂದಾಣಿಕೆಯ ಅವಶ್ಯಕತೆ ಏನಿದೆ?. ಸದನದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುವ ನಾವು ಅದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೆ ಜನರಿಗೆ ಏನು ಉತ್ತರ ಹೇಳುವಿರಿ?' ಎಂಬುದು ಕುಮಾರಸ್ವಾಮಿ ಪ್ರಶ್ನೆ. ಆದ್ದರಿಂದ ಅವರು ಮೈತ್ರಿಯನ್ನು ವಿರೋಧಿಸುತ್ತಿದ್ದಾರೆ.

ಸಿಂಗ್-ಜಮೀರ್ ಮಾತುಕತೆ
ಶಾಸಕ ಜಮೀರ್ ಅಹಮದ್ ಖಾನ್ ಮೈತ್ರಿ ಮಾತುಕತೆಯ ನೇತೃತ್ವ ವಹಿಸಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮೈತ್ರಿ ಕುರಿತು ಚರ್ಚೆ ನಡೆಸಿದ್ದರು. ಇದು ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.












Click it and Unblock the Notifications