ಪಾಕಿಸ್ತಾನಕ್ಕೆ ಪಾಠ, ನಮಗೆ ಸಂತೋಷದ ಸುದಿನ : ಪೂರ್ಣಿಮಾ ಶ್ರೀನಿವಾಸ್
Recommended Video

ಬೆಂಗಳೂರು, ಫೆಬ್ರವರಿ 26 : 'ನಮ್ಮ ಸೇನೆಯ ದಿಟ್ಟ ನಿರ್ಧಾರಕ್ಕೆ ನಮ್ಮ ಅಭಿನಂದನೆ. ಇಂದು ಸಂತೋಷದ ದಿನ ಸುದಿನ. ಪಾಕಿಸ್ತಾನಕ್ಕೆ ಇದು ತಕ್ಕ ಪಾಠವಾಗಬೇಕು' ಎಂದು ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಭಾರತೀಯ ವಾಯುಸೇನೆ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿದ ಬಗ್ಗೆ ಒನ್ ಇಂಡಿಯಾ ಜೊತೆ ಮಾತನಾಡಿದ ಅವರು, 'ಇದಕ್ಕಿಂತ ಸಂತೋಷ ದೇಶಕ್ಕೆ ಇನ್ನೊಂದಿಲ್ಲ. ನಮ್ಮ ಯೋಧರು ಹುತಾತ್ಮರಾದಾಗ ದೇಶ ದುಃಖದಲ್ಲಿತ್ತು. ನಮ್ಮ ದೇಶವನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ನಮಗೆ ಸಾಧ್ಯವೇ ಎಂದು ಬೇಸರ ಉಂಟಾಗಿತ್ತು' ಎಂದರು.
'ಇಂದು ಸೇನಾಪಡೆಗಳು ವಿರೋಧಿಗಳನ್ನು ಸೆದೆ ಬಡಿದಿವೆ. ಇದಕ್ಕಾಗಿ ದೇಶದ ಪ್ರತಿಯೊಬ್ಬರೂ ಹೆಮ್ಮೆ ಪಡೆಬೇಕು. ಹಬ್ಬ ಆಚರಿಸಬೇಕು, ಇಂದು ಸಂತೋಷದ ಸುದಿನ. ಇದಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಕಾರಣ' ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

'ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರಗಳಿಂದಾಗಿ ದೇಶ ಸುರಕ್ಷಿತವಾಗಿದೆ. ಮತ್ತೊಮ್ಮೆ ಅವರು ಪ್ರಧಾನಿಯಾಗಬೇಕು. ಅಂತಹ ಧೀಮಂತ ನಾಯಕ ಪ್ರಧಾನಿಯಾದಾಗ ಮಾತ್ರ ದೇಶ ಸುರಕ್ಷಿತವಾಗಿರುತ್ತದೆ ಎಂದು ಸಾಮಾನ್ಯ ಪ್ರಜೆಯಾಗಿ ಹೇಳುತ್ತೇನೆ' ಎಂದು ತಿಳಿಸಿದರು.
'ಭಾರತೀಯರು ಸ್ವಭಾವತಃ ಶಾಂತಿ ಪ್ರಿಯರು. ಗಲಾಟೆ ಮಾಡಬೇಕು ಎಂದು ಯಾವತ್ತೂ ಹೋಗುವುದಿಲ್ಲ. ಆದರೆ, ನಮ್ಮ ಶಾಂತಿಗೆ ಭಂಗ ಬಂದರೆ ಸುಮ್ಮನೆ ಕೂರುವುದಿಲ್ಲ ಎಂಬುದಕ್ಕೆ ಇಂದಿನ ದಾಳಿಯೇ ಉತ್ತರ. ಈ ದಾಳಿ ಪಾಕಿಸ್ತಾನಕ್ಕೆ ಪಾಠವಾಗಬೇಕು' ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
'ನಮ್ಮ ಸೇನೆ ತೆಗೆದುಕೊಂಡಿರುವ ದಿಟ್ಟ ನಿರ್ಧಾರಕ್ಕೆ ನಾವು ಶಹಬ್ಬಾಸ್ ಎನ್ನಬೇಕು. ಮೋದಿ ಅವರು ಪ್ರಧಾನಿಯಾದ ಬಳಿಕ ಸೈನ್ಯಕ್ಕೆ ಹೆಚ್ಚಿನ ಒತ್ತು ನೀಡಿದರು. ಅವರು ಸೇನೆಗೆ ಕೊಟ್ಟಷ್ಟು ಮಹತ್ವವನ್ನು ಬೇರೆ ಯಾವ ಪ್ರಧಾನಿಗಳೂ ನೀಡಿಲ್ಲ' ಎಂದರು.












Click it and Unblock the Notifications