ಡೊನಾಲ್ಡ್ ಟ್ರಂಪ್ ಎಐ ವಿಡಿಯೋ ಬಳಸಿ ಕರ್ನಾಟಕದಲ್ಲಿ 2 ಕೋಟಿ ರೂಪಾಯಿ ವಂಚನೆ
ತಂತ್ರಜ್ಞಾನ ಮುಂದುವರೆದಂತೆ ಜನರನ್ನು ವಂಚಿಸಲು ಹೊಸ ಹೊಸ ವಿಧಾನಗಳನ್ನು ಖದೀಮರು ಕಂಡುಕೊಳ್ಳುತ್ತಿದ್ದಾರೆ. ಆನ್‌ಲೈನ್ ವಂಚನೆಗೆ ಬಲಿಯಾಗದಂತೆ ಸೈಬರ್ ಪೊಲೀಸರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಷ್ಟೇ ಜಾಗೃತಿ ಅಭಿಯಾನ ನಡೆಸಿದರೂ ಮೋಸ ಹೋಗುವವರ ಸಂಖ್ಯೆಗೇನೂ ಕಡಿಮೆ ಇಲ್ಲ.
ಈಗ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿಕೊಂಡು ಕರ್ನಾಟಕದ ಹಲವು ನಗರಗಳಲ್ಲಿ ವಂಚನೆ ಮಾಡಿರುವುದು ಪತ್ತೆಯಾಗಿದೆ. ಎಐ ತಂತ್ರಜ್ಞಾನ ಬಳಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಡಿಯೋ ಸೃಷ್ಟಿಸಿದ್ದು ಇದನ್ನು ಬಳಸಿಕೊಂಡು ಸುಮಾರು 200 ಜನರನ್ನು ವಂಚಿಸಲಾಗಿದೆ. ಸೈಬರ್ ಅಪರಾಧಿಗಳು ಹೆಚ್ಚಿನ ಆದಾಯದ ಭರವಸೆ ನೀಡಿ ಟ್ರಂಪ್ ಹೋಟೆಲ್ ಬಾಡಿಗೆಗಳಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಸುಮಾರು 2 ಕೋಟಿ ರೂಪಾಯಿಗೂ ಹೆಚ್ಚಿನ ವಂಚನೆ ಮಾಡಲಾಗಿದೆ ಎಂದು ವರದಿಯಾಗಿದೆ.

ಪೊಲೀಸರ ಪ್ರಕಾರ, ಬೆಂಗಳೂರು, ತುಮಕೂರು, ಮಂಗಳೂರು ಮತ್ತು ಹಾವೇರಿಯಲ್ಲಿ ಈ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಹಾವೇರಿಯಲ್ಲೇ 15 ಕ್ಕೂ ಹೆಚ್ಚು ಜನರು ಈ ಹಗರಣದಲ್ಲಿ ಹಣವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಹೆಚ್ಚಿನ ಲಾಭದ ಆಮಿಷ ನೀಡಿ ವಂಚನೆ
ವಂಚಕರು ಜನರಿಗೆ ಹೆಚ್ಚಿನ ಆದಾಯ ಮತ್ತು ಮನೆಯಿಂದಲೇ ಕೆಲಸ ಹಾಗೂ ಹೂಡಿಕೆ ಮಾಡುವ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ವಂಚಕರು ಆರಂಭದಲ್ಲಿ ಬಳಕೆದಾರರಿಗೆ ಅಕೌಂಟ್ ತೆರೆಯಲು 1,500 ರೂ. ನೀಡುವಂತೆ ಕೇಳಿದ್ದಾರೆ. ಬಳಿಕ ಅವರಿಗೆ ಕಂಪನಿಯ ಪ್ರೊಫೈಲ್‌ಗಳನ್ನು ಬರೆಯುವಂತಹ ಕೆಲಸಗಳನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ಕಟ್ಟಿದವರು ಕೆಲಸ ಪೂರೈಸಿದ ಬಳಿಕ ಅವರಿಗೆ ನೀಡಿದ್ದ ಅಪ್ಲಿಕೇಶನ್ ಡ್ಯಾಶ್‌ಬೋರ್ಡ್‌ನಲ್ಲಿ ಅವರು ಹೆಚ್ಚಿನ ಹಣ ಸಂಪಾದನೆ ಮಾಡಿರುವುದಾಗಿ ತೋರಿಸಿದೆ. ಇದು ಜನರನ್ನು ನಂಬುವಂತೆ ಮಾಡಿದೆ.
38 ವರ್ಷದ ವಕೀಲರೊಬ್ಬರು ಈ ವರ್ಷದ ಜನವರಿ 25 ರಿಂದ ಏಪ್ರಿಲ್ 4 ರವರೆಗೆ 5,93,240 ರೂ.ಗಳನ್ನು ಠೇವಣಿ ಇಟ್ಟಿರುವುದಾಗಿ ಹೇಳಿಕೊಂಡಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಅದು ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಸೂಚಿಸಿತು. ನನಗೆ ಒಂದು ಫಾರ್ಮ್ ಅನ್ನು ಭರ್ತಿ ಮಾಡಲು ಕೇಳಲಾಯಿತು, ಅದನ್ನು ನಾನು ಮಾಡಿದೆ. ಬ್ಯಾಂಕ್ ಖಾತೆ ವಿವರಗಳು ಮತ್ತು IFSC ಕೋಡ್ ಸೇರಿದಂತೆ ಮಾಹಿತಿಯನ್ನು ಹಂಚಿಕೊಳ್ಳುವಂತೆ ಕೇಳಲಾಗಿತ್ತು ಎಂದರು.
ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡ ಬಳಿಕ 1,500 ರೂ.ಗಳ ಠೇವಣಿ ಪಾವತಿಸಲು ಕೇಳಲಾಯಿತು. ಇದಕ್ಕೆ ಪ್ರತಿಯಾಗಿ ಅವರ ಪ್ರೊಫೈಲ್‌ನಲ್ಲಿ 30 ರೂಪಾಯಿ ಪಡೆದರು. ನನಗೆ ಪ್ರತಿದಿನ 30 ರೂಪಾಯಿ ಹಣ ನೀಡಲಾಗುತ್ತಿತ್ತು, ಅದು 300 ರೂಪಾಯಿ ದಾಟಿದ ಬಳಿಕ ಅದನ್ನು ಡ್ರಾ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಹಣವನ್ನು ಸರಿಯಾಗಿ ಪಾವತಿ ಮಾಡಿದ್ದರಿಂದ ನಾನು ಅದನ್ನು ಹಿಂಪಡೆದೆ, ಬಳಿಕ ಅವರು ನನಗೆ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಕೇಳಿದರು. ಇದು 5,000 ರೂ.ಗಳಿಂದ ಪ್ರಾರಂಭವಾಗಿ 1,00,000 ರೂ.ಗಳಲ್ಲಿ ಕೊನೆಗೊಂಡಿತು. ಅಂತಿಮವಾಗಿ, ಹಣವನ್ನು ಹಿಂಪಡೆಯಲು ತೆರಿಗೆ ಪಾವತಿಸಲು ಅವರು ನನ್ನನ್ನು ಕೇಳಿದರು, ಆದರೆ ನಂತರ ಅವರು ಹಣವನ್ನು ವಾಪಸ್ ಕೊಡಲಿಲ್ಲ ಎಂದು ಹೇಳಿದ್ದಾರೆ.
24 ಗಂಟೆಗಳಲ್ಲಿ 1,00,000 ರೂ. ಹೂಡಿಕೆ ಮತ್ತು 1,00,000 ರೂ. ರಿಟರ್ನ್ಸ್ ನೀಡುವ ಆಮಿಷ ಕೂಡ ನೀಡಿದ್ದರು. ಪೊಲೀಸ್, ಸರ್ಕಾರಿ ಇಲಾಖೆಗಳ ನೌಕರರು ಮತ್ತು ಅನೇಕ ಉದ್ಯಮಿಗಳು ಕೂಡ ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications