ಮೋದಿ ಆಗಮನದ ಹೊತ್ತಲ್ಲೇ ಬಸವಳಿದ ಬಿಜೆಪಿಗೆ ಮತ್ತೆ 40% ಗುಮ್ಮ!
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರು ತಮ್ಮ ಸದಸ್ಯರೊಂದಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ/ದೂರು ಸಲ್ಲಿಸಿ ಬಂದಿದ್ದಾರೆ. ಆ ವೇಳೆ ಕೆಂಪಣ್ಣ ಅವರಿಗೆ ಬಿಬಿಎಂಪಿ ಗುತ್ತಿಗೆದಾರರು ಮತ್ತು ಕರ್ನಾಟಕ ವಸತಿ ಶಿಕ್ಷಣ ಗುತ್ತಿಗೆದಾರರ ಸಂಘದ ಸದಸ್ಯರೂ ಸಾಥ್ ನೀಡಿದ್ದರು.
ಆ ಮೂಲಕ, ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ದೂರು ನೀಡಿದರೆ ಏನೂ ಪ್ರಯೋಜನವಿಲ್ಲ ಎಂದು ಪರೋಕ್ಷವಾಗಿ ಗುತ್ತಿಗೆದಾರರ ಸಂಘ ಸಾರಿದಂತಿದೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎನ್ನಲಾಗುತ್ತಿರುವ ಪರ್ಸಂಟೇಜ್ ದಂಧೆಯ ಬಗ್ಗೆ ಪ್ರಧಾನಿ ಕಚೇರಿಗೆ ಸಂಘದ ಕಡೆಯಿಂದ ಪತ್ರವನ್ನು ಬರೆಯಲಾಗಿತ್ತು.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಸಿದ್ದರಾಮಯ್ಯನವರ ಸರಕಾರವನ್ನು ದಸ್ ಪರ್ಸೆಂಟ್ ಕಾ ಸರ್ಕಾರ್ ಎಂದು ಲೇವಡಿ ಮಾಡಿ ಹೋಗಿದ್ದ ಪ್ರಧಾನಿ ಮೋದಿ, ಈಗ ಗುತ್ತಿಗೆದಾರರ ಆರೋಪಕ್ಕೆ ಏನು ಹೇಳುತ್ತಾರೆ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ.
ಕೆಂಪಣ್ಣ ಅವರ ದೂರಿನ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಬಿಜೆಪಿ, ಗುತ್ತಿಗೆದಾರರ ಬಳಿ ಸಾಕ್ಷ್ಯಾಧಾರವಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಖುದ್ದು ಮುಖ್ಯಮಂತ್ರಿಗಳೇ ಸವಾಲು ಹಾಕಿದ್ದಾರೆ. ಅದಕ್ಕೆ ಬಿಜೆಪಿ ಸಚಿವರೂ ಧ್ವನಿಗೂಡಿಸಿದ್ದಾರೆ. ಗಮನಿಸಬೇಕಾದ ವಿಚಾರವೇನಂದರೆ ಕೆಂಪಣ್ಣ ಅವರ ನಿಯೋಗ ಯಾವುದೇ ದಾಖಲೆಯನ್ನು ಸಿದ್ದರಾಮಯ್ಯನವರಿಗೆ ನೀಡದೇ ಇರುವುದು.
|
ಕೆಂಪಣ್ಣ ನೀಡಿದ ದೂರಿಗೆ ಸ್ಪಂದಿಸಿರುವ ಸಿದ್ದರಾಮಯ್ಯ
ಕೆಂಪಣ್ಣ ನೀಡಿದ ದೂರಿಗೆ ಸ್ಪಂದಿಸಿರುವ ಸಿದ್ದರಾಮಯ್ಯನವರು ಅಸೆಂಬ್ಲಿಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. "ಈ ಸರಕಾರದಲ್ಲಿ ಒಬ್ಬರಾದರೂ ನಿಯತ್ತಿನ ಸಚಿವರಿದ್ದರೆ, ಅವರಿಗೆ ಆತ್ಮಸಾಕ್ಷಿ ಎನ್ನುವುದಿದ್ದರೆ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಲಿ. ಕೆಂಪಣ್ಣ ಅವರು ತೋಟಗಾರಿಕಾ ಸಚಿವ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಮುನಿರತ್ನ ಅವರ ಬಗ್ಗೆ ಆರೋಪವನ್ನು ಮಾಡಿದ್ದಾರೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೆಂಪಣ್ಣ ಸಿದ್ದರಾಮಯ್ಯನವರಿಗೆ ಯಾವುದೇ ದಾಖಲೆಯನ್ನು ನೀಡಲಿಲ್ಲ
ಕೆಂಪಣ್ಣ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಯಾವುದೇ ದಾಖಲೆಯನ್ನು ನೀಡಲಿಲ್ಲ. ಇದೇ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಸಚಿವರು ಕೆಂಪಣ್ಣ ಅವರ ವಿರುದ್ದ ತಿರುಗಿಬಿದ್ದಿದ್ದಾರೆ. ಕೆಂಪಣ್ಣ ಅವರು ಸಿದ್ದರಾಮಯ್ಯನವರ ಏಜೆಂಟ್ ಎಂದು ದೂರಿದ್ದಾರೆ. ಲೋಕಾಯುಕ್ತ ಎನ್ನುವುದು ಸ್ವತಂತ್ರ ಸಂಸ್ಥೆ, ಗುತ್ತಿಗೆದಾರರ ದೂರು ಏನಿದ್ದರೂ ಅಲ್ಲಿಗೆ ಹೋಗಿ ನೀಡಲಿ, ನಮ್ಮದೇನೂ ಅಭ್ಯಂತರವಿಲ್ಲ. ಹುರುಳಿಲ್ಲದೇ ಸುಮ್ಮನೆ ಆರೋಪವನ್ನು ಮಾಡಬಾರದು"ಎಂದು ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ಹೊರಹಾಕಿದ್ದಾರೆ.

ಇಲಾಖೆಯಿಂದ 22 ಸಾವಿರ ಕೋಟಿ ಬಿಲ್ ಬಾಕಿ ಉಳಿದಿದೆ
"ಜಲಸಂಪನ್ಮೂಲ, ಗ್ರಾಮೀಣಾಭಿವೃದ್ದಿ, ಲೋಕೋಪಯೋಗಿ , ನಗರಾಭಿವೃದ್ದಿ ಮತ್ತು ಬಿಬಿಎಂಪಿ ಇಲಾಖೆಯಿಂದ 22 ಸಾವಿರ ಕೋಟಿ ಬಿಲ್ ಬಾಕಿ ಉಳಿದಿದೆ. ಸಿಎಂ ಸೇರಿ ಎಲ್ಲರೂ ಭ್ರಷ್ಟರು. ನನ್ನ ಜೀವನದಲ್ಲಿ ಇಂತಹ ಭ್ರಷ್ಟ ಸರಕಾರವನ್ನು ನೋಡಲಿಲ್ಲ. ಕೋಲಾರದ ಉಸ್ತುವಾರಿ ಸಚಿವರು ನೇರವಾಗಿ ಅಧಿಕಾರಿಗಳಿಗೆ ಕಮಿಷನ್ ತೆಗೆದುಕೊಳ್ಳಿ ಎಂದು ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಆದೇಶಕ್ಕೆ ಕವಡೆಕಾಸಿನ ಬೆಲೆಯಿಲ್ಲ"ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದಾರೆ.

ಮುಂದಿನ ವಾರ ಒಂದು ದಿನದ ಭೇಟಿಗಾಗಿ ಪ್ರಧಾನಿ ಮೋದಿ ರಾಜ್ಯಕ್ಕೆ
ಮುಂದಿನ ವಾರ ಒಂದು ದಿನದ ಭೇಟಿಗಾಗಿ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೆಂಪಣ್ಣ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸರಕಾರ, ಮೇ ತಿಂಗಳಲ್ಲೇ ಹನ್ನೆರಡು ಅಂಶದ ಸುಧಾರಣಾ ಕ್ರಮ ಜಾರಿಗೆ ತರಲಾಗಿದೆ. ಆ ಮೂಲಕ, ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಬಿಲ್ ಅನ್ನು ಕ್ಲಿಯರ್ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿರಲು ಡಿಜಿಟಲ್ ತಂತ್ರಜ್ಞಾನ ಬಳಸಲು ಸೂಚಿಸಲಾಗಿದೆ. ಜೊತೆಗೆ, ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ನೇಮಿಸಲಾಗಿದೆ ಎಂದು ಸರಕಾರ ಸ್ಪಷ್ಟನೆಯನ್ನು ನೀಡಿದೆ. ಒಟ್ಟಿನಲ್ಲಿ, ರಾಜ್ಯ ಬಿಜೆಪಿ ಸರಕಾರಕ್ಕೆ ನಲವತ್ತು ಪರ್ಸೆಂಟ್ ಆರೋಪ ಟೆನ್ಸನ್ ತಂದು ಹಾಕಿದೆ.












Click it and Unblock the Notifications