ವಿದ್ಯುತ್ ದರದ ನಂತರ ಸಿದ್ದರಾಮಯ್ಯ ಸರ್ಕಾರ ಕುಡಿಯುವ ನೀರಿನ ದರವನ್ನೂ ಹೆಚ್ಚಿಸಿದೆ: ಬಿಜೆಪಿ ಆರೋಪ
ಬೆಂಗಳೂರು, ಜೂನ್ 15: ವಿದ್ಯುತ್ ದರ ಏರಿಕೆ ಆದ ಮೇಲೆ ಈಗ ಕುಡಿಯವ ನೀರಿನ ದರವನ್ನೂ ಸದ್ದಿಲ್ಲದೆ ಏರಿಸಿದೆ ಎಟಿಎಂ ಸರ್ಕಾರ. ಎದುರಿಗೆ ಉಚಿತ ಎಂದು ಆಕರ್ಷಿಸಿ ಅದರ ಹಿಂದೆಯೇ ಗುಂಡಿ ತೋಡಿಟ್ಟು ಸಿದ್ದರಾಮಯ್ಯ ಅವರು ಮಜಾ ನೋಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕೊಟ್ಟ ಮಾತುಗಳನ್ನು ಈಡೇರಿಸಲಾಗದೆ ಈಗ ಜನಸಾಮಾನ್ಯರ ಮೇಲೆ ಹೊಸ ಪ್ರಯೋಗಗಳನ್ನು ಮಾಡಿ ಅವರಿಗೆ ಬೆಲೆ ಏರಿಕೆಯ ತೊಂದರೆ ಕೊಡುವುದಷ್ಟೇ ಎಟಿಎಂ ಸರ್ಕಾರ ಏಕೈಕ ಗ್ಯಾರಂಟಿ ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್ ತನ್ನ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕರ್ನಾಟಕದ ಎಲ್ಲಾ ಮನೆಗಳಿಗೆ ಉಚಿತ ವಿದ್ಯುತ್ ಸೇರಿದಂತೆ ಐದು ಭರವಸೆಗಳನ್ನು ನೀಡಿತ್ತು. ರಾಜ್ಯ ಸರ್ಕಾರವು ಇತ್ತೀಚೆಗೆ ಉಚಿತ ವಿದ್ಯುತ್ ನೀಡಲು ಹೊಸ ಯೋಜನೆಯನ್ನು ಹೊರತಂದಿದೆ, ಆದರೆ 200 ಯೂನಿಟ್‌ಗಳಿಗಿಂತ ಹೆಚ್ಚು ಬಳಸುವ ಜನರಿಗೆ ವಿದ್ಯುತ್ ದರವನ್ನು 2.89 ರೂ.ಗಳಷ್ಟು ಹೆಚ್ಚಿಸಲಾಗಿದೆ.
ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದರ ಏರಿಕೆ ಮಾಡಲಾಗಿತ್ತು ಆದರೆ ಬಿಲ್ಲಿಂಗ್ ಸಮಸ್ಯೆಯಿಂದಾಗಿ ಅದನ್ನು ಜಾರಿಗೆ ತರಲಾಗಲಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ಸರಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ. ಹಣಕಾಸಿನ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಕೇಂದ್ರವು 10 ಕೆಜಿ ಕೊಡಬೇಕೆಂಬ ಬಗ್ಗೆ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿ ನೋಡಿದ್ದೇವೆ. ಅದನ್ನು ನೋಡಿದಾಗ ರಾಜ್ಯದ ಕಾಂಗ್ರೆಸ್ ಸರಕಾರ 10 ಕೆಜಿ ಅಕ್ಕಿ ವಿಚಾರದಲ್ಲಿ ಮೋಸ ಮಾಡುತ್ತಿರುವುದು ಸ್ಪಷ್ಟಗೊಂಡಿದೆ. ಮಾತು ತಪ್ಪಿದ ದೋಖಾ ಕಾರ್ಯಕ್ರಮ ಮುಂದುವರಿಸಿದ್ದಾರೆ. ಅದನ್ನು ಮುಚ್ಚಿ ಹಾಕಲು ರೈತರ, ಬಡವರ ಬಿಪಿಎಲ್ ಕಾರ್ಡ್‍ದಾರರ ಆಪಾದನೆಯಿಂದ ಪಾರಾಗಲು ಅಕ್ಕಿ ಸರಬರಾಜು ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಖಂಡಿಸಿದರು.
ಕೇಂದ್ರ ಸರಕಾರವು ಆಹಾರ ಭದ್ರತಾ ಕಾಯ್ದೆ ಪ್ರಕಾರ ಎಲ್ಲ ರಾಜ್ಯಗಳಿಗೆ 5 ಕೆಜಿ ಅಕ್ಕಿ ಕೊಡುತ್ತಿದೆ. ಡಿಸೆಂಬರ್‍ನಲ್ಲಿ ನಿರ್ವಹಣೆ- ಸಾರಿಗೆ ವೆಚ್ಚವನ್ನೂ ನೀಡಲಾರಂಭಿಸಿದೆ. ಮೊದಲು ಇವೆರಡನ್ನು (ಸುಮಾರು 3 ರೂ.) ರಾಜ್ಯವೇ ಭರಿಸಬೇಕಾಗಿತ್ತು. 10 ಕೆಜಿ ಪೈಕಿ 5 ಕೆಜಿ ಕೇಂದ್ರದ ನರೇಂದ್ರ ಮೋದಿ ಸರಕಾರವೇ ನೀಡುತ್ತಿದೆ. ಆದರೆ, ಇದನ್ನು ಮುಚ್ಚಿಟ್ಟು ತಾವೇ ಕೊಡುತ್ತಿರುವುದಾಗಿ ಬಿಂಬಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿತ್ತು ಎಂದು ಟೀಕಿಸಿದರು.

2 ವರ್ಷ ಕೇಂದ್ರ- ರಾಜ್ಯ ಸರಕಾರ ಸೇರಿ ಡಿಸೆಂಬರ್ ವರೆಗೆ 10 ಕೆಜಿ ಕೊಟ್ಟಿದ್ದೆವು ಎಂದ ಅವರು, ಕಾಂಗ್ರೆಸ್ ಸರಕಾರದ ಮೊದಲ ಸಂಪುಟ ಸಭೆಯಲ್ಲಿ ಈ ಸರಕಾರ ತಾತ್ವಿಕವಾಗಿ 5 ಗ್ಯಾರಂಟಿಗಳಿಗೆ ಮಂಜೂರಾತಿ ಕೊಡಲಾಗಿತ್ತು. ಸರಣಿ ಸಭೆಗಳನ್ನೂ ನಡೆಸಿದ್ದರು. ಟೆಂಡರ್ ಕರೆದು ಅಕ್ಕಿ ಪಡೆಯಬೇಕಿತ್ತಲ್ಲವೇ? ಕುಂಟು ನೆಪ ಹೇಳುವುದೇ ನಿಮ್ಮ ಕ್ರಮವಲ್ಲವೇ? ಎಂದು ಪ್ರಶ್ನಿಸಿದರು.
ಅಕ್ಕಿ ಕೋರಿಕೆ ವಿನಂತಿಸಲು ಕೇಂದ್ರದ ಸಚಿವರ ಬಳಿಗೆ ನಿಮ್ಮ ಸಚಿವರನ್ನು ಕಳಿಸಬೇಕಿತ್ತಲ್ಲವೇ? ಎಫ್‍ಸಿಐಗೆ ಪತ್ರ ಬರೆದೊಡನೆ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸಿಎಂ ಅವರು ರಾಜಕೀಯ ಮಾಡುತ್ತಿರುವುದು ಅವರ ಹುದ್ದೆಗೆ ತಕ್ಕುದಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರ ಪಡಿತರ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಮುಕ್ತ ಮಾರುಕಟ್ಟೆ, ಎಫ್‍ಸಿಐ ಸೇರಿ ಇತರ ಕಡೆಗಳಿಂದ ಅಕ್ಕಿ ಖರೀದಿಸಿ ವಿತರಿಸಿ. ಪ್ರತಿ ವ್ಯಕ್ತಿಗೆ 10 ಕೆಜಿ ಕೊಡಿ. ಇಲ್ಲವಾದರೆ ಹಣವನ್ನು ಡಿಬಿಟಿ ಮಾಡಿ ಎಂದು ಒತ್ತಾಯಿಸಿದರು. ಎಲ್ಲದರಲ್ಲೂ ಕಂಡಿಷನ್ ಗಮನಿಸಿದ ಜನತೆ, ಇದು ಗ್ಯಾರಂಟಿ ಅಲ್ಲ ದೋಖಾ ಸೀರೀಸ್ ಎನ್ನುತ್ತಾರೆ ಎಂದು ತಿಳಿಸಿದರು.
ವಿದ್ಯುತ್ ದರ ಏರಿಕೆಗೆ ನಾವು ಒಪ್ಪಿಕೊಂಡಿರಲಿಲ್ಲ. ಮೇ 12ರಂದು ಕೆಇಆರ್‍ಸಿ ನೋಟಿಫಿಕೇಶನ್ ಹೊರಡಿಸಿದೆ. ಅದು ನಮ್ಮ ಸರಕಾರದ ಕ್ರಮವಲ್ಲ ಎಂದು ತಿಳಿಸಿದರಲ್ಲದೆ, ಜೂನ್ 2ರಂದು ಆದೇಶ ಹೊರಡಿಸಲಾಗಿದೆ. ಆಗ ಯಾವ ಸರಕಾರ ಇತ್ತು ಎಂದು ಪ್ರಶ್ನಿಸಿದರು. ಏಪ್ರಿಲ್‍ನಿಂದ ಪೂರ್ವಾನ್ವಯವಾಗಿ ಇದು ಜಾರಿಯಾಗಿದೆ ಎಂದರು.
ರಾಜ್ಯ ಸರಕಾರ ಸುಳ್ಳು ಹೇಳುತ್ತಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಖಂಡಿಸಿದರು. ಜೂನ್ ತಿಂಗಳಿನಲ್ಲಿ 10 ಕೆಜಿ ಕೊಡದಿದ್ದರೆ ಜನರೊಂದಿಗೆ ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications