ಬೆಂಗಳೂರು ನಂತರ ಕರ್ನಾಟಕದ ಈ ಪ್ರದೇಶದ ಭೂಮಿಗೆ ಬಂಗಾರದ ಬೆಲೆ: 46 ಗ್ರಾಮಗಳ ಸೇರ್ಪಡೆ, ಆಸ್ತಿದಾರರಿಗೆ ಬಂಪರ್!
ಬೆಂಗಳೂರಿನಲ್ಲಿ ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಂಡಿವೆ. ಬೆಂಗಳೂರು ಅಭಿವೃದ್ಧಿ ಆಗುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿಯೊಂದಿಗೆ ವಿವಿಧ ಪ್ರದೇಶಗಳ ಅಭಿವೃದ್ಧಿಯೂ ನಡೆದಿದೆ.
ಇದೀಗ ಬೆಂಗಳೂರಿನೊಂದಿಗೆ ಮೈಸೂರು ಹಾಗೂ ಹುಬ್ಬಳ್ಳಿ - ಧಾರವಾಡ ಸೇರಿದಂತೆ ಕೆಲವೊಂದು ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್‌ಗೆ ಧಮಾಕ ಬಂದಿದೆ. ಇನ್ನು ಬೆಂಗಳೂರಿನಲ್ಲಿ ಐದು ನಗರ ಪಾಲಿಕೆಗಳ ರಚನೆ ಹಾಗೂ ಹೊಸ ಪಾಲಿಕೆಗಳಿಗೆ ಹೊಸ ಪ್ರದೇಶಗಳ ಸೇರ್ಪಡೆಯಿಂದ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಮೂಡಿರುವಾಗಲೇ ಬೆಂಗಳೂರಿನಂತೆಯೇ ಹುಬ್ಬಳ್ಳಿ ಮತ್ತು ಧಾರವಾಡದಲ್ಲೂ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಪ್ರಾರಂಭವಾಗಿದೆ.

ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯನ್ನು ಎರಡು ಪಾಲಿಕೆಗಳನ್ನಾಗಿ ವಿಭಜನೆ ಮಾಡಿ ರಾಜ್ಯ ಸರ್ಕಾರವು ಈಚೆಗೆ ಅನುಮೋದನೆ ನೀಡಿತ್ತು. ಇದೀಗ ಬೆಂಗಳೂರು ಅಭಿವೃದ್ಧಿಯ ಜೊತೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಗೂ (ಹುಬ್ಬಳ್ಳಿ - ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ) ಹೊಸ ಪ್ರದೇಶಗಳ ಸೇರ್ಪಡೆ ಆಗಲಿದೆ. ಇದೀಗ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಗೆ ಹೊಸದಾಗಿ ಹುಬ್ಬಳ್ಳಿ ತಾಲ್ಲೂಕಿನ 13 ಗ್ರಾಮಗಳು, ಕಲಘಟಗಿ ತಾಲ್ಲೂಕಿನ 06 ಗ್ರಾಮಗಳು ಹಾಗೂ ಧಾರವಾಡ ತಾಲ್ಲೂಕಿನ 27 ಗ್ರಾಮಗಳು ಸೇರಿದಂತೆ ಒಟ್ಟು 46 ಗ್ರಾಮಗಳನ್ನು ಸೇರಿಸಿ, ಹಾಲಿ ಸ್ಥಳೀಯ ಯೋಜನಾ ಪ್ರದೇಶವನ್ನು ವಿಸ್ತರಿಸಲಾಗಿದೆ ಎಂದು ರಾಜ್ಯ ಸರ್ಕಾರವು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 4(ಎ) ರಡಿಯಲ್ಲಿ ಪದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಹಾಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಒಳಗೊಂಡಂತೆ, ಹೆಚ್ಚುವರಿಯಾಗಿ ಹುಬ್ಬಳ್ಳಿ ತಾಲ್ಲೂಕಿನ 13 ಗ್ರಾಮಗಳು, ಕಲಘಟಗಿ ತಾಲ್ಲೂಕಿನ 06 ಗ್ರಾಮಗಳು ಹಾಗೂ ಧಾರವಾಡ ತಾಲ್ಲೂಕಿನ 27 ಗ್ರಾಮಗಳು, ಒಟ್ಟು 46 ಗ್ರಾಮಗಳನ್ನು ಸೇರಿಸಿ, ಹಾಲಿ ಸ್ಥಳೀಯ ಯೋಜನಾ ಪ್ರದೇಶವನ್ನು ವಿಸ್ತರಿಸಲಾಗಿದೆ. ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ವಿವರಗಳನ್ನು ಅನುಸೂಚಿ-ಎ ರಲ್ಲಿ ಹಾಗೂ ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶದ ಎಲ್ಲೆಯ ವಿವರಗಳನ್ನು ಅನುಸೂಚಿ-ಬಿ ರಲ್ಲಿ ನಮೂದಿಸಲಾಗಿದೆ ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಈ ಕೆಳಕಂಡ ಅಂಶಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ.
1. ವಿಸ್ತರಿಸಲಾದ ಸ್ಥಳೀಯ ಯೋಜನಾ ಪ್ರದೇಶವನ್ನು ವ್ಯವಸಾಯ ವಲಯವೆಂದು ಪರಿಗಣಿಸಿ ಅನುಮೋದಿತ ಮಹಾಯೋಜನೆಯ ವ್ಯವಸಾಯ ವಲಯಕ್ಕೆ ಅನ್ವಯವಾಗುವ ವಲಯ ನಿಯಮಾವಳಿಗಳ ಅವಕಾಶಗಳಂತೆ ಅಭಿವೃದ್ಧಿಗಳನ್ನು ಅನುಮತಿಸಬೇಕು.
2. ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶದಲ್ಲಿನ ಜಮೀನುಗಳಿಗೆ ಸಂಬಂಧಪಟ್ಟಂತೆ ಸರ್ಕಾರವು ಹೊರಡಿಸಿರುವ ಆದೇಶಗಳು ಹಾಗೂ ಸ್ಥಳೀಯ ಯೋಜನಾ ಪ್ರದೇಶ ವಿಸ್ತರಿಸಿ ಆದೇಶ ಹೊರಡಿಸಿದ ಪೂರ್ವದಲ್ಲಿ ಕಂದಾಯ ಇಲಾಖೆಯಿಂದ ಭೂ ಪರಿವರ್ತಿಸಲು ಹೊರಡಿಸಿದ ಚಾಲ್ತಿಯಲ್ಲಿರುವ ಆದೇಶಗಳನ್ನು ಮತ್ತು ಸಕ್ಷಮ ಪ್ರಾಧಿಕಾರದಿಂದ ಪಡೆದ ವಿನ್ಯಾಸ ಅನುಮೋದನೆ ಅನುಸಾರ ಕಟ್ಟಡ ಕಟ್ಟಲು ಪ್ರಾರಂಭಿಕ ಪ್ರಮಾಣ ಪತ್ರ ನೀಡಲು ಪರಿಗಣಿಸತಕ್ಕದ್ದು ಎಂದು ಹೇಳಲಾಗಿದೆ.
3. ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶಗಳ ವ್ಯಾಪ್ತಿಯ ಮಹಾಯೋಜನೆಗೆ ಸರ್ಕಾರದಿಂದ ಅಂತಿಮ ಅನುಮೋದನೆ ನೀಡುವವರೆಗೆ ವ್ಯವಸಾಯ ವಲಯದಲ್ಲಿರುವುದರಿಂದ ಭೂ ಪರಿವರ್ತನೆಗಳ ಪ್ರಸ್ತಾವನೆಗಳಿಗೆ ವಲಯ ನಿಯಮಾವಳಿಯಲ್ಲಿರುವ ಅವಕಾಶದಂತೆ ಕ್ರಮ ಜರುಗಿಸಬೇಕು.
4. ಭೂ ಪರಿವರ್ತನೆ ಹಾಗೂ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಗಳು ಪ್ರಾಧಿಕಾರವು ತಯಾರಿಸಬೇಕಾಗಿರುವ ಮಹಾಯೋಜನೆಗೆ ಪೂರಕವಾಗಿರುವ ಬಗ್ಗೆ ಮತ್ತು ಯೋಜನಾ ಬದ್ಧವಾಗಿರುವ ಬಗ್ಗೆ, ಪರಿಶೀಲಿಸಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು.
5. ಗ್ರಾಮಠಾಣಾ ಕ್ಷೇತ್ರಗಳಿಗೆ ಹೊಂದಿಕೊಂಡಂತಹ ಸ್ವಾಭಾವಿಕವಾಗಿ ಬೆಳವಣಿಗೆಗಳಾಗುವ ವ್ಯಾಪ್ತಿಯಲ್ಲಿ ಅಂದರೆ ಗ್ರಾಮ ಠಾಣಾ ಸುತ್ತಲಿನ 250.0ಮೀ ತ್ರಿಜ್ಯದಲ್ಲಿನ ಪ್ರದೇಶದಲ್ಲಿ ಚಾಲ್ತಿ ಮಹಾಯೋಜನೆಯ ಅನುಮೋದಿತ ವಲಯ ನಿಯಮಗಳಲ್ಲಿ ಅವಕಾಶಗಳಂತೆ ಅನುಮೋದನೆಗಳನ್ನು ನೀಡಬೇಕು.
6. ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶ ಘೋಷಿಸಿದ ದಿನಾಂಕದಿಂದ 02 ವರ್ಷದ ಒಳಗಾಗಿ ಮಹಾಯೋಜನೆಯನ್ನು ಸಿದ್ಧಪಡಿಸಿ ಸರ್ಕಾರದ ತಾತ್ಕಾಲಿಕ ಅನುಮೋದನೆಗೆ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ಉಲ್ಲೇಖ ಮಾಡಲಾಗಿದೆ.












Click it and Unblock the Notifications