Ranya Rao: ರನ್ಯಾ ರಾವ್ ಕೇಸ್‌ನ ಸಿಐಡಿ ತನಿಖೆ ಆದೇಶ ವಾಪಸ್, ಸರ್ಕಾರ ಯೂಟರ್ನ್ ಹೊಡೆದಿದ್ದೇಕೆ?
ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಈ ಕೇಸ್‌ನಲ್ಲಿ ರಾಜಕೀಯ ನಾಯಕ ಹೆಸರು ಕೇಳಿಬಂದಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಈ ಕೇಸ್ ಸಂಬಂಧ ಸಿಐಡಿಗೆ ವಹಿಸಿದ್ದ ತನಿಖೆ ಆದೇಶವನ್ನು ದಿಢೀರ್ ವಾಪಸ್ ಪಡೆದಿದೆ. ರಾಜಕಾರಣಿಗಳೊಂದಿಗೆ ರನ್ಯಾ ರಾವ್ ನಂಟು ಹೊಂದಿದ್ದಾರೆ ಎಂಬ ವಿಚಾರ ಕೂಡ ತನಿಖೆ ವೇಳೆ ಗೊತ್ತಾಗಿದ್ದು, ಇಬ್ಬರು ಪ್ರಭಾವಿ ಸಚಿವರಿಗೆ ರನ್ಯಾ ಆಪ್ರರು ಎನ್ನಲಾಗಿತ್ತು. ರಾಜ್ಯ ಸರ್ಕಾರವೇ ಇದರ ತನಿಖೆಯನ್ನು ಸಿಐಡಿಗೆ ವಹಿಸಿ ಈಗ ದಿಢೀರ್ ಆದೇಶ ವಾಪಸ್ ಪಡೆಯುವ ಮೂಲಕ ಅನುಮಾನ ಮೂಡಿಸಿದೆ.
ಏರ್‌ಪೋರ್ಟ್‌ನಲ್ಲಿ ಚಿನ್ನದೊಂದಿಗೆ ಸಿಕ್ಕಿಬಿದ್ದಿದ್ದ ನಟಿ ರನ್ಯಾ ರಾವ್ ಅವರಿಗೆ ಪೊಲೀಸರಿಂದಲೇ ಪ್ರೋಟೊಕಾಲ್ ಉಲ್ಲಂಘನೆಯಾದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಸಿಐಡಿ ತನಿಖೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿತ್ತು. ರನ್ಯಾ ರಾವ್ ವಿದೇಶಕ್ಕೆ ಹೋಗುವಾಗ ಮತ್ತು ವಾಪಸ್ ಬರುವಾಗ ಏರ್‌ಪೋರ್ಟ್‌ನಲ್ಲಿ ಶಿಷ್ಟಾಚಾರ ನಿಯಮಗಳಡಿ ಸೌಲಭ್ಯ ಒದಗಿಸುವ ಮೂಲಕ ಪೊಲೀಸ್ ಸಿಬ್ಬಂದಿ ಕರ್ತವ್ಯ ಲೋಪ ಎಸಗಿದ್ದು, ಇವರ ವಿರುದ್ಧವೂ ಸಿಐಡಿ ತನಿಖೆಗೆ ಆದೇಶಿಸಲಾಗಿತ್ತು.

ರನ್ಯಾ ರಾವ್ ಏರ್‌ಪೋರ್ಟ್‌ಗೆ ಬಂದಾಗ ಡಿಜಿಪಿ ಮಗಳು ಎಂದು ಅವರನ್ನು ಹೊರಗೆ ಕರೆತರಲು ಏರ್‌ಪೋರ್ಟ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾರಲ್ಲಿ ಕರ್ಕೊಂಡು ಹೋಗಲು ಬೆಂಗಾವಲು ಪಡೆಯ ಸಿಬ್ಬಂದಿ ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಏರ್‌ಪೋರ್ಟ್‌ನಲ್ಲಿ ರನ್ಯಾ ಶಿಷ್ಟಾಚಾರ ಸೌಲಭ್ಯದ ದುರ್ಬಳಕೆ ಮಾಡಿಕೊಂಡೇ ಇಷ್ಟೆಲ್ಲ ಮಾಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರಿಗೆ ವರದಿ ಕೂಡ ಸಲ್ಲಿಕೆಯಾಗಿತ್ತು. ಈ ಎಲ್ಲದರ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸಿಐಡಿಗೆ ಆದೇಶಿಸಿತ್ತು. ಆದರೆ ಇಂದು ಏಕಾಏಕಿ ಸಿಐಡಿ ಆದೇಶವನ್ನು ಸರ್ಕಾರ ವಾಪಸ್ ಪಡೆದುಕೊಂಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಕೇಸ್ ಸಂಬಂಧ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದರು. ಚಿತ್ರನಟಿ ರನ್ಯಾ ರಾವ್ ಅವರು ಶಿಷ್ಟಾಚಾರ ಸೌಲಭ್ಯದ ದುರ್ಬಳಕೆ ಮಾಡಿಕೊಂಡು ಚಿನ್ನದ ಅಕ್ರಮ ಸಾಗಾಣಿಕೆ ನಡೆಸಿರುವುದು ವರದಿಯಾಗಿದ್ದು, ಈ ಪ್ರಕರಣದಲ್ಲಿ ರನ್ಯಾ ರಾವ್ ಅವರ ತಂದೆ ಹಾಗೂ ಐಪಿಎಸ್ ಅಧಿಕಾರಿಯೂ ಆಗಿರುವ ರಾಮಚಂದ್ರ ರಾವ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಐಎಎಸ್ ಅಧಿಕಾರಿ ಗೌರವ್ ಗುಪ್ತ ಅವರನ್ನು ನೇಮಿಸಿ ಆದೇಶಿಸಲಾಗಿದೆ ಎಂದು ಹೇಳಿದ್ದರು. ಇದೀಗ ಸರ್ಕಾರವೇ ಸಿಐಡಿ ತನಿಖೆ ಆದೇಶವನ್ನು ವಾಪಸ್ ಪಡೆದಿರುವುದು ಅಚ್ಚರಿ ಮೂಡಿಸಿದೆ.
ಸಚಿವರ ಪಾತ್ರದಿಂದ ಹೆದರಿತಾ ಸರ್ಕಾರ?
ನಟಿ ರನ್ಯಾ ಅವರು ಕರ್ನಾಟಕ ರಾಜಕಾರಣಿಗಳ ಜೊತೆ ನಂಟು ಹೊಂದಿದ್ದು, ಇದೇ ಕಾರಣದಿಂದ ಅವರು ಅಕ್ರಮ ಚಿನ್ನ ಸಾಗಾಟ ದಂಧೆಯಲ್ಲಿ ತೊಡಗಿದ್ದರು ಎಂಬ ಆರೋಪವಿದೆ. ಅಲ್ಲದೆ ಇಬ್ಬರು ಸಚಿವರೊಂದಿಗೆ ನಟಿ ತೀರಾ ಒಡನಾಟ ಹೊಂದಿದ್ದರು ಎಂದೂ ಹೇಳಲಾಗುತ್ತಿದೆ. ಈ ಚಿನ್ನ ಕಳ್ಳಸಾಗಾಣಿಕೆ ಹಗರಣದಲ್ಲಿ ರಾಜ್ಯದ ಪ್ರಭಾವಿಗಳ ಕೈವಾಡವಿದ್ದು, ಒಂದು ವೇಳೆ ತನಿಖೆ ನಡೆದರೆ ಸರ್ಕಾರಕ್ಕೆ ಮುಜುಗರ ಎಂಬ ಕಾರಣದಿಂದಲೂ ತನಿಖೆ ಕೈಬಿಟ್ಟಿರಬಹುದು ಎಂದು ಹೇಳಲಾಗುತ್ತಿದೆ.

ಅಲ್ಲದೆ ಈಗಾಗಲೇ ಡಿಆರ್‌ಐ ಹಾಗೂ ಸಿಬಿಐ ಕೂಡ ಈ ಕೇಸ್ ತನಿಖೆ ನಡೆಸುತ್ತಿದ್ದು, ಒಂದು ವೇಳೆ ಇದು ರಾಜಕಾರಣಿಗಳ ಬುಡಕ್ಕೆ ಬಂದರೆ ಭಾರಿ ಸಂಕಷ್ಟ ಎದುರಾಗಲಿದೆ. ಕೇಂದ್ರದ ತನಿಖಾ ಸಂಸ್ಥೆಗಳು ಈ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ. ಈಗಾಗಲೇ ರಾಜ್ಯ ಸರ್ಕಾರದ ಸಿಬ್ಬಂದಿ ರನ್ಯಾ ಅವರಿಗೆ ಏರ್‌ಪೋರ್ಟ್‌ನಲ್ಲಿ ನೆರವಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಎಲ್ಲ ಆತಂಕದಿಂದಲೂ ಸರ್ಕಾರ ಏಕಾಏಕಿ ಸಿಐಡಿ ತನಿಖೆ ಹಿಂಪಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ ಒಂದೇ ಕೇಸ್‌ಗೆ ಎರಡು ತನಿಖೆಗಳು ಸೂಕ್ತ ಅಲ್ಲ ಎಂಬ ಕಾರಣಕ್ಕಾಗಿ ಸಿಐಡಿ ತನಿಖೆ ನಿಲ್ಲಿಸಿರುವುದಾಗಿ ವರದಿಯಾಗಿದೆ.












Click it and Unblock the Notifications