ಮಂಡ್ಯ ಅಖಾಡಕ್ಕೆ ಮೋಹಕ ತಾರೆ ರಮ್ಯ ಎಂಟ್ರಿ: ದಳಪತಿಗಳ ವಿರುದ್ಧ ಪ್ರಚಾರ ಯಾವಾಗ ಗೊತ್ತಾ?
ಬೆಂಗಳೂರು, ಏಪ್ರಿಲ್ 09: ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಕೀಯ ನಾಯಕರು ಅಬ್ಬರ ಪ್ರಚಾರ ಕಾರ್ಯವನ್ನ ನಡೆಸುತ್ತಿದ್ದಾರೆ. ಆಡಳಿತರೂಢ ಕಾಂಗ್ರೆಸ್ ಠಕ್ಕರ್ ಕೊಡುವ ನಿಟ್ಟಿನಲ್ಲಿ ಮೈತ್ರಿಯಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಚುನಾವಣಾ ತಂತ್ರಗಾರಿಕೆಯನ್ನ ನಡೆಸಿದ್ದು, ಇತ್ತ ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಪರ ನಟಿ ರಮ್ಯಾ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.
ಹೌದು, ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸ್ಟಾರ್ ಚಂದ್ರು ಅವರ ಪರವಾಗಿ ಪ್ರಚಾರ ನಡೆಸಲು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಬರುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಮುಂದಿನ ವಾರದಲ್ಲಿ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಅಲ್ಲದೇ ಮುಂದಿನ ವಾರ ಅಭ್ಯರ್ಥಿ ಜೊತೆ ರಮ್ಯಾ ರೋಡ್ ಶೋ ನಡೆಸುವ ಸಾಧ್ಯತೆ ಇದೆ.

ಮಂಡ್ಯ ಲೋಕಸಭಾ ಕ್ಷೇತ್ರವನ್ನ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಕುಮಾರಸ್ವಾಮಿಗೆ ಸೋಲಿನ ರುಚಿ ತೋರಿಸಲು ಕಾಂಗ್ರೆಸ್ ನಾಯಕರು ಪ್ಲಾನ್ ನಡೆಸಿದ್ದು, ಅದರಂತೆ ಏಪ್ರಿಲ್ 17 ಅಥವಾ 20 ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕೂಡ ಮಂಡ್ಯದಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳು ಇತರೆ ಲೋಕಸಭಾ ಕ್ಷೇತ್ರಗಳಿಗೆ ಮಾದರಿಯಾಗಬೇಕು. ರಾಜಕೀಯವಾಗಿ ಮಾತ್ರವಲ್ಲ ಅಭಿವೃದ್ಧಿ ವಿಚಾರದಲ್ಲಿ ಕೂಡ ಮಂಡ್ಯ ಹೆಸರು ಇಂಡಿಯಾದ್ಯಂತ ಕೇಳಬೇಕು. ಮಂಡ್ಯವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ಎಂದು ಹೇಳಿದರು.
ಮಂಡ್ಯ ಜಿಲ್ಲೆ ಪ್ರಾಕೃತಿಕವಾಗಿ, ರಾಜಕೀಯವಾಗಿ ಸಾಕಷ್ಟು ಹೆಸರುವಾಸಿ. ಜಿಲ್ಲೆಯಲ್ಲಿ ಕೃಷಿಯೇ ಜೀವಾಳ. ಈ ಭಾಗದ ರೈತರ ಕಲ್ಯಾಣಕ್ಕೆ ಕಂಕಣಬದ್ಧನಾಗಿದ್ದೇನೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿತಾಣಗಳಿದ್ದು ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿಕೊಡಬೇಕೆಂಬ ಕನಸು ಹೊಂದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಬಡವರ ದೀನದಲಿತರ ಪರ. ಎಲ್ಲಾ ವರ್ಗದವರನ್ನು ಒಟ್ಟಿಗೆ ಕೊಂಡೊಯ್ಯುವ ಪಕ್ಷ. ಉದ್ಯೋಗ ಸೃಷ್ಟಿ, ಸಾಮಾಜಿಕ ನ್ಯಾಯ, ಆರೋಗ್ಯ ಸೇವೆ ಸೇರಿದಂತೆ ರಾಷ್ಟ್ರದ ಜನತೆಯ ಕಲ್ಯಾಣ ಬಯಸಿ 25 ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ. ಮತದಾರರು ಪ್ರಜ್ಞಾವಂತರಿದ್ದಾರೆ. ಕಾಂಗ್ರೆಸ್ ನ ಜನಪರ ಕಾರ್ಯಕ್ರಮಗಳಿಗೆ ಮನ್ನಣೆ ನೀಡಲಿದ್ದು ನನ್ನನ್ನು ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications