Prakash Raj: ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದ ನಟ ಪ್ರಕಾಶ್ ರಾಜ್!
Prakash Raj: ನಟ ಪ್ರಕಾಶ್‌ರಾಜ್ ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗೆ ಇಳಿದಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯೂ ಪ್ರಕಾಶ್ ರಾಜ್ ಅವರು ರಾಜ್ಯ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿಯನ್ನು ಮಾಡಿದ್ದರು. ಇದೀಗ ನೇರವಾಗಿಯೇ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆಯೂ ನಟ ಪ್ರಕಾಶ್ ರಾಜ್ ಅವರು ಮಾತನಾಡಿದ್ದಾರೆ.
ನಟ ಪ್ರಕಾಶ್‌ರಾಜ್ ಅವರು ದೇಶದ ವಿವಿಧ ಪ್ರಮುಖ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಇದೆ. ಅಲ್ಲದೇ ಸಾಮಾಜಿಕ ನ್ಯಾಯ ಹಾಗೂ ರೈತಪರ ಹೋರಾಟಗಳಲ್ಲಿ ಭಾಗಿಯಾಗಿರುವುದು ಸಹ ಇದೆ. ಇಷ್ಟು ದಿನ ಅವರು ಬಿಜೆಪಿಯ ವಿಚಾರಗಳಲ್ಲಿ ಮಾತ್ರ ಕಠಿಣವಾಗಿ ಟೀಕಿಸುತ್ತಾರೆ ಅಥವಾ ಮೃಧು ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಆದರೆ, ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಕಾಶ್ ರಾಜ್ ಅವರು ಹೋರಾಟಕ್ಕೆ ಮುಂದಾಗಿದ್ದಾರೆ. ದೇವನಹಳ್ಳಿಯಲ್ಲಿ ರೈತರ ಭೂಸ್ವಾಧೀನ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆದಿದೆ. ದೇವನಹಳ್ಳಿ ಚಲೋ ಪ್ರತಿಭಟನಾ ಸಭೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಭಾಗವಹಿಸಿದ್ದು. ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ರೈತರ ಭೂಮಿಯಲ್ಲಿ ಕಾರ್ಖಾನೆಗಳನ್ನು ನಿರ್ಮಾಣ ಮಾಡುವುದನ್ನು ಬಲವಾಗಿ ಖಂಡಿಸಿದ್ದಾರೆ.

ಏನಿದು ಅನ್ಯಾಯ, ಯಾಕಿ ದೌರ್ಜನ್ಯ ಈ ಸರ್ಕಾರ ಯಾಕೆ ಈ ರೀತಿ ಆಗಿದೆ. ದೇವನಹಳ್ಳಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ರೈತರನ್ನು ಹಾಗೂ ಅವರ ಪರವಾಗಿ ನಿಂತ ಸಾಮಾಜಿಕ ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ್ದೀರಿ. 80 ವರ್ಷದ ವೃದ್ಧೆ ಹಳ್ಳಿಯಿಂದ ತಮ್ಮ ಮಣ್ಣಿಗಾಗಿ ಬಂದಿದ್ದಾರೆ. ಯಾಕೆ ಅವರನ್ನು ಬಂಧಿಸಿದ್ದೀರಿ ಅವರು ದುಡ್ಡಿನ ಆಸೆಗೆ ಅಲ್ಲಿ ಬಂದು ಹೋರಾಟ ಮಾಡುತ್ತಿಲ್ಲ. ಇನ್ನೊಬ್ಬರ ಸ್ಥಳ ಅಥವಾ ಆಸ್ತಿಯನ್ನೊ ಕಬ್ಜ ಮಾಡುವುದಕ್ಕೋ ಅಲ್ಲಿ ಬಂದಿಲ್ಲ ಎಂದು ನಟ ಪ್ರಕಾಶ್ ರಾಜ್ ಅವರು ತಿರುಗಿ ಬಿದ್ದಿದ್ದಾರೆ. ತಮ್ಮ ಮಣ್ಣು, ಬದುಕು ಮತ್ತು ಭೂಮಿಯನ್ನು ನಮಗೆ ಬಿಟ್ಟುಕೊಡಿ ಕಿತ್ತುಕೊಳ್ಳಬೇಡಿ ಎಂದು ಅವರ ಹಕ್ಕನ್ನು ಕೇಳುವುದಕ್ಕೆ ಬಂದಿದ್ದಾರೆ.
ಈ ರೀತಿ ಬಂದವರನ್ನು ನೀವು ಅರೆಸ್ಟ್‌ಮಾಡುತ್ತೀರಾ. ನಾನು ಅರ್ಧಗಂಟೆ ಅಲ್ಲಿರಲಿಲ್ಲ. ಇನ್ನ್ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದೆ. ನಾನೂ ಅದರಲ್ಲಿ ಭಾಗಿಯಾಗಿದ್ದೆ. ನನ್ನನ್ನೂ ಅರೆಸ್ಟ್ ಮಾಡಿ. ನನ್ನನ್ನೂ ಬಂಧಿಸಿ, ಇದು ಸರಿ ಇರಲ್ಲ. ಈ ರೀತಿ ಅಲ್ಲ ನೀವು ಜನರಿಗೆ ಸ್ಪಂದಿಸಬೇಕಿರುವುದು. ಈ ರೀತಿಯಲ್ಲ ನಿಮ್ಮ ಅರಾಜಕತೆಯನ್ನು ಪ್ರದರ್ಶಿಸಬೇಕಿರುವುದು. ಇದರಿಂದ ಹೋರಾಟ ನಿಲ್ಲಲಿದೆ ಎಂದು ಅಂದಕೊಳ್ಳಬೇಡಿ. ಕರ್ನಾಟಕದ ಪ್ರತಿಯೊಬ್ಬರಿಗೂ ಹಾಗೂ ರೈತರಿಗೂ ಹೇಳುತ್ತಿದ್ದೇನೆ. ಇಂದು ದೇವನಹಳ್ಳಿಯ ಮಕ್ಕಳು ನಾಳೆ ನಾವು. ಹಕ್ಕುಗಳಿಗಾಗಿ ಹೋರಾಡಿದರೆ ಇದೇ ಆಗುತ್ತದೆ. ನಾವೆಲ್ಲರೂ ದೇವನಹಳ್ಳಿಯ ರೈತರ ಪರವಾಗಿ ನಿಲ್ಲಬೇಕಿದೆ. ಈ ಹೋರಾಟ ದೊಡ್ಡದಾಗಲಿದೆ. ನಾವು ಖಂಡಿತವಾಗಿಯೂ ಗೆಲ್ಲಲಿದ್ದೇವೆ ಎಂದು ನಟ ಪ್ರಕಾಶ್ ರಾಜ್ ಅವರು ಹೇಳಿದ್ದಾರೆ.
ರೈತರು ಮೂರು ವರ್ಷ ಬಾಯಿ ಬಡ್ಕೊಳ್ಬೇಕಾ: ನಾವು ಮಾತನಾಡುತ್ತಿರುವುದು ಇಂದಿನ ಕಾಂಗ್ರೆಸ್ ಸರ್ಕಾರಕ್ಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಂಬಿ ಪಾಟೀಲ್ ಅವರೇ ಏನು ಮಾಡುತ್ತಿದ್ದೀರಿ. ಒಬ್ಬ ಮನುಷ್ಯರಿಗೆ ಒಂದು ಸಲ ಹೇಳಬಹುದು. ಎರಡು ಸಲ ಹೇಳಬಹುದು. ಮೂರು ವರ್ಷ ಬಾಯಿ ಬಡೆದುಕೊಳ್ಳಬೇಕೇನ್ರಿ. ನಿಮಗೆ ಅರ್ಥ ಆಗಬೇಕು. ನೀವು ಗೆದ್ದಿಲ್ಲ. ಭಾರತದ ರಾಜಕಾರಣದಲ್ಲಿ ಪಕ್ಷಗಳು, ವ್ಯಕ್ತಿಗಳು ಗೆಲ್ಲುವುದಿಲ್ಲ. ಜನ ಅವರನ್ನು ಗೆಲ್ಲಿಸುತ್ತಾರೆ. ನೀವು ಆಳ್ವಿಕೆ ಮಾಡುವುದಕ್ಕೆ ಇಲ್ಲಿ ಬಂದಿಲ್ಲ. ಪ್ರತಿನಿಧಿಸುವುದಕ್ಕೆ ಬಂದಿದ್ದೀರಿ ಅಷ್ಟೇ ಎಂದಿದ್ದಾರೆ.
ದೇವನ ಹಳ್ಳಿಯ ರೈತರನ್ನು.. ಅವರ ಪರವಾಗಿ ಹೋರಾಟಕ್ಕೆ ನಿಂತ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ ಈ ಸರ್ಕಾರಕ್ಕೆ ದಿಕ್ಕಾರ . ಈ ರೈತ ವಿರೋಧಿ ಸರ್ಕಾರದ ದೌರ್ಜನ್ಯವನ್ನು ನಾವೆಲ್ಲರು ಒಂದಾಗಿ ಖಂಡಿಸಲೇ ಬೇಕಾಗಿದೆ .. #justasking pic.twitter.com/0WbQrdJo2K
— Prakash Raj (@prakashraaj) June 25, 2025
ನಿಮಗೆ ಧಿಕ್ಕಾರ ಕೂಗುವ ಕಾಲ ದೂರವಿಲ್ಲ ಎಂದು ವಾರ್ನಿಂಗ್ ಮಾಡುತ್ತಿದ್ದೇವೆ. ಬೇಕಾ ಸಿದ್ರಾಮಣ್ಣ ನಿಮಗೆ. ಕರ್ನಾಟಕದ ರೈತರ ಬಾಯಿಯಿಂದ ಧಿಕ್ಕಾರ ಕೂಗಿಸಿಕೊಳ್ಳುವ ಪರಿಸ್ಥಿತಿಗೆ ನೀವು ಬರಬೇಕೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಮುಂದುವರಿದು ಕಿವಿಯಿಲ್ವಾ, ಹೃದಯ ಇಲ್ವಾ & ಮನ:ಸಾಕ್ಷಿ ಇಲ್ವಾ ಎಂದು ಅವರು ಪ್ರಶ್ನಿಸಿದ್ದಾರೆ.












Click it and Unblock the Notifications