Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್
Kishore Kumar Huli: ಒಟ್ಟಿಗೆ ಒಂದು ರಾಷ್ಟ್ರದಂತೆ ?, ನಮ್ಮನ್ನು ದ್ವೇಷದ ವಿಷಕಾರಿ, ಹಿಂದೂ - ಮುಸ್ಲಿಂ - ಕ್ರಿಶ್ಚಿಯನ್ನರೆಂದು ಇನ್ನೆಂದೂ ಒಂದಾಗಲು ಸಾಧ್ಯವೇ ಇಲ್ಲದಂತೆ ಒಡೆದ ನಂತರ ನಿಮಗೆ ನಾಚಿಕೆಯೆಂಬುದೇನಾದರೂ ಇದೆಯೇ ಎಂದು ನಟ ಕಿಶೋರ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಬಳಸಿ ಬರೆದಿರುವ ಬರಹವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಒಟ್ಟಿಗೆ ಒಂದು ರಾಷ್ಟ್ರದಂತೆ ಈ ಯುದ್ಧ ಅನಿಶ್ಚಿತ ಪರಿಸ್ಥಿತಿಯನ್ನು ನಾವು ಎದುರಿಸಬೇಕಾಗಿದೆ. ಕೋವಿಡ್ ಸಂದರ್ಭದಲ್ಲಿ ಒಂದಾದಂತೆ / ಕೋವಿಡ್‌ನಂತಹ ಸಂಕಷ್ಟದ ಸಮಯದಂತೆಯೇ ಈಗಲೂ ಮಧ್ಯಪ್ರಾಚ್ಯದ ಸಂಕಷ್ಟದ ಈ ಸವಾಲನ್ನು ಸಹ ಎದುರಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಹೇಳಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಬರಹವೊಂದನ್ನು ಹಂಚಿಕೊಂಡಿರುವ ನಟ ಕಿಶೋರ್ ಕುಮಾರ್ ಅವರು, ನಮ್ಮನ್ನು ದ್ವೇಷದ ವಿಷಕಾರಿ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರೆಂದು ಇನ್ನೆಂದೂ ಒಂದಾಗಲು ಸಾಧ್ಯವೇ ಇಲ್ಲದಂತೆ ಒಡೆದ ನಂತರ, ನಿಮಗೆ ನಾಚಿಕೆಯೆಂಬುದೇನಾದರೂ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದುವರಿದು ಇಲ್ಲ! ನಾವು ಭಾರತದ ಜನ ತಯಾರಿಲ್ಲ. ನಿಮ್ಮ ರಾಜಿ, ಶರಣಾಗತಿಯಿಂದಾಗಿ ನಾವು ಇನ್ನೂ ಎಷ್ಟು ಸವಾಲುಗಳನ್ನು ಎದುರಿಸಬೇಕು. ನಿಮ್ಮ ತಪ್ಪುಗಳು, ರಹಸ್ಯಗಳನ್ನು ಮುಚ್ಚಿಡಲು ನಾವಿನ್ನೆಷ್ಟು ಬೆಲೆ ತೆರಬೇಕು. ಸಾಮೂಹಿಕ ಕೊಲೆಗಾರರು ಮತ್ತು ಶಿಶುಕಾಮಿಗಳನ್ನು ಅಪ್ಪಿಕೊಂಡು "ನಾವು ಯುದ್ಧ ಅಪರಾಧಿಗಳ ಜೊತೆ ನಿಲ್ಲುತ್ತೇವೆ" ಎಂದು ಘೋಷಿಸುವ ಮೊದಲು ನೀವು ನಮ್ಮನ್ನು ಕೇಳಿದ್ದಿರಾ. ರಫೇಲ್‌ನಿಂದ ಎಪ್ಸ್ಟೀನ್‌ವರೆಗೆ, ನೋಟು ರದ್ದತಿಯಿಂದ ಕೊರೊನಾ ಲಾಕ್‌ಡೌನ್‌ವರೆಗೆ, ಕೃಷಿ ಕಾನೂನುಗಳಿಂದ ಅಗ್ನಿವೀರ್‌ವರೆಗೆ, ಮಣಿಪುರದಿಂದ ಕಾಶ್ಮೀರ, ಲಡಾಖ್ ನವರೆಗೆ ನಿಮ್ಮ ಯಾವುದೇ ಉನ್ಮಾದ ಭರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನಮ್ಮನ್ನೋ ಅಥವಾ ವಿರೋಧ ಪಕ್ಷದ ನಮ್ಮ ಪ್ರತಿನಿಧಿಗಳನ್ನೋ ಅಥವಾ ನಮ್ಮ ತೆರಿಗೆಯಿಂದ ನಾವು ಸಂಬಳ ಕೊಟ್ಟಿಟ್ಟಿರುವ ನಿಮ್ಮ ಸ್ವಂತ ಅಧಿಕಾರಿಗಳನ್ನೋ ಕೇಳಿದ್ದಿರಾ ಎಂದು ನಟ ಕಿಶೋರ್ ಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ.
ನಿಮ್ಮ ರಾಜಿ, ಸರೆಂಡರ್ ಮತ್ತು ಮೂರ್ಖತನದ ಪರಿಣಾಮವಾಗಿ ಬಂದ ಸವಾಲುಗಳನ್ನು ಎದುರಿಸಲು ಈಗ ನಮ್ಮನ್ನು ಕೇಳಲು ನಿಮಗೆ ಯಾವ ಹಕ್ಕಿದೆ. ಇನ್ನು ಸಾಕು.. ಕೊರೊನಾ ಸಮಯದಲ್ಲಿ ಮಾಡಿದ ರೀತಿ ಕುರಿಗಳ ಹಿಂಡಿನಂತೆ ಸಾಯಲು ನಾವು ಸಿದ್ಧರಿಲ್ಲ. ಸತ್ತ 50 ಲಕ್ಷ ಜನರನ್ನು ನಿಮ್ಮ ಕಡತಗಳಲ್ಲಿ ಸತ್ತವರೆಂದು ಪರಿಗಣಿಸಲೂ ಯೋಗ್ಯರಲ್ಲದಂತೆ ಮಾಡಿದಿರಲ್ಲ. ದೇಶದ ಅತ್ಯುನ್ನತ ಸ್ಥಾನವನ್ನು ನಗೆಪಾಟಲಾಗಿಸಿದ, ಸರ್ವಾಧಿಕಾರದ ಮತ್ತಿನ ನಿಮ್ಮ ನಾನ್ಬಯಲಾಜಿಕಲ್ ಹುಚ್ಚುತನಕ್ಕೆ ಪದವಿ ಬಿಟ್ಟು ಹೊರಡುವ ಸಮಯ ಬಂದಿದೆ ಎಂದೂ ನಟ ಕಿಶೋರ್ ಅವರ ತಮ್ಮ ಬರಹದಲ್ಲಿ ಉಲ್ಲೇಖ ಮಾಡಿದ್ದಾರೆ.
Kishore Kumar Huli ನೆಟ್ಟಿಗರು ಹೇಳಿದ್ದೇನು
ನಟ ಕಿಶೋರ್ ಕುಮಾರ್ ಅವರ ಈ ಬರಹಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಜಾಪ್ರಭುತ್ವದಲ್ಲಿ ಇದೆಲ್ಲಾವೂ ಬಾಲಿಶ ಪ್ರಶ್ನೆ. ಇದು ಶಕ್ತಿ ಕಳಕೊಂಡು ಹಲವು ದಶಕಗಳೆ ಕಳಿದಿವೆ. ರಾಜಕೀಯ ಆಡಳಿತ ತಂತ್ರಗಾರಿಕೆ, ರಾಜಕೀಯ ನಡೆ ಎಲ್ಲವು ಬದಲಾಗಿದೆ. ಚುನಾವಣೆಯಲ್ಲಿ ನಿಂತು ಒಂದು ಪಾರ್ಟಿಯ ಮೇಲೆ ನಿಂತು ದ್ವನಿ ಆಗಬೇಕು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಶ್ಯಾಮ್ ಭೀಮಗುಳಿ ಎನ್ನುವವರು, ನೀವೇ ಇಲ್ಲಿ ಇಷ್ಟೊಂದು ಜನ ಕೇಳಿದರೂ ಏನೂ ಹೇಳುವುದಿಲ್ಲ. ಅಂಥದ್ದರಲ್ಲಿ ಪ್ರಧಾನಿಯವರನ್ನು "ನಮ್ಮ ಹತ್ರೆ ಕೇಳಿದ್ರಾ" ಅಂತ ಹೇಳಿದರೆ ಅವರಾದರೂ ಯಾಕೆ ಕೇಳ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಹೌದು ಇದೇ ಪ್ರಶ್ನೆ ಕಾಂಗ್ರೆಸ್ ಸರ್ಕಾರವಿದ್ದಾಗ ಕೇಳಿದ್ದೀರಾ. ಕಾಂಗ್ರೆಸ್ ಇದ್ದಾಗ ಜಾತಿ ಧರ್ಮ ಎಲ್ಲ ಒಟ್ಟುಗೂಡಿಸಿ ನಾವೆಲ್ಲ ಒಂದು ಎನ್ನುವ ವೇದಘೋಷ ಏನಾದ್ರೂ ಮಾಡಿದ್ದು ಉದಾಹರಣೆ ಇದ್ಯಾ, ಗರೀಬಿ ಹಠಾವೋ ಹೆಸರಲ್ಲಿ ಬಡತನ ಏನಾದ್ರೂ ದೂರ ಮಾಡಿದ್ದು ಇದ್ಯಾ, ದೇಶದ ಮೇಲೆ ದಾಳಿ ಇರಲಿಲ್ಲವೇ ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications