ಬೆಂಗಳೂರು-ಮೈಸೂರು ರಸ್ತೆ ಅಪಘಾತ; ಪರಿಶೀಲನೆಗೆ ತಜ್ಞರ ಸಮಿತಿ ರಚನೆ
ಬೆಂಗಳೂರು, ಜುಲೈ 17; ಬೆಂಗಳೂರು-ಮೈಸೂರು ಸಂಪರ್ಕಿಸುವ ಎಕ್ಸ್‌ಪ್ರೆಸ್ ವೇ ರಸ್ತೆ ಅಪಘಾತಗಳಿಂದಲೇ ಸುದ್ದಿಯಾಗಿದೆ. ಹೆದ್ದಾರಿಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗ ಸಮಿತಿ ರಚನೆ ಮಾಡಲಾಗಿದೆ.
ಸೋಮವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ಕುರಿತು ಪರಿಶೀಲನೆ ನಡೆಸಲು ಮೂವರು ತಜ್ಞರನ್ನೊಳಗೊಂಡ ಸಮಿತಿ ರಚನೆ ಮಾಡಿದೆ.

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸುರಕ್ಷತೆ ಕುರಿತು 10 ದಿನದಲ್ಲಿ ವರದಿ ನೀಡುವಂತೆ ಸಮಿತಿಗೆ ಸೂಚನೆ ನೀಡಲಾಗಿದೆ. ಹೆದ್ದಾರಿಯಲ್ಲಿನ ಸುರಕ್ಷತೆ, ಅಪಘಾತಕ್ಕೆ ಕಾರಣಗಳು ಮುಂತಾದ ಅಂಶಗಳನ್ನು ಈ ಸಮಿತಿ ಪರಿಶೀಲನೆ ನಡೆಸಲಿದೆ.
ಈ ಸಮಿತಿಯಲ್ಲಿ ರಸ್ತೆ ಸುರಕ್ಷತೆ ಸಲಹೆಗಾರ ಕೆ. ಪೊಪ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಪ ವ್ಯವಸ್ಥಾಪಕ ಹಾಗೂ ರಸ್ತೆ ಸುರಕ್ಷತಾ ಅಧಿಕಾರಿ ಪ್ರವೀಣ್ ಕುಮಾರ್, ಸೊಹ್ನಾ-ದೌಸಾ ಎಕ್ಸ್‌ಪ್ರೆಸ್ ಯೋಜನೆ ಜಾರಿ ಘಟಕದ ವ್ಯವಸ್ಥಾಪಕ ಜೈವರ್ಧನ್ ಸಿಂಗ್ ಸಮಿತಿಯಲ್ಲಿದ್ದಾರೆ.
ಈ ಸಮಿತಿಯು ಜುಲೈ 20ರ ತನಕ ಎಕ್ಸ್‌ಪ್ರೆಸ್‌ವೇಗೆ ಭೇಟಿ ನೀಡಿ ಸುರಕ್ಷತೆ ಕುರಿತು ಪರಿಶೀಲನೆ ನಡೆಸಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ಸುರಕ್ಷತಾ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ (ಸಿಜಿಎಂ) ಸುನೀಲ್ ಜಿಂದಾಲ್ ಸೂಚನೆ ನೀಡಿದ್ದಾರೆ.
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇದುವರೆಗೂ 550ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. 158 ಜನರು ಮೃತಪಟ್ಟಿದ್ದಾರೆ. ಬಳಿಕ ರಸ್ತೆಯ ಸುರಕ್ಷತೆ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿದ್ದವು. ಈಗ ರಸ್ತೆ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ರಚನೆ ಮಾಡಲಾಗಿದೆ.
ಗೃಹ ಸಚಿವರ ಹೇಳಿಕೆ; ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಪಘಾತಗಳ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಮಾತನಾಡಿದ್ದರು. "ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಮತ್ತು ವಾಹನಗಳ ವೇಗದ ಚಾಲನೆಗೆ ಕಡಿವಾಣ ಹಾಕಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಹೇಳಿದ್ದರು.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಎಸ್. ಸುರೇಶ್ ಕುಮಾರ್ ಪ್ರಶ್ನೆಗೆ ಉತ್ತರ ನೀಡಿದ್ದ ಸಚಿವರು, "ಹೆದ್ದಾರಿಯಲ್ಲಿ ಗಸ್ತುವಾಹನ ನಿಯೋಜನೆ ಮಾಡಲಾಗಿದೆ. ಯಾವುದೇ ವಾಹನ ಮಾರ್ಗ ಮಧ್ಯೆ ನಿಲ್ಲದಂತೆ ಗಸ್ತುವಾಹನದ ಮೂಲಕ ತೆರವುಗೊಳಿಸಲಾಗುತ್ತಿದೆ" ಎಂದು ತಿಳಿಸಿದ್ದರು.
"ಹೆದ್ದಾರಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಲಾಗಿದೆ. ವಾಹನಗಳು ಮಾರ್ಗ ಶಿಸ್ತನ್ನು ಅನುಸರಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಪಾದಚಾರಿಗಳು ಅಡ್ಡಬಾರದಂತೆ ತಂತಿಬೇಲಿಗಳನ್ನು ನಿರ್ಮಾಣ ಮಾಡಲಾಗಿದೆ. ತಂತಿಬೇಲಿ ಕಿತ್ತುಹೋದ ಕಡೆ ಅದನ್ನು ಸರಿಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ" ಎಂದು ಸಚಿವರು ವಿವರಣೆ ನೀಡಿದ್ದರು.
ರಾಮನಗರ ಮತ್ತು ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪೊಲೀಸರು ರಸ್ತೆ ಅಪಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದರು. ಅಪಘಾತ ನಡೆಯುವ ಸ್ಥಳ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದರು.
ಸಂಚಾರ ಮತ್ತು ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಕೆಲವು ದಿನಗಳ ಹಿಂದೆ ರಾಮನಗರ ಮತ್ತು ಮಂಡ್ಯದಲ್ಲಿ ಹೆದ್ದಾರಿಯನ್ನು ಪರಿಶೀಲನೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚೆಯನ್ನು ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ಕೊಟ್ಟಿದ್ದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳನ್ನುತಡೆಗಟ್ಟಲು ಮಂಡ್ಯ ಜಿಲ್ಲೆಯ ಕೋಡಿಶೆಟ್ಟಿಪುರದ ಗ್ರಾಮದ ಬಳಿ ಸ್ಪೀಡರ್ ಗನ್ ಬಳಿಸಿ ವೇಗಮಿತಿಯನ್ನು ಉಲ್ಲಂಘನೆ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ದ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಕೇಸ್ ದಾಖಲಿಸಿ, ದಂಡವನ್ನು ಸಹ ವಸೂಲಿ ಮಾಡಲಾಗುತ್ತಿದೆ.












Click it and Unblock the Notifications