ಜಾತಿ ಜನಗಣತಿ ವಿರೋಧಿಸಿ ವೀರಶೈವರ ಜಾಥಾ
ಬಾಗಲಕೋಟೆ, ಮಾ.5: ಸಂವಿಧಾನ ವಿರೋಧಿ ಜಾತಿ ಜನಗಣತಿಯನ್ನು ವಿರೋಧಿಸಿ ಹಾಗೂ ಕೇಂದ್ರದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಎಲ್ಲಾ ಲಿಂಗಾಯತ ಪಂಗಡಗಳನ್ನು ಸೇರಿಸಬೇಕೆಂದು ಆಗ್ರಹಿಸಿ ವೀರಶೈವ ಲಿಂಗಾಯತ ಯುವ ವೇದಿಕೆ ಹೋರಾಟ ನಡೆಸುತ್ತಿದೆ.
ವೀರಶೈವ ಮಠಾಧೀಶರು ಹಾಗೂ ಯುವ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ನೇತೃತ್ವದ ಕೂಡಲಸಂಗಮದಿಂದ ಬೆಂಗಳೂರಿನ ಕಡೆಗೆ ಬೃಹತ್ ಕಾಲ್ನಡಿಗೆ ಜಾಥಾ ಜಾರಿಯಲ್ಲಿದೆ. ಜಾಥಕ್ಕೆ ಬೃಹತ್ ಬೆಂಬಲ ವ್ಯಕ್ತವಾಗುತ್ತಿದೆ. [ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?]
ಮಾರ್ಚ್ 3 ರಂದು ವಿಶ್ವಗುರು ಬಸವಣ್ಣನವರು ಐಕ್ಯವಾದ ಸ್ಥಳ ಕೂಡಲಸಂಗಮದಿಂದ ಆರಂಭವಾದ ಈ ಜಾಥಾಕ್ಕೆ ಲಿಂಗಾಯತ ಪಂಚಮಸಾಲಿ ಮಹಾಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಚಾಲನೆ ನೀಡಿದರು.ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಒಟ್ಟು 703 ಕಿಮೀಗಳನ್ನು 23 ದಿನಗಳಲ್ಲಿ ಜಾಥಾ ಸಾಗಲಿದೆ. ಜಾಥಾ ಸಾಗುವ ಹಾದಿಯಲ್ಲಿ ಅಲ್ಲಲ್ಲಿ ಜನಜಾಗೃತಿ ಸಭೆ, ಚಿಂತನಗೋಷ್ಠಿ ಇನ್ನಿತರ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ.

ವೀರಶೈವ ಮಠಾಧೀಶರ ಉಪಸ್ಥಿತಿ
ಪಾಂಡೋಮಟ್ಟಿಯ ಶ್ರೀ ಗುರುಬಸವ ಸ್ವಾಮೀಜಿ, ಬುರಣಾಪುರದ ಸಿದ್ದರೂಢಾ ಆಶ್ರಮದ ಯೋಗೇಶ್ವರಿ ಮಾತಾಜೀ ಸೇರಿದಂತೆ ನಾಡಿನ ಹಲವಾರು ವೀರಶೈವ ಲಿಂಗಾಯತ ಮಠಾಧೀಶರು, ಚಿಂತಕರು ಇದರಲ್ಲಿ ಭಾಗಿಯಾಗಿದ್ದಾರೆ.

ವೀರಶೈವರ ಜಾಥಾ ಸಾಗುವ ಹಾದಿ
ಕೂಡಲ ಸಂಗಮದಿಂದ ಹೊರಟು ಬೇವೂರ, ಬಾಗಲಕೋಟೆ, ಬಾದಾಮಿ, ರೋಣ, ಅಬ್ಬಿಗೇರೆ, ಗದಗ, ಅನ್ನಿಗೆರೆ, ಹುಬ್ಬಳ್ಳಿ, ತಿಮ್ಮಾಪುರ, ಶಿಗ್ಗಾಂವಿ, ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಭರಮಸಾಗರ, ಚಿತ್ರದುರ್ಗ, ಐಮಂಗಲ, ಹಿರಿಯೂರು, ಶಿರಾ, ಸಿಬಿ, ತುಮಕೂರು, ದಾಬಸಪೇಟೆ ಕ್ರಾಸ್, ನೆಲಮಂಗಲ ಮಾರ್ಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪೂರ್ಣಗೊಳ್ಳಲಿದೆ.

ಫ್ರೀಡಂ ಪಾರ್ಕಿನಲ್ಲಿ ಬೃಹತ್ ಬಹಿರಂಗ ಸಭೆ
ಮಾರ್ಚ್ 25 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದೆ.

ಬೃಹತ್ ಬಹಿರಂಗ ಸಭೆ ಸ್ವಾಮೀಜಿಗಳ ಆಗಮನ
ನಡೆದಾಡುವ ದೇವರೆಂದೇ ಕರೆಸಿಕೊಳ್ಳುವ ಸಿದ್ದಗಂಗಾ ಮಠದ ಶ್ರೀ ಡಾ. ಶಿವಕುಮಾರಸ್ವಾಮಿಗಳು, ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಶ್ರೀ ಗದುಗಿನ ತೋಂಟದ ಸ್ವಾಮಿಗಳು, ಪಂಚಮಸಾಲಿ ಮಹಾಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು, ಪಾಂಡೋಮಟ್ಟಿಯ ಶ್ರೀ ಗುರುಬಸವ ಸ್ವಾಮೀಜಿಗಳು ಅಲ್ಲದೇ, ನಾಡಿನ ಹಲವಾರು ಮಠಾಧೀಶರು, ಚಿಂತಕರು ಹಾಗೂ ಸಮಾಜದ ಸಾಧಕರು ಭಾಗಿಯಾಗಲಿದ್ದಾರೆ.

30ಸಾವಿರಕ್ಕೂ ಹೆಚ್ಚು ಜನ ಆಗಮನ ನಿರೀಕ್ಷೆ
ಜಾತಿ ಜನಗಣತಿಯನ್ನು ವಿರೋಧಿಸಿ ಹಾಗೂ ಕೇಂದ್ರ ಎಲ್ಲಾ ಲಿಂಗಾಯತ ಉಪಪಂಗಡಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಹಕ್ಕೋತ್ತಾಯ ಮಾಡಲಾಗುವುದು.ಈ ಬಹಿರಂಗ ಸಭೆಗೆ ನಾಡಿನ ಮೂಲೆ ಮೂಲೆಯಿಂದ 30ಸಾವಿರಕ್ಕೂ ಹೆಚ್ಚು ಸಮುದಾಯದ ಬಂಧುಗಳು ಪಾಲ್ಗೊಳ್ಳಲಿದ್ದಾರೆ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಪ್ರಶಾಂತ್ ಕಲ್ಲೂರ್,ರಾಜ್ಯಾಧ್ಯಕ್ಷರು,
ವೀರಶೈವ ಲಿಂಗಾಯತ ಯುವ ವೇದಿಕೆ
ದೂ: 99721 29393 / 92424 44444












Click it and Unblock the Notifications