'ಆಂಜನೇಯ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ'
ಬೆಂಗಳೂರು, ನವೆಂಬರ್ 07 : ಹಿಂದುಳಿದ ವರ್ಗಗಳ ಆಶಾಕಿರಣ, ಅಹಿಂದ ಪರ ಎನಿಸಿಕೊಳ್ಳುವ ಸಿದ್ದರಾಮಯ್ಯನವರ ಆಪ್ತರಾದ ಎಚ್ ಆಂಜನೇಯ, ಅದೇ ಹಿಂದುಳಿದ ಬಡಮಕ್ಕಳ ಊಟದಲ್ಲೂ ಹಗರಣ ಮಾಡಿ ಹಣ ಲಪಟಾಯಿಸುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ ಎಂದು ಕರ್ನಾಟಕ ಆಮ್ ಆದ್ಮಿ ಪಾರ್ಟಿ ಕಟುವಾಗಿ ಟೀಕಿಸಿದೆ.
ಅಕ್ರಮ ಗಣಿಗಾರಿಕೆ, ಭೂ ಮಾಫಿಯಾ, ಡಿನೋಟಿಫಿಕೇಶನ್, ಬೇಲೇಕೇರಿ ಅದಿರು ಹಗರಣ, ಆಪರೇಷನ್ ಕಮಲ, ಮುಂತಾದ ಪ್ರಕರಣಗಳಿಂದ ಬೇಸತ್ತು ಕರ್ನಾಟಕದ ಜನತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ನೀಡಿದ್ದರು. ಈಗ ಅದೇ ಸಿದ್ದರಾಮಯ್ಯ ಸಂಪುಟದ, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್. ಆಂಜನೇಯರ ಪತ್ನಿ ಖಾಸಗಿ ಸುದ್ದಿ ವಾಹಿನಿ ನಡೆಸಿದ ಕುಟುಕು ಕಾರ್ಯಚರಣೆಯಲ್ಲಿ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾರೆ. [ಆಂಜನೇಯ ಪತ್ನಿಯಿಂದಲೇ ಅಕ್ಕಿ ಕಮಿಷನ್ ಡೀಲ್?]
ಸಿದ್ಧರಾಮಯ್ಯ ಈಗ ಆಪ್ ದೆಹಲಿ ಸರಕಾರದಿಂದ ಪಾಠ ಕಲಿಯಬೇಕಿದೆ. ಆಮ್ ಆದ್ಮಿ ಪಾರ್ಟಿ ಸಚಿವ ಅಮ್ಜದ್ ಖಾನ್ ವಿರುದ್ಧ ಹಗರಣ ಬಯಲಿಗೆ ಬರದಿದ್ದರೂ, ಸ್ವಯಂ ಪ್ರೇರಿತವಾಗಿ, ಭ್ರಷ್ಟಾಚಾರದ ಪ್ರಕರಣ ಮೇಲ್ನೋಟಕ್ಕೆ ಕಂಡು ಬಂದ ಕೂಡಲೇ ಪದಚ್ಯುತಿ ಗೊಳಿಸಿತ್ತು ಎಂದು ಕರ್ನಾಟಕ ಆಪ್ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದಾರೆ. [ಆಂಜನೇಯ ಭವಿಷ್ಯ- ಸಿಎಂ, ಹೈಕಮಾಂಡ್ ಕೈಲಿದೆ: ಪರಂ]

ದೆಹಲಿ ಸರಕಾರ ಮಾಡಿದ ಕೆಲಸವನ್ನು, ಕರ್ನಾಟಕ ಸರಕಾರ ಕೂಡ ಮಾಡ ಬೇಕಿದೆ. ಆಂಜನೇಯ ವಿರುದ್ದ ಈ ಮೊದಲೇ ಬೆಡ್ ಶೀಟ್ ಹಾಗೂ ದಿಂಬು ಖರೀದಿಯಲ್ಲಿ ನಡೆದ ಅವ್ಯವಹಾರದಲ್ಲೂ ಹೆಸರು ಕೇಳಿ ಬಂದಿತ್ತು. ಈಗ ಈ ಪ್ರಕರಣದಲ್ಲಿ ವೀಡಿಯೊ ಸಾಕ್ಷ್ಯಾಧಾರ ಸಾರ್ವಜನಿಕವಾಗಿ ಕೂಡ ಲಭ್ಯವಿದ್ದು ಈ ಕೂಡಲೇ ಸಿದ್ದರಾಮಯ್ಯ 'ತಮಗೆ ಈ ಬಗ್ಗೆ ಮಾಹಿತಿ ಇಲ್ಲ' ಎಂಬ ಹಾರಿಕೆ ಉತ್ತರ ನೀಡುವುದನ್ನು ಬಿಟ್ಟು ಆಂಜನೇಯರನ್ನ ಸಚಿವ ಸ್ಥಾನದಿಂದ ತಕ್ಷಣವೇ ವಜಾ ಮಾಡಬೇಕು. ಈ ಕುರಿತು ರಾಜ್ಯ ಸರಕಾರ ಭ್ರಷ್ಟಾಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮಾಡಬೇಕು ಎಂದು ಆಪ್ ಕರ್ನಾಟಕ ಆಗ್ರಹಿಸಿದೆ.
ಭ್ರಷ್ಟಾಚಾರವನ್ನು ಆಮ್ ಆದ್ಮಿ ಪಾರ್ಟಿ ಯಾವುದೇ ಕಾರಣಕ್ಕೂ ಸಹಿಸದು. ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆ ಎದುರಿಸಬೇಕಾದೀತು ಎಂದು ಮುಖ್ಯಮಂತ್ರಿಗಳಿಗೆ ಆಪ್ ಕರ್ನಾಟಕ ಎಚ್ಚರಿಸಿದೆ.












Click it and Unblock the Notifications