ಪಶ್ಚಿಮ ಘಟ್ಟ ಉಳಿಸಿ ಹೋರಾಟಕ್ಕೆ ಆಪ್ ಬೆಂಬಲ
ಬೆಂಗಳೂರು, ಜೂನ್ 3 : ಪಶ್ಚಿಮ ಘಟ್ಟ ಪರಿಸರ ಸಂರಕ್ಷಣಾ ಹೋರಾಟ ವೇದಿಕೆ ಆರಂಭಿಸಿರುವ "ಪ್ರೊ.ಮಾಧವ್ ಗಾಡ್ಗೀಳ್ ವರದಿ ಜಾರಿಗೊಳಿಸಿ ಪಶ್ಚಿಮಘಟ್ಟ ಉಳಿಸಿ" ಎಂಬ ಜನಾಂದೋಲನಕ್ಕೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದೆ. ಜೂನ್ 5ರಂದು ಫ್ರೀಡಂಪಾರ್ಕ್ ನಲ್ಲಿ ಹಮ್ಮಿಕೊಂಡಿರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕು ಎಂದು ಮನವಿ ಮಾಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಆಮ್ ಆದ್ಮಿ ಪಕ್ಷ ಕರ್ನಾಟಕ, ದೇಶದ ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಮತ್ತು ದಕ್ಷಿಣ ಭಾರತದ ಬಯಲುಸೀಮೆಯಲ್ಲಿ ವಾಸಿಸುವ ಕೋಟ್ಯಾಂತರ ಜನರ ಬದುಕು ಪಶ್ಚಿಮ ಘಟ್ಟಗಳ ಅಳಿವು ಉಳಿವಿನ ಮೇಲೆ ಅವಲಂಬಿಸಿದೆ. ಕಾವೇರಿ, ತುಂಗಭದ್ರೆ, ಕೃಷ್ಣಾ, ಗೋದಾವರಿಯಂತಹ ಪ್ರಮುಖ ನದಿಗಳ ಹುಟ್ಟು ಮತ್ತು ನೀರಿನ ಮೂಲ ಈ ಪಶ್ಚಿಮ ಘಟ್ಟಗಳಾಗಿವೆ.

ಪ್ರೊ, ಮಾಧವ್ ಗಾಡ್ಗೀಳ್ ಅವರ ನೇತೃತ್ವದ ತಂಡ ಪಶ್ಚಿಮ ಘಟ್ಟಗಳಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಮತ್ತು ಸಂರಕ್ಷಣೆಯ ಮಾರ್ಗೋಪಾಯಗಳ ಕುರಿತ ಗಂಭೀರವಾದ, ಜವಾಬ್ದಾರಿಯುತವಾದ, ವಿಸ್ತೃತವಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ 2011 ರಲ್ಲಿ ಸಲ್ಲಿಸಿದೆ. [ಏನಿದು ಪಶ್ಚಿಮ ಘಟ್ಟ ವರದಿ?]
ಆದರೆ, ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಗಾಡ್ಗೀಳ್ ವರದಿಯ ಶಿಫಾರಸುಗಳನ್ನು ಜಾರಿಗೊಳಿಸದೆ. ಉದ್ಯಮಿಗಳಿಗೆ, ಭ್ರಷ್ಟ ರಾಜಕಾರಣಿಗಳಿಗೆ ಮತ್ತು ಲಾಭಕೋರ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ಬೇರೆಬೇರೆ ಸಮಿತಿಗಳನ್ನು ನೇಮಿಸಿ ತಮಗೆ ಬೇಕಾದಂತಹ ವರದಿಯನ್ನು ತಯಾರಿಸಿಕೊಳ್ಳುತ್ತಿವೆ ಎಂದು ಪಕ್ಷ ದೂರಿದೆ.
ಅಪಾರವಾದ ವೈವಿದ್ಯಮಯ ಜೀವಸಂಕುಲದ, ನೈಸರ್ಗಿಕ ಸಂಪನ್ಮೂಲಗಳ, ನಿತ್ಯಹರಿದ್ವರ್ಣದ ಕಾಡಿನಿಂದ ತುಂಬಿರುವ ಈ ಪಶ್ಚಿಮ ಘಟ್ಟಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ದೋಚಲಾಗುತ್ತಿದೆ. ಅಲ್ಲಿಯ ಮೂಲನಿವಾಸಿಗಳ ಹಕ್ಕುಗಳನ್ನು ಕಿತ್ತುಕೊಂಡು ಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಪಕ್ಷ ಆರೋಪಿಸಿದೆ.
ಸರ್ಕಾರ ಇಂತಹ ಪ್ರಕ್ರಿಯೆನ್ನು ಮುಂದುವರೆಸಿದಲ್ಲಿ ಪಶ್ಚಿಮಘಟ್ಟಗಳು ಬೆಂಗಾಡಾಗಲಿವೆ ಮತ್ತು ನಮ್ಮ ಪ್ರಮುಖ ನದಿಗಳು ಬತ್ತಿಹೋಗಲಿವೆ. ಈ ನಿಟ್ಟಿನಲ್ಲಿ ರಾಜ್ಯದ ಹಲವಾರು ಪ್ರಜ್ಞಾವಂತ ನಾಗರಿಕರು ಮತ್ತು ಜನಪರ ಸಂಘಟನೆಗಳು "ಪಶ್ಚಿಮ ಘಟ್ಟ ಪರಿಸರ ಸಂರಕ್ಷಣಾ ಹೋರಾಟ ವೇದಿಕೆ ಆರಂಭಿಸಿರುವ ಜನಾಂದೋಲನಕ್ಕೆ ಬೆಂಬಲ ನೀಡಬೇಕು ಎಂದು ಪಕ್ಷ ಮನವಿ ಮಾಡಿದೆ.
ಸಮಿತಿ "ಪ್ರೊ.ಮಾಧವ್ ಗಾಡ್ಗೀಳ್ ವರದಿ ಜಾರಿಗೊಳಿಸಿ ಪಶ್ಚಿಮಘಟ್ಟ ಉಳಿಸಿ" ಎನ್ನುವ ಜನಾಂದೋಲನವನ್ನು ಜೂನ್ 5ರ ಗುರುವಾರದಿಂದ ಆರಂಭಿಸಲಿದ್ದು, ಅಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಳಗ್ಗೆ 9:00 ರಿಂದ ಸಂಜೆ 6 ರವರೆಗೆ ಬೃಹತ್ ಸಭೆ ಹಮ್ಮಿಕೊಂಡಿದ್ದು, ಇದಕ್ಕೆ ಪಕ್ಷ ಬೆಂಬಲ ನೀಡಲಿದೆ ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹೋರಾಟಕ್ಕೆ ಮತ್ತು ಕಾರ್ಯಕ್ರಮಕ್ಕೆ ಆಮ್ ಆದ್ಮಿ ಪಕ್ಷ ನೈತಿಕ ಬೆಂಬಲ ನೀಡುತ್ತದೆ ಮತ್ತು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತನ್ನ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಈ ಪ್ರಕಟಣೆಯ ಮೂಲಕ ಮನವಿ ಮಾಡಿದೆ.












Click it and Unblock the Notifications