ಕಳಸಾ-ಬಂಡೂರಿ ಪ್ರದೇಶಕ್ಕೆ ಗೋವಾ ತಂಡ ಭೇಟಿ, ಎಎಪಿ ಖಂಡನೆ
ಬೆಂಗಳೂರು, ಜನವರಿ 29 : ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನೇತೃತ್ವದ ನಿಯೋಗ ಕಳಸಾ-ಬಂಡೂರಿ ನಾಲಾ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ.
ಕಳಸಾ ಬಂಡೂರಿ ನಾಲಾ ಪ್ರದೇಶಕ್ಕೆ ಪರಿಶೀಲನೆಯ ನೆಪದಲ್ಲಿ ಅನಧಿಕೃತವಾಗಿ ಆಗಮಿಸಿ, ಕರ್ನಾಟಕದ ನೆಲದಲ್ಲಿಯೇ ಕನ್ನಡಿಗರಿಗೆ ಅಪಮಾನವಾಗುವಂತಹ ಹೇಳಿಕೆಗಳನ್ನು ನೀಡಿರುವುದು ಖೇದಕರ ಎಂದು ಪಕ್ಷ ಹೇಳಿದೆ.
ಕರ್ನಾಟಕ ರಾಜ್ಯ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಅನಧಿಕೃತ ಪ್ರವೇಶಗಳಿಗೆ ಕಡಿವಾಣ ಹಾಕಬೇಕು ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪಕ್ಷ ಒತ್ತಾಯಿಸಿದೆ.

ಕನ್ನಡದ ನೆಲದಲ್ಲಿಯೇ ಕನ್ನಡಿಗರನ್ನು ಹೀಗಳೆಯುವುದು ಅಲ್ಲಿನ ಸಚಿವರ ದುರಹಂಕಾರಿ ವರ್ತನೆಯನ್ನು ತೋರಿಸುತ್ತಿದೆ. ಕೂಡಲೇ ಎರಡೂ ರಾಜ್ಯ ಸರ್ಕಾರಗಳು ಮಾತುಕತೆಗೆ ಮುಂದಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಬೇಕು ಎಂದು ಪಕ್ಷ ಆಗ್ರಹಿಸಿದೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನೇತೃತ್ವದ ನಿಯೋಗ ಭಾನುವಾರ ಬೆಳಗ್ಗೆ ಬೆಳಗಾವಿ ಜಿಲ್ಲೆಯ ಕಣಕುಂಬಿ ಬಳಿಯ ಕಳಸಾ-ಬಂಡೂರಿ ನಾಲೆಗಳ ವೀಕ್ಷಣೆ ಮಾಡಿದೆ.
ಆದರೆ, ಕರ್ನಾಟಕ ಸರ್ಕಾರಕ್ಕೆ ನಿಯೋಗ ಆಗಮಿಸುವ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಗೋವಾ ನಿಯೋಗ ಬಂದು ಹೋಗಿರುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.












Click it and Unblock the Notifications