ಕರ್ನಾಟಕದ ರೈತರಿಗೆ ಉಚಿತ ಸೋಲಾರ್ ಪಂಪ್‌ಸೆಟ್ ವಿತರಿಸಿದರೆ ಭಾರೀ ಹಣ ಉಳಿತಾಯ: ಎಎಪಿ
ಬೆಂಗಳೂರು, ಅಕ್ಟೋಬರ್ 18: ಕರ್ನಾಟಕ ರಾಜ್ಯ ಸರ್ಕಾರ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವ ಬದಲಾಗಿ ನಾಡಿನ ರೈತರಿಗೆ ಉಚಿತವಾಗಿ ಸೋಲಾರ್ ಪಂಪ್ ವಿತರಿಸಿದರೆ ವಾರ್ಷಿಕ ಖರ್ಚು ಉಳಿಯಲಿದೆ ಎಂದು ಆಮ್ ಆದ್ಮಿ ಪಕ್ಷದ (AAP) ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಟಿ ನಾಗಣ್ಣ ತಿಳಿಸಿದರು.
ಬುಧವಾರ ಬೆಂಗಳೂರಿನ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರ ಪ್ರತಿವರ್ಷ 6,900 ಕೋಟಿ ರೂ. ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ ಒಟ್ಟು 34 ಲಕ್ಷ ಪಂಪ್‌ಸೆಟ್‌ಗಳಿವೆ. ಒಂದಕ್ಕೆ 4 ಲಕ್ಷ ರೂಪಾಯಿಯಂತೆ ಸೋಲಾರ್ ಪಂಪ್ ಅಳವಡಿಸಲು 1.36 ಲಕ್ಷ ಕೋಟಿ ರೂ. ಖರ್ಚಾಗುತ್ತದೆ.

ಆದ್ದರಿಂದ ಉಚಿತವಾಗಿ ಸೋಲಾರ್ ಪಂಪ್ ವಿತರಿಸಿದರೆ ರೈತರಿಗೂ ಅನುಕೂಲವಾಗಲಿದೆ. ರಾಜ್ಯ ಸರ್ಕಾರಕ್ಕೂ ಪ್ರತಿ ವರ್ಷದ ಖರ್ಚು ಉಳಿಯಲಿದೆ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.
ಇಂಧನ ಇಲಾಖೆಯಲ್ಲಿ ದೊಡ್ಡ ಮಟ್ಟದ ಹಗರಣ ನಡೆಯುತ್ತಿದೆ ಎನ್ನುವ ಅನುಮಾನ ಇದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಮ ಪ್ರಮಾಣದಲ್ಲಿ ಜಿಎಸ್‌ಟಿ ಪಡೆಯುತ್ತಿದೆ. ಆದರೆ, ರಾಜ್ಯದ ಅಭಿವೃದ್ಧಿಗೆ ಕೂಡ ಸಮನಾಗಿ ಬಂಡವಾಳ ಹಾಕಬೇಕು.
ತೆರಿಗೆ ಪಡೆಯುವವರು ಸಮಾನವಾಗಿ ಹಂಚಬೇಕು
ಸೋಲಾರ್ ಪಂಪ್‌ಸೆಟ್‌ಗೆ ಶೇಕಡಾ 30ರಷ್ಟು ಸಹಾಯಧನ ನಾವು ಕೊಡುತ್ತೇವೆ. ಶೇಕಡಾ 50ರಷ್ಟು ಸಹಾಯ ಧನವನ್ನು ರಾಜ್ಯ ಸರ್ಕಾರ ಕೊಡಲಿ ಎನ್ನುವುದು ನ್ಯಾಯವಲ್ಲ. ಟ್ಯಾಕ್ಸ್ ಮಾತ್ರ ಸಮನಾಗಿ ತೆಗೆದುಕೊಳ್ಳುವವರು, ರಾಜ್ಯಕ್ಕೆ ಕೊಡುವಾಗಲೂ ಸಮವಾಗಿ ಕೊಟ್ಟರೆ ಒಕ್ಕೂಟ ವ್ಯವಸ್ಥೆ ಉಳಿಯುತ್ತದೆ ಎಂದು ಕೇಂದ್ರ ಸರ್ಕಾರವನ್ನು ಅವರು ಟೀಕಿಸಿದರು.

ದೇಶದಲ್ಲಿ 70 ರಷ್ಟು ರೈತರಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಉಚಿತವಾಗಿ ಸೋಲಾರ್ ಪಂಪ್ ಸೆಟ್ ವಿತರಣೆ ಮಾಡಿದರೆ, ದೀರ್ಘಾವಧಿಯಲ್ಲಿ ಸರ್ಕಾರಗಳಿಗೂ ಲಾಭವಾಗಲಿದೆ. ಸರಿಯಾಗಿ ವಿದ್ಯುತ್ ಇಲ್ಲದೆ ಬೆಳೆ ನಾಶ ಆಗುತ್ತಿದೆ. ಸೋಲಾರ್ ಪಂಪ್‌ನಿಂದ ರೈತರಿಗೆ ಬೆಳೆ ಉತ್ಪಾದನೆ ಹೆಚ್ಚಾಗಲಿದೆ. ಇದು ಜಿಡಿಪಿ ಬೆಳವಣಿಗೆಗೆ ಕೂಡ ಸಹಕಾರಿಯಾಗಲಿದೆ ಎಂದರು.
ಸಿದ್ದರಾಮಯ್ಯ-ಡಿಕೆಶಿ ಭರವಸೆ ಈಡೇರಿಸಿದ್ದಾರೆಯೇ?
2013-14ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮತ್ತು ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ರಾಜ್ಯದ ರೈತರಿಗೆ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲು ಸಹಾಯ ಮಾಡುತ್ತೇವೆ. ಅವರಿಗೆ 24 ಗಂಟೆ ವಿದ್ಯುತ್ ಸಿಗುವಂತೆ ಮಾಡುತ್ತೇವೆ ಎಂದಿದ್ದರು. ಹೀಗೆ ಹೇಳಿ 10 ವರ್ಷವಾಗಿದೆ. ಆದರೆ, ಈವರೆಗೂ ರಾಜ್ಯದಲ್ಲಿ ಎಷ್ಟು ರೈತರಿಗೆ ಸೋಲಾರ್ ಪಂಪ್ ಸೆಟ್ ವಿತರಿಸಿದ್ದಾರೆ ಎಂಬುದಕ್ಕೆ ಉತ್ತರ ನೀಡಲಿ ಎಂದು ಪ್ರಶ್ನಿಸಿದರು.
ಕಣ್ಣೊರೆಸಲು ಯೋಜನೆ ತಂದ ಸರ್ಕಾರ?
ಕೇಂದ್ರ ಸರ್ಕಾರ 2017ರಲ್ಲಿ ಕುಸುಮ್ ಯೋಜನೆ ಜಾರಿ ಮಾಡಿದೆ. ಕರ್ನಾಟಕ ರಾಜ್ಯಕ್ಕೆ 10,314 ಪಂಪ್‌ಸೆಟ್ ನೀಡಿದೆ. ಶೇ 30ರಷ್ಟು ಸಬ್ಸಿಡಿ ನೀಡುತ್ತೇವೆ ಎಂದು ಹೇಳಿತ್ತು. ಇದರಲ್ಲಿ ಕೇವಲ 314 ಪಂಪ್‌ಸೆಟ್ ಮಾತ್ರ ರಾಜ್ಯದಲ್ಲಿ ವಿತರಣೆ ಆಗಿದೆ. ಜನರ ಕಣ್ಣೊರೆಸಲು ಮಾತ್ರ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ಮಾಲಿನ್ಯ ಕಡಿಮೆ ಮಾಡಬೇಕು, ನೈಸರ್ಗಿಕ ಇಂಧನ ಉತ್ಪಾದಿಸಬೇಕು ಎಂದು ಖಾಲಿ ಭಾಷಣ ಮಾಡುತ್ತಾರೆ. ಆದರೆ, ದೇಶದಲ್ಲಿ ಅಂತಹ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ತಿಳಿಸಿದರು.
ಅದಾನಿ ಗ್ರೂಪ್ ಆಸ್ಟ್ರೇಲಿಯಾದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಂಡು ದೇಶದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಪೂರೈಕೆ ಮಾಡುತ್ತಿದ್ದು, ಇದರಲ್ಲಿ 50 ಪ್ರತಿಶತ ಆದಾಯ ಗಳಿಸಿದೆ ಎಂದು ವರದಿಯಾಗಿದೆ. ಇಂತಹವರಿಗೆ ಅನುಕೂಲ ಮಾಡಿಕೊಡಲು ಗ್ರೀನ್ ಎನರ್ಜಿ ಬಗ್ಗೆ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಎಂದು ಅವರು ಆರೋಪಿಸಿದರು.












Click it and Unblock the Notifications