ಆಕ್ಸಿಜನ್ ಕೊರತೆ: ಬೆಂಗಳೂರಿನಿಂದ ಚೆನ್ನೈ ಆಸ್ಪತ್ರೆಗೆ ರೋಗಿ ಸ್ಥಳಾಂತರ!
ಬೆಂಗಳೂರು, ಏಪ್ರಿಲ್ 25: ಕೊರೊನಾವೈರಸ್ ರೋಗಿಗೆ ಅಗತ್ಯವಾದ ವೈದ್ಯಕೀಯ ಆಮ್ಲಜನಕವಿಲ್ಲದೇ ಬೆಂಗಳೂರಿನ ಆಸ್ಪತ್ರೆಯಿಂದ ರೋಗಿಯೊಬ್ಬರನ್ನು ಚೆನ್ನೈಗೆ ಸ್ಥಳಾಂತರಿಸಿದ ಘಟನೆ ಶನಿವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶುಕ್ರವಾರ ಮಹಿಳೆಯೊಬ್ಬರು ದಾಖಲಾಗಿದ್ದರು. ಈ ಆಸ್ಪತ್ರೆಯಲ್ಲಿ ಅಗತ್ಯ ಆಕ್ಸಿಜನ್ ಲಭ್ಯವಿಲ್ಲದ ಕಾರಣ ಮಹಿಳೆಯನ್ನು ಶನಿವಾರ ಆಕ್ಸಿಜನ್ ಆಂಬುಲೆನ್ಸ್ ನಲ್ಲಿ ಚೆನ್ನೈದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಬಲವಂತವಾಗಿ ಮಹಿಳೆಯನ್ನು ಆಸ್ಪತ್ರೆಯಿಂದ ಹೊರಹಾಕಲಾಯಿತೇ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಪೊಲೀಸರು ಕೂಡಾ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇದು ಕೇವಲ ಬೆಂಗಳೂರಿನ ಒಂದು ಆಸ್ಪತ್ರೆಯ ಕಥೆಯಲ್ಲಿ. ನಗರದಲ್ಲಿ ಬಹುತೇಕ ಆಸ್ಪತ್ರೆಗಳಲ್ಲೇ ಇಂಥದ್ದೇ ಪರಿಸ್ಥಿತಿ ಎದುರಿಸಲಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್-19 ರೋಗಿಗಳಿಗೆ ಹಾಸಿಗೆಯಿಲ್ಲ, ಕೆಲವು ಆಸ್ಪತ್ರೆಗಳಲ್ಲಿ ಆಮ್ಲಜನಕ ಖಾಲಿ ಆಗಿದ್ದರೆ, ಇನ್ನು ಕೆಲವು ಆಸ್ಪತ್ರೆಗಳಲ್ಲಿ ಇನ್ನೇನು ಆಕ್ಸಿಜನ್ ಖಾಲಿ ಆಗಲಿದೆ ಎನ್ನುವಂತಾ ಪರಿಸ್ಥಿತಿಯಿದೆ.

ಎರಡು ವಾರ ಆಕ್ಸಿಜನ್ ವ್ಯವಸ್ಥೆಯ ಅಗತ್ಯತೆ:
ವೈದ್ಯಕೀಯ ಆಮ್ಲಜನಕದ ವ್ಯವಸ್ಥೆ ಅಡಿ ಚಿಕಿತ್ಸೆ ಪಡೆಯದಿದ್ದರೆ ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ಮಹಿಳೆಯು "ದಿ ನ್ಯೂ ಸಂಡೇ ಎಕ್ಸ್ ಪ್ರೆಸ್" ಪತ್ರಿಕೆಗೆ ತಿಳಿಸಿದ್ದಾರೆ. ಕೊವಿಡ್-19 ಸೋಂಕಿನಿಂದ ಬಳಲುತ್ತಿರುವುದರಿಂದ ಸ್ನಾಯುಗಳಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಶ್ವಾಸಕೋಶ ತಜ್ಞರ ಸಲಹೆ ಪ್ರಕಾರ, ಎರಡು ವಾರಗಳವರೆಗೂ ಆಕ್ಸಿಜನ್ ವ್ಯವಸ್ಥೆಯಡಿ ಚಿಕಿತ್ಸೆ ಪಡೆಯಬೇಕಾದ ಅಗತ್ಯವಿದೆ ಎಂದು ಮಹಿಳೆ ತಿಳಿಸಿದ್ದಾರೆ.
ಚೆನ್ನೈ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ:
ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿದ್ದ ಮಹಿಳೆಗೆ ತಂದೆಯ ಸಹಾಯದಿಂದ ಅದೃಷ್ಟವಶಾತ್ ಚೆನ್ನೈ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಆಯಿತು. ಇದರ ಜೊತೆಗೆ ಆಕ್ಸಿಜನ್ ವ್ಯವಸ್ಥೆಯಿರುವ ಆಂಬುಲೆನ್ಸ್ ಮೂಲಕ ಚೆನ್ನೈ ಆಸ್ಪತ್ರೆಗೆ ಮಹಿಳೆಯನ್ನು ಸ್ಥಳಾಂತರಿಸಲಾಯಿತು. 6 ಗಂಟೆಗಳ ಪ್ರಯಾಣದ ಅವಧಿಯಲ್ಲಿ ಮಹಿಳೆಗೆ 2 ರಿಂದ 3 ಲೀಟರ್ ಆಮ್ಲಜನಕದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಹಿಳೆ ಆಮ್ಲಜನಕ ಶುದ್ಧತೆ ಪ್ರಮಾಣ 67ಕ್ಕೆ ಕುಸಿತ:
ಕಳೆದ ಏಪ್ರಿಲ್ 7ರಂದು ಮಹಿಳೆ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲೂ 6 ಗಂಟೆಗಳವರೆಗೂ ಕಾಯಿಸಲಾಯಿತು. ತೀವ್ರ ಅನಾರೋಗ್ಯಕ್ಕೆ ತುತ್ತಾದ ಮಹಿಳೆಯ ಆಮ್ಲಜನಕ ಶುದ್ಧತೆ ಪ್ರಮಾಣವು 67ಕ್ಕೆ ಕುಸಿದಿದ್ದು, 9 ರೆಮ್ಡೆಸಿವಿರ್ ಲಸಿಕೆಯನ್ನು ನೀಡಲಾಗಿತ್ತು. ಪ್ರತಿಬಾರಿ ನೀಡಿದ ಲಸಿಕೆಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ತರಿಸಿಕೊಳ್ಳಲಾಗಿತ್ತು. ಒಂದು ಕೋಯಂಬತ್ತೂರ್ ಮತ್ತು ಮಧುರೈನಿಂದ ತರಿಸಲಾಗಿತ್ತು ಎಂದು ಮಹಿಳೆ ಹೇಳಿದ್ದಾರೆ.












Click it and Unblock the Notifications