ಬಿಸಿಲಿನ ಹೊಡೆತಕ್ಕೆ ಕರುನಾಡು ತತ್ತರ; ಬಿಸಿಲಿನ ತಾಪಕ್ಕೆ ಮಹಿಳೆ ಸಾವು
ಯಾದಗಿರಿ, ಏಪ್ರಿಲ್ 30: 2023 ಕರ್ನಾಟಕದ ಪಾಲಿಗೆ ಅತ್ಯಂತ ದುರದೃಷ್ಟಕರ ವರ್ಷ. ಮುಂಗಾರು ಮಳೆ ಸರಿಯಾಗಿ ಬೀಳದೆ ರೈತ ರೋಸಿ ಹೋಗಿದ್ದು, ಬರ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆರಾಯನ ಆಗಮನಕ್ಕಾಗಿ ಆಕಾಶದತ್ತ ಮುಖ ಮಾಡಿ ಕುಳಿತಾ ರೈತ ಸಮುದಾಯದ ನಿರೀಕ್ಷೆ ಕಣ್ಣೀರಾಗಿ ಹೋಗಿದೆ.
ಹೌದು, ಬಿಸಿಲಿನ ಹೊಡೆತಕ್ಕೆ ಕರುನಾಡ ಜನತೆ ತತ್ತರಗೊಂಡಿದ್ದು, ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ತಾಪಮಾನದಲ್ಲಿ ಭಾರಿ ಹೆಚ್ಚಳವಾಗಿದೆ. ಅದರಲ್ಲೂ ಹೈದಾರಾಬಾದ್ ಕರ್ನಾಟಕ ಭಾಗದಲ್ಲಿ ಬಿಸಿಲಿನ ಜಳಕ್ಕೆ ನೆತ್ತಿ ಸುಡುತ್ತಿದ್ದೆ, ಮಳೆಗಾಗಿ ಜನತೆ ಕಾದು ಕುಳಿತಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಶೇ.40 ರಿಂದ ಶೇ.44 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರಕುಂದಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕ ಮಹಿಳೆಯೊಬ್ಬರು ಬಿಸಿಲಿನ ತಾಪಕ್ಕೆ ಬಲಿಯಾಗಿದ್ದಾರೆ. ಇನ್ನೂ ಮೃತರನ್ನು ಹಣಮಂತಿ (60) ಎಂದು ಗುರುತಿಸಲಾಗಿದೆ.
ಉದ್ಯೋಗ ಖಾತ್ರಿ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಮಧ್ಯಾಹ್ನ ಬಿಸಿಲಿನ ಪ್ರಮಾಣ ಹೆಚ್ಚಳವಾಗಿತ್ತು. ಮೃತ ಹಣಮಂತಿ ಅವರು ಬೆಳಗ್ಗೆ ಊಟವನ್ನೂ ಮಾಡದೇ ಕೂಲಿ ಕೆಲಸಕ್ಕೆ ಹೋಗಿ ಬಿಸಿಲನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕೂಲಿ ಕೆಲಸ ಮಾಡುತ್ತಿರುವಾಗಲೇ ಮಹಿಳೆ ಹಣಮಂತಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಅವರಿಗೆ ನೀರನ್ನು ಕುಡಿಸಿ ಆಸ್ಪತ್ರೆಗೆ ಸೇರಿಸುವ ಮುನ್ನವೇ ಕಾರ್ಮಿಕ ಮಹಿಳೆ ಹಣಮಂತಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಹಲವು ಜಿಲ್ಲೆಗಳಲ್ಲಿ 40.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ!
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ 40ರ ಮೇಲೆಯೇ ಏರಿಕೆಯಾಗುತ್ತಿದೆ. ರಾಯಚೂರಿನಲ್ಲಿ 43.0 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಕಲಬುರಗಿ, ಬಾಗಲಕೋಟೆ, ತುಮಕೂರು, ಕೋಲಾರ ಸೇರಿದಂತೆ ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಉಷ್ಣ ಅಲೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 2ರವರೆಗೆ ಈಗಿರುವುದಕ್ಕಿಂತ ಹೆಚ್ಚುವರಿಯಾಗಿ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಐದು ದಿನಗಳವರೆಗೆ ಬಾಗಲಕೋಟೆ, ಕಲಬುರಗಿ, ಬೆಳಗಾವಿ, ಯಾದಗಿರಿ ಸೇರಿದಂತೆ ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಿನ ಬಿಸಿಲಿನ ವಾತಾವರಣವಿರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ರಾಯಚೂರಿನಲ್ಲಿ 43.0 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ,ವಿಜಯಪುರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications