ಕಳ್ಳರಿಂದ ತಪ್ಪಿಸಿಕೊಳ್ಳಲು ಹೋಗಿ ದುರಂತ ಅಂತ್ಯ ಕಂಡ ಮಹಿಳೆ
ಕಳ್ಳರಿಂದ ತಪ್ಪಿಸಿಕೊಳ್ಳಲು ಹೋಗಿ ಮಹಿಳೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕರ್ನಾಟಕದ ಬೆಳಗಾವಿಯಲ್ಲಿ ನಡೆದಿದೆ. ಮನೆಗೆ ಕಳ್ಳರು ಬಂದರು ಅವರಿಂದ ತಪ್ಪಿಸಿಕೊಳ್ಳಬೇಕು ಎನ್ನುವ ಆತಂಕದಲ್ಲಿದ್ದ ಮಹಿಳೆ, ಓಡುವ ವೇಗದಲ್ಲಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಬೆಳಗಾವಿಯ ಶಿಂದೋಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ಹಿನ್ನೆಲೆ ಏನು: ಮನೆಗೆ ಬಂದ ಕಳ್ಳನಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಇಲ್ಲಿನ ಬೆಳಗಾವಿ ತಾಲ್ಲೂಕಿನ ಶಿಂದೋಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಮನೆಯಲ್ಲಿ ಕಳ್ಳತನ ಮಾಡಲು ಕಳ್ಳರು ಬಂದಿದ್ದು, ಅವರಿಂದ ತಪ್ಪಿಸಿಕೊಳ್ಳಲು ಹೋಗಿ ಕೊಳ್ಳ (ಆಳವಾದ ನೀರಿನ ಪ್ರದೇಶ)ದಲ್ಲಿ ಬಿದ್ದು ಮಹಿಳೆ ಸಾವನ್ನಪಿದ್ದಾರೆ. ಮೃತಪಟ್ಟವರನ್ನು ಭರಮಕ್ಕಾ ಪೂಜಾರಿ ಎಂದು ಗುರುತಿಸಲಾಗಿದೆ. ಭರಮಕ್ಕಾ ಅವರ ಮನೆಗೆ ಗುರುವಾರ ತಡರಾತ್ರಿ ಕಳ್ಳರು ನುಗ್ಗಿದ್ದಾರೆ. ಈ ವೇಳೆ ಕಳ್ಳರಿಂದ ತಪ್ಪಿಸಿಕೊಳ್ಳಲು ಭರಮಕ್ಕಾ ಓಡಿದ್ದಾರೆ. ಆದರೆ, ಈ ರೀತಿ ಓಡುವಾಗ ಕೊಳ್ಳದಲ್ಲಿ ಜಾರಿ ಬಿದಿದ್ದಾರೆ. ಈಜಿ ಹೊರಗೆ ಬರಲಾಗದೆ ಸಾವನ್ನಪ್ಪಿದ್ದಾರೆ. ಗುರುವಾರ ತಡರಾತ್ರಿ ಮನೆಗೆ ಕಳ್ಳರು ನುಗ್ಗಿರುವುದು ತಿಳಿಯುತ್ತಿದ್ದಂತೆಯೇ ಮನೆಯ ಹಿತ್ತಲು (ಹಿಂಬಾಗಿಲು) ಬಾಗಿಲಿನಿಂದ ಹೊರಕ್ಕೆ ಬಂದಿದ್ದರು. ಆದರೆ, ಕಳ್ಳರಿಂದ ತಪ್ಪಿಸಿಕೊಳ್ಳುವ ಆತಂಕದಲ್ಲಿ ಕೊಳ್ಳದಲ್ಲಿ ಜಾರಿ ಬಿದಿದ್ದಾರೆ. ತಡರಾತ್ರಿ ಹಿನ್ನೆಲೆಯಲ್ಲಿ ಯಾರು ಸಹಾಯಕ್ಕೆ ಬಂದಿಲ್ಲ.

ಸ್ಥಳದಲ್ಲಿ ಜಮಾಯಿಸಿದ ಜನ: ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಈ ಸ್ಥಳದಲ್ಲಿ ಸೇರಿದ್ದು ಕಂಡುಬಂತು. ಮೃತದೇಹವನ್ನು ಪೊಲೀಸರು ಹಾಗೂ ಸ್ಥಳೀಯರು ಸೇರಿ ಹೊರಕ್ಕೆ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಇಲ್ಲಿನ ಬಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಣಿ ಬೈಕ್ ಕಳ್ಳತನ: 2 ಮಹಿಳೆಯರು ಸೇರಿ 5 ಜನ ಬಂಧನ
ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿ ಸರಣಿ ಬೈಕ್ ಕಳ್ಳತನ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐದು ಜನರನ್ನು ಬಂಧಿಸಲಾಗಿದ್ದು, ಬಂಧಿತರಿಂದ ಬರೋಬ್ಬರಿ 6 ಲಕ್ಷ ರೂಪಾಯಿ ಮೌಲ್ಯದ 12 ವಿವಿಧ ಕಂಪನಿಯ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕುಮಾರ್ ತಿಳಿಸಿದ್ದಾರೆ.
ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಕೇಶ್ವಾಪೂರದ ರೇಷ್ಮಾ ಗುಡಗೇರಿ, ಗದಗಿನ ಆಸ್ಮಾಬಾನು ಬಾಗವಾನ್ ಉರ್ಪ್ ಮುಲ್ಲಾ, ರಾಮನಗರದ ರವಿ ಉರ್ಪ್ ನೀಲೆಶ್ ಬಣಸೋಡೆ, ಗದಗಿನ ಮುಬಾರಕ್ ಬಾಗವಾನ್, ಹುಬ್ಬಳ್ಳಿಐ ಕೆ.ಕೆ ನಗರದ ದಸ್ತಗೀರ್ ಧಾರವಾಡ
ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳು ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಿರುವುದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಸದ್ಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 7 ಕೇಶ್ವಾಪೂರ ಠಾಣೆಯಲ್ಲಿ 3, ಹುಬ್ಬಳ್ಳಿ ಉಪನಗರ ಹಾಗೂ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತರಿಂದ 6 ಲಕ್ಷ ರೂ. ಮೌಲ್ಯದ 10 ವಿವಿಧ ಕಂಪನಿಯ ಸ್ಕೂಟಿಗಳು ಹಾಗೂ 2 ಬೈಕ್ ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿ ದಾಖಲಾದ ಪ್ರಕರಣಗಳನ್ನು ಪತ್ತೆ ಮಾಡುವಾಗ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯರು ಕಳ್ಳತನ ಮಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆಯ ಮೂಲಕ ಆರೋಪಿತರು ಬೈಕ್ ಕಳ್ಳತನ ಮಾಡುತ್ತಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ್ ನಾಯಕ್, ವಿದ್ಯಾನಗರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಜಯಂತ ಗೌಳಿ, ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.












Click it and Unblock the Notifications