ಒಂದಲ್ಲ..ಎರಡಲ್ಲ..ಸಂಕ್ರಾಂತಿ ಹಬ್ಬದ ದಿನವೇ ಸಾಲು ಸಾಲು ಅಪಘಾತ: ಕಾರಣವೇನು..?
ಬೆಂಗಳೂರು, ಜನವರಿ 15: ದೇಶದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬ ಸಂಭ್ರಮ ಮನೆ ಮಾಡಿದ್ದರೆ, ಕರ್ನಾಟಕದಲ್ಲಿ ಹಬ್ಬದ ದಿನವೇ ಸಾಲು ಸಾಲು ಅಪಘಾತಗಳು ಸಂಭವಿಸಿದೆ. ರಸ್ತೆ ದಾಟುತ್ತಿದ್ದ ವೇಳೆ ಲಾರಿ ಹರಿದು ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆ. ಅಯ್ಯನಹಳ್ಳಿ ಗ್ರಾಮದಲ್ಲಿ ನಡೆದಿದೆ. ವರ್ಷಣಿ( 4) ಮೃತ ಬಾಲಕಿ ಎಂದು ಗುರುತಿಸಲಾಗಿದೆ.
ಅಯ್ಯನಹಳ್ಳಿ ಗ್ರಾಮದ ವರ್ಷಣಿ ತಾಯಿ ಜೊತೆಗೆ ರಸ್ತೆ ಬಳಿ ನಿಂತಿದ್ದಳು. ಬಳಿಕ ತಾಯಿ ಜೊತೆ ರಸ್ತೆ ದಾಟಲು ಮುಂದಾಗಿದ್ದಾಳೆ. ಇದೇ ವೇಳೆ ಲಾರಿ ಅದೇ ಮಾರ್ಗವಾಗಿ ಬಂದಿದ್ದು, ಚಾಲಕನ ಅಜಾಗರೂಕತೆಯಿಂದ ಬಾಲಕಿ ಮೇಲೆ ಲಾರಿ ಹರಿದಿದೆ. ಘಟನೆಯಲ್ಲಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ಘಟನಾ ಸ್ಥಳಕ್ಕೆ ಕೊಟ್ಟೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರ: ರಸ್ತೆಗೆ ಉರುಳಿದ ಕಾರು, ಯುವಕ ಸಾವು
ಚಿಕ್ಕಬಳ್ಳಾಪುರ: ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಕಾರು ರಸ್ತೆ ಬದಿ ಉರುಳಿ ಬಿದ್ದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಡಿಕೆರೆ ಕ್ರಾಸ್ ಬಳಿ ನಡೆದಿದೆ. ಕಾರು ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಚಿರಾಗ್ (26) ಎನ್ನುವಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಶ್ರೀನಿವಾಸಪುರ ಮೂಲದ ನಿವಾಸಿಯಾಗಿರುವ ಚಿರಾಗ್ ಅಪಾಯಕಾರಿ ಕಾರು ಚಾಲನೆಯಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮತ್ತೊಬ್ಬ ಯುವಕ ಪ್ರವೀಣ್ ಎಂಬಾತ ಗಂಭೀರ ಗಾಯಗೊಂಡಿದ್ದು, ಕೂಡಲೇ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಭೀಕರ ಅಪಘಾತ: ಯುವಕ ಸ್ಥಳದಲ್ಲೇ ಸಾವು
ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಘಟನೆ ಬಾಣಸವಾಡಿ ಸಮೀಪದ ಸಿಎಂಆರ್ ರೋಡ್ನಲ್ಲಿ ನಡೆದಿದೆ. ಅಪಘಾತದಲ್ಲಿ ಮೆಲ್ವಿನ್ ಜೋಸ್ವಾ (25) ಎನ್ನುವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಿನ್ನೆ ತಡರಾತ್ರಿ ರಾತ್ರಿ 2:30 ಸುಮಾರಿಗೆ ಬಾಣಸವಾಡಿ ಸಮೀಪದ ಸಿಎಂಆರ್ ರಸ್ತೆಯಲ್ಲಿ ಮೆಲ್ವಿನ್ ಜೋಸ್ವಾ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ನಿಯಂತ್ರಣ ತಪ್ಪಿದ ಕಾರು ಮೊದಲು ಮರಕ್ಕೆ ಡಿಕ್ಕಿ ಹೊಡೆದಿದೆ. ನಂತರ ಪಾರ್ಕ್ ಮಾಡಲಾಗಿದ್ದ ಮತ್ತೊಂದು ಕಾರಿಗೆ ಗುದ್ದಿ, ಬಳಿಕ ಕಾಪೌಂಡ್ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಬ್ಬದ ದಿನವೇ ಚಾಮರಾಜನಗರದಲ್ಲಿ ಜವರಾಯನ ಅಟ್ಟಹಾಸ
ಚಾಮರಾಜನಗರ: ಸಂಕ್ರಾತಿ ಹಬ್ಬದ ಸಡಗರದ ನಡುವೆ ಜವರಾಯ ಅಟ್ಟಹಾಸ ಮೆರೆದಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಕೊಳ್ಳೇಗಾಲ ಪಾಳ್ಯ ಗ್ರಾಮದ ಸಂತೋಷ(32) , ಸೌಮ್ಯ(27) ಅಭಿ (9) ಹಾಗೂ ಸಾಕ್ಷಿ(4) ಮೃತಪಟ್ಟ ದುರ್ದೈವಿಗಳು.
ಸಂಕ್ರಾಂತಿ ಹಬ್ಬಕ್ಕೆಂದು ಬಟ್ಟೆ ತರಲು ಕೊಳ್ಳೇಗಾಲಕ್ಕೆ ಸಂತೋಷ್ ಕುಟುಂಬ ಬೈಕ್ ನಲ್ಲಿ ತೆರಳುತ್ತಿದ್ದಾಗ ಜಿನಕನಹಳ್ಳಿ ಸಮೀಪ ಭತ್ತ ಕತ್ತರಿಸುವ ಯಂತ್ರ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ನಿಂದ ನಾಲ್ವರು ಕೆಳಕ್ಕೆ ಬಿದ್ದಿದ್ದು ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ. ಬಾಲಕ ಗಂಭೀರ ಗಾಯಗೊಂಡಿದ್ದು, ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications