ಚಿಕ್ಕಮಗಳೂರಿನಲ್ಲಿ ಪುರಾತನ ಜೈನ ವಿಗ್ರಹ ಕಳವು
ಚಿಕ್ಕಮಗಳೂರು, ಫೆ.1 : ಚಿಕ್ಕಮಗಳೂರಿನಲ್ಲಿ ಇತಿಹಾಸ ಪ್ರಸಿದ್ಧ ಜೈನ ವಿಗ್ರಹಗಳನ್ನು ಕಳುವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೂಡುಬಿದರೆಯ ಜೈನ ಬಸದಿಯ ವಿಗ್ರಹ ಕಳವು ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಈ ಘಟನೆ ವರದಿಯಾಗಿದೆ.
ಶನಿವಾರ ಬೆಳಗ್ಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದಲ್ಲಿರುವ ತ್ರಿಕೂಟ ಜೈನ ಬಸದಿಯಲ್ಲಿದ್ದ ಸುಮಾರು 900 ವರ್ಷಗಳ ಇತಿಹಾಸವಿರುವ 9 ಜೈನ ವಿಗ್ರಹಗಳನ್ನು ದುಷ್ಕರ್ಮಿಗಳು ಕಳವು ಮಾಡಿರುವ ಪಕ್ರರಣ ಬೆಳಕಿಗೆ ಬಂದಿದೆ.

ಶುಕ್ರವಾರ ರಾತ್ರಿ ಜೈನ ಬಸದಿ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ಮಹಾವೀರ ತೀರ್ಥಂಕರ ವಿಗ್ರಹ, ನೇಮಿನಾಥ ಹಾಗೂ ಪಾಶ್ವನಾಥ ವರ್ಧಮಾನರ ಮೂರ್ತಿ ಸೇರಿದಂತೆ 9 ಮೂರ್ತಿಗಳನ್ನು ಕಳ್ಳತನ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಸ್ಥಳೀಯರು ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶ್ವಾನದಳದೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ ಮೂಡುಬಿದಿರೆಯ ಸಿದ್ಧಾಂತ ಮಂದಿರದಿಂದ 12 ಅಮೂಲ್ಯ ಜೈನ ವಿಗ್ರಹಗಳನ್ನು ಕಳವು ಮಾಡಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ನಂತರ ವಿಗ್ರಹಗಳನ್ನು ಅನಾಮಿಕ ವ್ಯಕ್ತಿಗಳು ಪೊಲೀಸರಿಗೆ ಪೋಸ್ಟ್ ಮೂಲಕ ಕಳುಹಿಸಿದ್ದರು. ಈ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಚಿಕ್ಕಮಗಳೂರಿನಲ್ಲಿ ಮತ್ತೊಮ್ಮೆ ಬಸದಿಯಲ್ಲಿದ್ದ ವಿಗ್ರಹಗಳನ್ನು ದೋಚಲಾಗಿದೆ. [ಮೂಡುಬಿದಿರೆ ಪ್ರಕರಣ]
ಅಂಗಡಿ ಗ್ರಾಮದಲ್ಲಿದ್ದ ಜೂನ ಬಸದಿಗೆ ಸರಿಯಾದ ಭದ್ರತಾ ವ್ಯವಸ್ಥೆ ಇರಲಿಲ್ಲ ಎಂಬುದನ್ನು ಅರಿತವರೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.












Click it and Unblock the Notifications